Kannada NewsKarnataka News

16 ಗಂಟೆ ಸಭೆ ಬಳಿಕ ಡಿಸಿ, ಸಿಇಒಗಳಿಗೆ ಸಿದ್ದರಾಮಯ್ಯ ಮಾಡಿದ ಪಾಠ ಏನು ಗೊತ್ತೇ?

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಮಂಗಳವಾರ ಮತ್ತು ಬುಧವಾರ ತಲಾ 8 ಗಂಟೆಗಳ ಕಾಲ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಚಿವಸಂಪುಟದ ಸಹೋದ್ಯೋಗಿಗಳ ಜೊತೆ ಕುಳಿತು ಇಡೀ ರಾಜ್ಯದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಸಿಇಒಗಳ ಸಭೆ ನಡೆಸಿದರು.

  • ಮಂಗಳವಾರ 8 ಗಂಟೆ ಸಭೆ ನಡೆಸಿದ್ದ ಸಿಎಂ, ಬುಧವಾರ ಪುನಃ ನಡೆದ ಸತತ 8 ಗಂಟೆಗಳ ಸಭೆಯ ಕೊನೆಯಲ್ಲಿ ಆಡಿದ ಮಾತುಗಳು ಹೀಗಿವೆ…*

*ಮೂರು ತಿಂಗಳ ನಂತರ ಮತ್ತೆ ಸಭೆ ಕರೆಯುತ್ತೇವೆ. ಅಷ್ಟರಲ್ಲಿ ಈ ಎರಡು ದಿನಗಳ ಕಾಲ ಇಲ್ಲಿ ಕೈಗೊಂಡ ನಿರ್ಣಯಗಳು ಹಾಗೂ ಚರ್ಚೆಗಳ ಕುರಿತು ತೆಗೆದುಕೊಂಡ ಕ್ರಮಗಳ ಬಗ್ಗೆ ಮುಂದಿನ ಸಭೆಯಲ್ಲಿ ಪರಿಶೀಲನೆ ಮಾಡಲಾಗುವುದು* 

*ಅಧಿಕಾರಿಗಳು ನೀಡಿರುವ ಸಲಹೆಗಳನ್ನು, ಅಭಿಪ್ರಾಯಗಳನ್ನು ಗಂಭೀರವಾಗಿ ಪರಿಗಣಿಸಿದ್ದೇವೆ* 

*ಜಿಲ್ಲಾಧಿಕಾರಿಗಳು, ಸಿ.ಇ.ಓ. ಗಳು ಮನಸು ಮಾಡಿದರೆ ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಆಡಳಿತಾತ್ಮಕವಾಗಿ ರಾಜ್ಯದ ಚಿತ್ರಣವನ್ನೇ ಬದಲಿಸಲು ಸಾಧ್ಯ* 

*ಜಿಲ್ಲಾಧಿಕಾರಿಗಳು ಜಿಲ್ಲೆಯ ಆಡಳಿತದ ಮುಖ್ಯಸ್ಥರು. ಸಿ.ಇ.ಓ ಗಳು ಜಿಲ್ಲಾ ಪಂಚಾಯತ್‌ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವುದರಿಂದ ಬಹಳ ಪರಿಣಾಮಕಾರಿ ಬದಲಾವಣೆ ಮಾಡಲು ಸಾಧ್ಯವಿದೆ* 

*ಐದು ಗ್ಯಾರಂಟಿ ಯೋಜನೆಗಳಿಗೆ ಈ ವರ್ಷ 32 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಇದರೊಂದಿಗೆ ವಿವಿಧ ಸಾಮಾಜಿಕ ಭದ್ರತಾ ಯೋಜನೆ ಸೇರಿದರೆ ಒಬ್ಬರಿಗೆ 80 ಸಾವಿರ ರೂ. ನೀಡಲಾಗುತ್ತಿದೆ* 

*ಅನ್ನಭಾಗ್ಯ ಯೋಜನೆಯಡಿ ಹಣ ನೀಡಲಾಗುತ್ತಿದೆ. ಆಗಸ್ಟ್‌ ತಿಂಗಳಲ್ಲಿ 600 ಕೋಟಿಗೂ ಹೆಚ್ಚು ಹಣ ನೀಡಲಾಗಿದೆ* 

*ಗೃಹ ಲಕ್ಷ್ಮಿ ಯೋಜನೆಯಡಿ 1.26 ಕೋಟಿ ಕುಟುಂಬಗಳಿಗೆ 2,000 ರೂ. ನೀಡಲಾಗುತ್ತಿದೆ. ಸಾಮಾಜಿಕ ಮತ್ತು ಆರ್ಥಿಕ ಶಕ್ತಿ ತುಂಬಲು ಈ ಯೋಜನೆಗಳ ಜಾರಿ ಮಾಡಲಾಗುತ್ತಿದೆ* 

*ಜನರ ಕೊಂಡುಕೊಳ್ಳುವ ಶಕ್ತಿ ಹೆಚ್ಚಾಗುತ್ತದೆ. ಇದರಿಂದ ಆರ್ಥಿಕ ಚಟುವಟಿಕೆ ಹೆಚ್ಚಾಗುತ್ತದೆ. ವಾರ್ಷಿಕ ವರಮಾನ ಹೆಚ್ಚಾಗುತ್ತದೆ ಅಂತೆಯೇ ಜಿಡಿಪಿ ಬೆಳವಣಿಗೆಯಾಗುತ್ತದೆ. ಸರ್ಕಾರ ಇಷ್ಟೆಲ್ಲ ಹಣ ವೆಚ್ಚ ಮಾಡುವಾಗ ಜನರ ಆರ್ಥಿಕ ಸಾಮಾಜಿಕ ಪರಿಸ್ಥಿತಿ ಸುಧಾರಣೆಯಾಗಲೇ ಬೇಕು* 

 *ಗ್ರಾಮೀಣ ಪ್ರದೇಶದಲ್ಲಿ, ಜನಜೀವನದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಗಮನ ಕೊಡಬೇಕು. ಈ ಐದು ಗ್ಯಾರಂಟಿಗಳು ಮತ್ತು ಬೇರೆ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಬೇಕಾಗಿದೆ. ಇವುಗಳಲ್ಲಿ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ* 

*ಈ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅಧಿಕಾರಿಗಳು ಶ್ರಮಿಸಬೇಕು. ಜನರು ಯಾಕೆ ತಹಸೀಲ್ದಾರರ ಕಚೇರಿಗೆ ಅಲೆಯುತ್ತಾರೆ. ಅಲ್ಲಿ ಸುಧಾರಣೆ ಮಾಡದಿದ್ದರೆ ಜನರ ಕಷ್ಟಗಳಿಗೆ ಸ್ಪಂದಿಸಲು ಸಾಧ್ಯವಾಗದು* 

*ಭ್ರಷ್ಟಾಚಾರ ಕಡಿಮೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಇದರಿಂದ ಸಮಾಜದಲ್ಲಿ ಬದಲಾವಣೆಯನ್ನೂ ಮಾಡಬಹುದು, ಜನರ ಋಣ ತೀರಿಸಿದಂತೆಯೂ ಆಗುತ್ತದೆ. ಇಷ್ಟು ಹಣ ಖರ್ಚು ಮಾಡಿಯೂ ಸಮಾಜದಲ್ಲಿ ಬದಲಾವಣೆಯಾಗದಿದ್ದರೆ ಹೇಗೆ?* 

*ರಾಜಕೀಯ ಪ್ರಜಾಪ್ರಭುತ್ವ ಸಾಮಾಜಿಕ ಪ್ರಜಾಪ್ರಭುತ್ವದ ತಳಹದಿ ಮೇಲೆ ನಿಂತಾಗ ಮಾತ್ರ ಯಶಸ್ವಿಯಾಗಲು ಸಾಧ್ಯ ಎಂದು ಅಂಬೇಡ್ಕರ್‌ ಹೇಳಿದ್ದಾರೆ. ಹೀಗಾಗಿ ಸಾಮಾಜಿಕ  ಕಾರ್ಯಕ್ರಮಗಳು ನಿಮ್ಮ ಜಿಲ್ಲೆಗಳಲ್ಲಿ ಯಶಸ್ವಿಯಾಗುವಂತೆ ನೋಡಿಕೊಳ್ಳಬೇಕು. ಜಿಲ್ಲಾಧಿಕಾರಿ, ಸಿಇಓಗಳು ಮತ್ತು ಎಸ್‌.ಪಿ. ಗಳು ಹೊಂದಾಣಿಕೆಯಿಂದ ಕೆಲಸ ಮಾಡಿದರೆ, ಬದಲಾವಣೆ ಮಾಡುವ ಪ್ರಯತ್ನ ಮಾಡಿದರೆ ಉತ್ತಮ ಸಮಾಜ ನಿರ್ಮಿಸಲು ಸಾಧ್ಯವಾಗುತ್ತದೆ* 

*ಇದಕ್ಕೆ ನಿಮ್ಮ ಸಹಕಾರ ಹಾಗೂ ಚಿಂತನೆ ಇರಲಿ ಎಂದು ಆಶಿಸುತ್ತೇನೆ*

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button