ನ್ಯಾಯಾಂಗ ಬಂಧನಕ್ಕೆ ಡಿ.ಕೆ.ಶಿವಕುಮಾರ

ನ್ಯಾಯಾಂಗ ಬಂಧನಕ್ಕೆ ಡಿ.ಕೆ.ಶಿವಕುಮಾರ

ಪ್ರಗತಿವಾಹಿನಿ ಸುದ್ದಿ, ನವದೆಹಲಿ – ಮಾಜಿ ಸಚಿವ, ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ ಅವರ ಜಾಮೀನು ಅರ್ಜಿ ವಿಚಾರಣೆ ಮುಂದಕ್ಕೆ ಹೋಗಿದ್ದು, ಅವರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ಮಂಗಳವಾರ ಆಸ್ಪತ್ರೆಯಿಂದ ನ್ಯಾಯಾಲಯಕ್ಕೆ ಡಿ.ಕೆ.ಶಿವಕುಮಾರ ಅವರನ್ನು ಇಡಿ ಅಧಿಕಾರಿಗಳು ವಿಚಾರಣೆಗೆ ಕರೆತಂದಿದ್ದರು. ವಿಚಾರಣೆ ನಡೆಸಿದ ನಂತರ ಅವರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲು ನಿರ್ಧರಿಸಲಾಗಿದ್ದು, ಅದಕ್ಕೂ ಮೊದಲು ಆಸ್ಪತ್ರೆಗೆ ಕರೆದೊಯ್ದು ಆರೋಗ್ಯ ತಪಾಸಣೆ ನಡೆಸುವಂತೆ ಸೂಚಿಸಲಾಗಿದೆ.

ಬುಧವಾರ ಮಧ್ಯಾಹ್ನ 3 ಗಂಟೆಗೆ ಪುನಃ ವಿಚಾರಣೆ ಮುಂದುವರಿಯಲಿದ್ದು, ಅಲ್ಲಿಯವರೆಗೆ ಡಿ.ಕೆ.ಶಿವಕುಮಾರ ಎಲ್ಲಿರಬೇಕು ಎನ್ನುವುದನ್ನು ವೈದ್ಯರು ನಿರ್ಧರಿಸಲಿದ್ದಾರೆ. ಒಂದೊಮ್ಮೆ ಆಸ್ಪತ್ರೆಯಲ್ಲಿರಬೇಕಾದ ಅವಶ್ಯಕತೆ ಇಲ್ಲ ಎಂದಾದರೆ ಅವರನ್ನು ತಿಹಾರ್ ಜೈಲಿಗೆ ಕರೆದೊಯ್ಯುವ ಸಾಧ್ಯತೆ ಇದೆ.

ಡಿ.ಕೆ.ಶಿವಕುಮಾರ ಅವರ ಬಳಿ ಅಪಾರ ಪ್ರಮಾಣದಲ್ಲಿ ಹಣ ಸಿಕ್ಕಿದೆ. ಅದನ್ನು ಹೂಡಿರುವುದೂ ಪತ್ತೆಯಾಗಿದೆ. ಆದರೆ ಅದರ ಮೂಲ ಇನ್ನೂ ಸಿಗುತ್ತಿಲ್ಲ. ಹಾಗಾಗಿ ವಿಚಾರಣೆ ಮುಂದುವರಿಸಬೇಕಾಗಿದ್ದು, ಅವರಿಗೆ ಜಾಮೀನು ನೀಡಬಾರದು  ಎಂದು ಇಡಿ ಪರ ವಕೀಲರು ವಾದಿಸಿದರು.  ಒಟ್ಟಾರೆ ದಿನದಿಂದ ದಿನಕ್ಕೆ ಪ್ರಕರಣ ಇನ್ನಷ್ಟು ಬಿಗಿಯಾಗುತ್ತಿದೆ.

9 ಜನರಿಗೆ ನೊಟೀಸ್ ಜಾರಿ 

ಈ ಮಧ್ಯೆ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ, ಮಹಿಳಾ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳಕರ್ ಸೇರಿದಂತೆ 9 ಜನರಿಗೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ನೊಟೀಸ್ ಜಾರಿಮಾಡಿದೆ.

ಡಿ.ಕೆ.ಶಿವಕುಮಾರ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಎಲ್ಲರನ್ನೂ ವಿಚಾರಣೆಗೆ ಕರೆಯಲಾಗುತ್ತಿದ್ದು, ಗುರುವಾರ ವಿಚಾರಣೆಗೆ ಬರುವಂತೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರಿಗೆ ನೊಟೀಸ್ ನೀಡಲಾಗಿದೆ. ವಿಚಾರಣೆಗೆ ಹಾಜರಾಗುವುದಾಗಿ ಹೆಬ್ಬಾಳಕರ್ ಪ್ರಗತಿವಾಹಿನಿಗೆ ತಿಳಿಸಿದ್ದಾರೆ.

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button