ಪ್ರಗತಿವಾಹಿನಿ ಸುದ್ದಿ: ಮತದಾರರಿಗೆ ಬೆದರಿಕೆ ಹಾಕಿರುವ ಮತ್ತು ಆಮಿಷವೊಡ್ಡಿರುವ ಆರೋಪದಲ್ಲಿ ತಮ್ಮ ವಿರುದ್ಧ ಬೆಂಗಳೂರಿನ ಆರ್ಎಂಸಿ ಯಾರ್ಡ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿರುವುದನ್ನು ಪ್ರಶ್ನಿಸಿ ಡಿಸಿಎಂ ಡಿಕೆ ಶಿವಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಪರ ರಾಜರಾಜೇಶ್ವರಿ ನಗರದ ಅಪಾರ್ಟ್ಮೆಂಟೊಂದರಲ್ಲಿ ಮತಯಾಚನೆ ಮಾಡಿದ್ದ ಡಿಕೆ ಶಿವಕುಮಾರ್ ಮತದಾರರಿಗೆ ಬೆದರಿಕೆ ಹಾಕಿ ಅವರನ್ನು ಬ್ಲ್ಯಾಕ್ಮೇಲ್ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು. ಅದಕ್ಕೆ ಸಂಬಂಧಿಸಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, ಆ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.
ಆದರೆ, ರಾಜರಾಜೇಶ್ವರಿ ನಗರದ ಅಪಾರ್ಟ್ಮೆಂಟೊಂದರಲ್ಲಿ ಮತಯಾಚನೆ ಮಾಡಲು ತೆರಳಿದ್ದ ಡಿಕೆ ಶಿವಕುಮಾರ್, ನಾನು ಇಲ್ಲಿಗೆ ಬ್ಯುಸಿನೆಸ್ ಡೀಲ್ ಮಾಡಲು ಬಂದಿದ್ದೇನೆ. ನಿಮಗೆ ಅಪಾರ್ಟ್ಮೆಂಟ್ ಪಕ್ಕದ ಸಿಎ ಸೈಟ್ ಬೇಕೆಂದು ಕೇಳಿದ್ದೀರಿ. ನೀವು ನಮಗೆ ಮತ ಹಾಕಿದ 2-3 ತಿಂಗಳಲ್ಲಿ ನಿಮಗೆ ಹಸ್ತಾಂತರಿಸುವ ವ್ಯವಸ್ಥೆ ಮಾಡುತ್ತೇನೆ ಎಂದು ಆಮಿಷವೊಡ್ಡಿದ್ದರು ಎಂದು ಬಿಜೆಪಿ ಆರೋಪಿಸಿತ್ತು.
ಕಾವೇರಿ ನೀರು ಸಂಪರ್ಕ ದೊರೆಯದಿರುವುದು ನಿಮ್ಮ ಇನ್ನೊಂದು ಸಮಸ್ಯೆ. ಈ ಎರಡೂ ಸಮಸ್ಯೆಗಳನ್ನು ಬಗೆಹರಿಸಿಕೊಟ್ಟರೆ ನೀವೇನು ಕೊಡುತ್ತೀರಿ? ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಆಡಳಿತ, ಜಲ ಸಂಪನ್ಮೂಲ ಖಾತೆ ಎಲ್ಲವೂ ನನ್ನ ಕೈಯಲ್ಲೇ ಇದೆ. ಹೀಗಾಗಿ ನಾನೇ ಈ ಕೆಲಸವನ್ನು ನಿಮಗೆ ಮಾಡಿಕೊಡಬೇಕಾಗುತ್ತದೆ ಎಂದು ಡಿಕೆ ಶಿವಕುಮಾರ್ ಮತದಾರರನ್ನು ಉದ್ದೇಶಿಸಿ ಹೇಳಿರುವುದು ಬಿಜೆಪಿ ಟ್ವೀಟ್ ಮಾಡಿದ ವಿಡಿಯೋದಲ್ಲಿ ಕಂಡುಬಂದಿತ್ತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ