.ಪ್ರಗತಿವಾಹಿನಿ ಸುದ್ದಿ, ಮುದ್ದೇಬಿಹಾಳ – ಶನಿವಾರ ಮುದ್ದೇಬಿಹಾಳ ತಾಲ್ಲೂಕಿನ ಕಮಲದಿನ್ನಿ ಗ್ರಾಮದ ಭೇಟಿ ವೇಳೆ ವಿಜಯಪುರ ಜಿಲ್ಲೆಯ ಉಸ್ತುವಾರಿ ಹಾಗೂ ಮುಜರಾಯಿ, ಹಜ್ ಮತ್ತು ವಕ್ಫ್ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆ, ದಯನೀಯ ಸ್ಥಿತಿಯಲ್ಲಿರುವ ಅಜ್ಜಿಯೊಬ್ಬರನ್ನು ಭೇಟಿ ಮಾಡಿದರು.
ಸುಮಾರು 80 ವರ್ಷದ ಆಸುಪಾಸಿನ ಹನುಮವ್ವ ಸಂಗಪ್ಪ ಕಾಶೀಬಾಯಿ ಎಂಬ ಅಜ್ಜಿಯ ಪಾಲನೆ ಮಾಡಬೇಕಿದ್ದ ಮಕ್ಕಳು, ಮೊಮ್ಮಕ್ಕಳೆಲ್ಲಾ ಮನೆಯಲ್ಲಿ ಬಡತನವಿರುವ ಕಾರಣ ದೂರದೂರಿಗೆ ಕೆಲಸಕ್ಕೆ ಹೋಗಿದ್ದಾರೆ.
“ಅಜ್ಜಿಯ ಸಂಕಷ್ಟ ನೋಡಿ ನಿಜಕ್ಕೂ ಕಣ್ತುಂಬಿ ಬಂತು. ಎಲ್ಲರಿದ್ದೂ ಇಲ್ಲದಂತಿರುವ ಈ ಒಂಟಿ ಹಿರಿ ಜೀವಕ್ಕೆ ಆಸರೆಯಾಗಿರುವ ನದಿ ತೀರದಲ್ಲಿರುವ ಆ ಮನೆ ಕೂಡ ಬೀಳುವ ಹಂತಕ್ಕೆ ತಲುಪಿದೆ. ಅಜ್ಜಿಯ ನೋವಿನ ಮಾತು, ಅಲ್ಲಿನ ಸ್ಥಿತಿ ನೋಡಿ ಮನಸ್ಸು ಭಾರವಾಯಿತು” ಎಂದಿದ್ದಾರೆ ಜೊಲ್ಲೆ.
“ನಾನು ನಿಮ್ಮ ಮಗಳಂತೆ” ಎಂದು ನೊಂದ ಜೀವಕ್ಕೆ, ಸ್ಥಳದಲ್ಲಿಯೇ ವೈಯುಕ್ತಿಕವಾಗಿ ಹಣಕಾಸಿನ ನೆರವು ನೀಡಿ, ಧೈರ್ಯ ತುಂಬಿದರು. ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯವನ್ನು ಅವರಿಗೆ ತಕ್ಷಣ ನೀಡಿ ಎಂದು ಅಧಿಕಾರಿಗಳಿಗೆ ಆದೇಶಿಸಿದ ಜೊಲ್ಲೆ, ಅದನ್ನು ಅವರು ಪಡೆದಿರುವ ಬಗ್ಗೆ ಕೂಡ ವರದಿ ನೀಡುವಂತೆ ಸೂಚನೆ ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ