*ತಂದೆ ಸಾವಿನ ಬಗ್ಗೆ ಅನುಮಾನ; ತಾಯಿ ವಿರುದ್ಧ ದೂರು ದಾಖಲಿಸಿದ ಪುತ್ರಿ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ತಂದೆಯ ಮರಣಕ್ಕೆ ಸಂಶಯ ವ್ಯಕ್ತಪಡಿಸಿದ ಮಗಳು ತಾಯಿಯ ವಿರುದ್ಧವೇ ಪ್ರಕರಣ ದಾಖಲಿಸಿರುವ ಘಟನೆ ಬೆಳಗಾವಿ ನಗರದಲ್ಲಿ ಬೆಳಕಿಗೆ ಬಂದಿದೆ.
ಈ ನಡುವೆ ಅಪರಿಚಿತರು ಮನೆಯೊಳಗೆ ಪ್ರವೇಶಿಸಿದ್ದ ಸಿಸಿಟಿವಿಯ ದೃಶ್ಯಾವಳಿಗಳು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿವೆ.
ಬೆಳಗಾವಿಯ ಮಾಳಮಾರುತಿ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ವಾಸವಾಗಿದ್ದ ಸಂತೋಷ ದುಂಡಪ್ಪ ಪದ್ಮಣ್ಣವರ ಅಕ್ಟೋಬರ್ 9 ರಂದು ನಿಧನರಾಗಿದ್ದಾರೆ. ಆದರೇ ಇವರ ಸಾವಿನ ಸುತ್ತ ಸಂಶಯದ ಹುತ್ತ ಬೆಳೆದು ನಿಂತಿದೆ. ಸಂತೋಷ ದುಂಡಪ್ಪ ಪದ್ಮಣ್ಣವರ ಅವರ ಮಗಳು ಸಂಜನಾ ತಮ್ಮ ತಂದೆಯ ಸಾವು ಸ್ವಾಭಾವಿಕವಲ್ಲ ಎಂಬ ಸಂಶಯ ವ್ಯಕ್ತಪಡಿಸಿ ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.
ಈ ಹಿನ್ನೆಲೆ ಮಾಳಮಾರುತಿ ಪೊಲೀಸರು ಬೆರಳಚ್ಚು ತಜ್ಞರ ತಂಡದೊಂದಿಗೆ ಸುಮಾರು 5 ಗಂಟೆಗಳಿಂದ ಸತತವಾಗಿ ಕಾರ್ಯಾಚರಣೆಯನ್ನು ನಡೆಸುತ್ತಿದ್ದು, ಅಲ್ಲದೇ ಮನೆಯಲ್ಲಿದ್ದ ಕೆಲ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸಂತೋಷ ಪದ್ಮಣ್ಣವರ ಪತ್ನಿ ಉಮಾ ಪದ್ಮಣ್ಣವರ ಹಾಗೂ ಮನೆಯಾಳುಗಳನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ ಎನ್ನಲಾಗಿದೆ.
ತಂದೆಯ ಅಂತ್ಯಕ್ರಿಯೆಗೆ ಬಂದ ಮಗಳಲ್ಲಿ ತಂದೆಯ ಮರಣದಲ್ಲಿ ಏನೋ ಗುಟ್ಟು ಅಡಗಿದೆ ಎಂಬ ವಿಚಾರ ಪದೇ ಪದೇ ಸುಳಿಯುತ್ತಿತ್ತು. ಅಂತ್ಯವಿಧಿ ಮುಗಿಸಿಕೊಂಡು ಬರುತ್ತಿದ್ದಂತೆ ಇನ್ನೆನು ಮನೆಯಲ್ಲಿನ ಸಿಸಿಟಿವಿ ಫೂಟೇಜ್ ಪರಿಶೀಲಿಸಬೇಕು ಎನ್ನುವಷ್ಟರಲ್ಲೇ ತಾಯಿ ಮಗಳನ್ನು ಗದರಿಸಿ ಮೊದಲು ಸ್ನಾನಕ್ಕೆ ಹೋಗು ಎಂದು ಕಳುಹಿಸಿದ್ದಾರಂತೆ. ಮರಳಿ ಬಂದು ನೋಡುವಷ್ಟರಲ್ಲಿ ಸಿಸಿಟಿವಿ ಫೂಟೇಜ್ ಮಾಯವಾಗಿದೆಯಂತೆ. ತಾಯಿಯನ್ನು ಕೇಳಿದಾಗ ತಾಯಿ ನಿನ್ನ ಸಹೋದರರೇ ಏನೋ ಮಾಡಲು ಹೋಗಿ ಡಿಲೀಟ್ ಮಾಡಿದ್ದಾನೆ ಎಂದಿದ್ದಾರಂತೆ. ಇನ್ನು ಸಹೋದರ ಸುಜಲ್ ಮತ್ತು ಅಕುಲ ಪದ್ಮಣ್ಣನವರ ಇಬ್ಬರನ್ನು ಕೇಳಿದರೇ ಆತ ತಾಯಿಯೇ ಡಿಲೀಟ್ ಮಾಡುವಂತೆ ಹೇಳಿದ್ದಾರಂತೆ ಎಂಬ ಪ್ರಾಥಮಿಕ ಮಾಹಿತಿ ಬಲ್ಲಮೂಲಗಳಿಂದ ಲಭ್ಯವಾಗಿದೆ.
ಆದರೇ ನೆರೆಹೊರೆಯವರ ಸಿಸಿಟಿವಿ ಫೂಟೇಜಗಳನ್ನು ಪರಿಶೀಲಿಸಿದಾಗ ಯಾರೋ ಇಬ್ಬರು ವ್ಯಕ್ತಿಗಳು ಮನೆಯ ಒಳಗೆ ಹೋಗಿ 40 ರಿಂದ 45 ನಿಮಿಷದ ಬಳಿಕ ಮನೆ ಹೊರಗೆ ಬಂದಿರುವ ದೃಶ್ಯಗಳು ಸೆರೆಯಾಗಿವೆ.
ಸಂಜನಾ ನೇರವಾಗಿ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ತಂದೆಯ ಸಾವಿನ ಬಗ್ಗೆ ಅನುಮಾನ ಇದೆ ತನಿಖೆ ಮಾಡುವಂತೆ ದೂರು ನೀಡಿದ್ದಳು. ಇನ್ನೂ ತಂದೆ ದೇಹ ದಾನ ಮಾಡಿದ್ದು ಆದ್ರೇ ಖಾಸಗಿ ಆಸ್ಪತ್ರೆಯಲ್ಲಿ ಕೇವಲ ಕಣ್ಣು ಮಾತ್ರ ಪಡೆದುಕೊಂಡಿದ್ದು ದೇಹವನ್ನು ಪಡೆದುಕೊಂಡಿಲ್ಲ ಅನ್ನೋ ಮಾತನ್ನು ಕೂಡ ಪೊಲೀಸರ ಮುಂದೆ ಮಗಳು ಹೇಳಿದ್ದಳು. ಪುತ್ರಿಯ ಅನುಮಾನದ ಮೇರೆಗೆ ಕೇಸ್ ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಮಗಳ ದೂರು ಹಿನ್ನೆಲೆಯಲ್ಲಿ ಸಂತೋಷ ಪದ್ಮಣ್ಣವರ್ ಮೃತ ದೇಹವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಪೊಲೀಸರು ಒಳ ಪಡಿಸಿದ್ರು. ಈ ವೇಳೆಯಲ್ಲಿ ಮೃತ ಸಂತೋಷ ಮಗಳು ಸಂಜನಾ ಹಾಗೂ ಬೆಳಗಾವಿ ಎಸಿ ಶ್ರವಣ ನಾಯಕ್ ಹಾಗೂ ಮಾಳ ಮಾರುತಿ ಪೊಲೀಸ್ ಠಾಣೆಯ ಸಿಪಿಐ ಸ್ಥಳದಲ್ಲಿ ಇದ್ದರು. ಮೃರಣೊತ್ತರ ಪರೀಕ್ಷೆ ವರದಿ ಬಂದ ಬಳಿಕ ಸಹಜ ಸಾವೋ, ಕೊಲೆಯೋ ಎಂಬುದು ಖಚಿತವಾಗಿ ಗೊತ್ತಾಗಲಿದೆ.
ಸದ್ಯ ಪ್ರಕರಣ ಬೆನ್ನು ಬಿದ್ದಿರುವ ಮಾಳಮಾರುತಿ ಠಾಣೆ ಪೊಲೀಸರು ಎರಡು ಟೀಮ್ ಮಾಡಿಕೊಂಡು ಸಿಸಿಟಿವಿಯಲ್ಲಿ ಸೆರೆಯಾದ ಅಪರಿಚಿತರು ಯಾರು ಅನ್ನೋದನ್ನ ತನಿಖೆ ನಡೆಸುತ್ತಿದ್ದಾರೆ. ಹೀಗೆ ಬಂದು ಹೋದ ಇಬ್ಬರ ಪತ್ತೆಗೆ ಒಂದು ಟೀಮ್ ಬೆಂಗಳೂರು ಮತ್ತೊಂದು ಟೀಮ್ ಮಂಗಳೂರಿಗೆ ಹೋಗಿದೆ. ಇತ್ತ ಆಂಜನೇಯ ನಗರದಲ್ಲಿರುವ ಪತ್ನಿ ಉಮಾಳ ಮನೆಯಲ್ಲಿ ಒಂದು ಪೊಲೀಸ್ ಟೀಮ್ ಇದ್ದು ಮನೆಯನ್ನ ಶೋಧ ನಡೆಸಿದೆ. ಇತ್ತ ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಮುಂದಿನ ವಿಚಾರಣೆಗೆ ಉಮಾಳನ್ನ ವಶಕ್ಕೆ ಪಡೆಯಲು ಸಿದ್ದತೆ ನಡೆಸಿದ್ದಾರೆ. ಪೊಲೀಸರ ಪರಿಶೀಲನೆ ವೇಳೆ ಮನೆಯಲ್ಲಿ ಕೆಲ ಪೆನ್ ಡ್ರೈವ್ ಗಳು ಸಿಕ್ಕಿದ್ದು ಅದರಲ್ಲಿ ಏನಿದೆ ಅನ್ನೋದರ ಕುರಿತು ಕೂಡ ಪರಿಶೀಲನೆ ಮಾಡ್ತಿದ್ದಾರೆ. ಸಂತೋಷ ಪದ್ಮಣ್ಣವರ್ ಸಾವಿನ ಬಗ್ಗೆ ಪತ್ನಿ ಉಮಾಳನ್ನು ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಇನ್ನೂ ಎಫ್ ಎಸ್ ಎಲ್ ಹಾಗೂ ಮರಣೋತ್ತರ ಪರೀಕ್ಷೆ ಬರೋವರೆಗೆ ಯಾವುದೇ ರೀತಿಯಲ್ಲಿ ಖಚಿವಾಗಿ ಹೇಳುವ ಸ್ಥಿತಿಯಲ್ಲಿ ಯಾರು ಇಲ್ಲ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ