*ನನ್ನ ಹೇಳಿಕೆಗೆ ನೋವಾಗಿದ್ದರೆ ಕ್ಷಮೆಯಿರಲಿ ಎಂದ ಗೃಹ ಸಚಿವ ಪರಮೇಶ್ವರ್; ಹೇಳಿಕೆ ನೀಡಿ ಕ್ಷಮೆ ಕೇಳಿದ್ದೇಕೆ?*
ಪ್ರಗತಿವಾಹಿನಿ ಸುದ್ದಿ: ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ನೇಹಾ ಹತ್ಯೆ ವಿಚಾರವಾಗಿ ಪ್ರತಿಕ್ರಿಯಿಸಿದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ನೀಡಿದ್ದ ಹೇಳಿಕೆ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ನೇಹಾ ಕುಟುಂಬದವರು ಹಾಗೂ ಸಾರ್ವಜನಿಕರು ಗೃಹ ಸಚಿವರ ಬೇಜವಾಬ್ದಾರಿ ಹೇಳಿಕೆಗೆ ಕಿಡಿಕಾರಿದ್ದರು. ಇದರ ಬೆನ್ನಲ್ಲೇ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕ್ಷಮೆ ಕೋರಿದ್ದಾರೆ.
ನೇಹಾ ಹಿರೇಮಠ ಹತ್ಯೆ ಪ್ರಕರಣದ ಬಗ್ಗೆ ನಿನ್ನೆ ಸುದ್ದಿಗರರೊಂದಿಗೆ ಮಾತನಾಡಿದ ಗೃಹ ಸಚಿವರು, ನೇಹಾ ಹಾಗೂ ಫಯಾಜ್ ಪ್ರೀತಿಸುತ್ತಿದ್ದರು. ನಂತರ ನೇಹಾ ಫಯಾಜ್ ನಿಂದ ದೂರಾಗಲು ಯತ್ನಿಸಿದ್ದಾಳೆ. ಹೀಗಾಗಿ ಕೊಲೆ ನಡೆದಿದೆ. ಇದು ಆಕಸ್ಮಿಕ ಘಟನೆ ಎಂದು ಹೇಳಿದ್ದರು. ಗೃಹ ಸಚಿವರ ಹೇಳಿಕೆ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಕೂಡ ಯಾವುದೇ ಮರ್ಡರ್ ವೈಯಕ್ತಿಕ ಕಾರಣಗಳಿಗಾಗಿಯೂ ನಡೆಯುತ್ತದೆ ಎಂದಿದ್ದರು. ಗೃಹ ಸಚಿವರು ಹಾಗೂ ಸಿಎಂ ಹೇಳಿಕೆಗೆ ತೀವ್ರ ಪ್ರತಿಭಟನೆ, ಆಕ್ರೋಶ ವ್ಯಕ್ತವಾಗಿತ್ತು.
ಅಲ್ಲದೆ ಇಂದು ಎಬಿವಿಪಿ ಕಾರ್ಯಕರ್ತರು ಗೃಹ ಸಚಿವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಗೃಹ ಸಚಿವ ಡಾ.ಪರಮೇಶ್ವರ್, ನನ್ನ ಮಾತುಗಳಿಂದ ನೇಹಾ ತಂದೆ-ತಾಯಿಗಳಿಗೆ ಯಾರಿಗೇ ಅಗಲಿ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ನಾನಾಗಲಿ, ಮುಖ್ಯಮಂತ್ರಿಗಳಾಗಲಿ, ಉಪಮುಖ್ಯಮಂತ್ರಿಗಳಾಗಲಿ ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು. ನಾವು ಹಗುರವಾದ ಹೇಳಿಕೆಗಳನ್ನು ನೀಡಲಾಗುವುದಿಲ್ಲ. ನಿನ್ನೆ ನನಗಿದ್ದ ಮಾಹಿತಿ ಪ್ರಕಾರ ಹೇಳಿಕೆ ನೀಡಿದ್ದೆ. ನೇಹಾ ಹತ್ಯೆ ಪ್ರಕರಣದ ತನಿಖೆ ನಡೆಯುತ್ತಿದೆ. ತನಿಖೆ ಬಳಿಕ ಸತ್ಯಾಸತ್ಯತೆ ಹೊರಬರಲಿದೆ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ