ಯೋಗ – ಭೋಗದ ನಡುವೆ ಸಮತೋಲನದ ಮೂಲಕ ಭಾರತೀಯ ಸಂಸ್ಕೃತಿ ಆರೋಗ್ಯಕ್ಕೆ ಮಹತ್ವ ನೀಡುತ್ತ ಬಂದಿದೆ -ನಾಡೋಜ ಡಾ. ಮಹೇಶ ಜೋಶಿ, ಡಾ.ಗಿರಿಧರ ಕಜೆ ಅವರ ಸಂಸ್ಕಾರ ಕೃತಿ ಅನಾವರಣ
ಡಾ.ಗಿರಿಧರ ಕಜೆ ಅವರ ಸಂಸ್ಕಾರ ಕೃತಿ ಅನಾವರಣ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಭಾರತೀಯ ಸಂಸ್ಕೃತಿಯು ಯೋಗ ಮತ್ತು ಭೋಗದ ನಡುವೆ ಸಮತೋಲನ ಸಾಧಿಸುವ ಮೂಲಕ ಆರೋಗ್ಯಕ್ಕೆ ಮಹತ್ವ ನೀಡುತ್ತ ಬಂದಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಹೇಳಿದರು.
ನಗರದ ಶಹಾಪುರದಲ್ಲಿರುವ ಕೆಎಲ್‌ಇ ಸಂಸ್ಥೆಯ ಶ್ರೀ ಬಿ. ಎಂ. ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯದಲ್ಲಿ ಭಾನುವಾರ, ಖ್ಯಾತ ಆಯುರ್ವೇದ ವೈದ್ಯ ಡಾ. ಗಿರಿಧರ ಕಜೆ ಅವರ ಆಯುರ್ವೇದ ಜ್ಞಾನ ಯಾನ ಸರಣಿ ಪುಸ್ತಕಗಳ ಏಳನೇ ಕೃತಿಯಾದ ಸಂಸ್ಕಾರ ಪುಸ್ತಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಆಹಾರ ಹಿತ ಮತ್ತು ಮಿತವಾಗಿರಬೇಕು ಎಂಬುದು ಆಯುರ್ವೇದದಲ್ಲಿ ಹೇಳಲಾಗಿದೆ. ಮನುಷ್ಯನ ಜೀವನ ಪರಿಪೂರ್ಣವಾಗಲು ಭೋಗವೂ ಬೇಕು, ಯೋಗವೂ ಬೇಕು, ಇವೆರಡರ ಸಮತೋಲನವೇ ಆರೋಗ್ಯಕರ ಜೀವನಕ್ಕೆ ಬುನಾದಿಯಾಗುತ್ತದೆ ಎಂದರು.
ಡಾ. ಗಿರಿಧರ ಕಜೆ ಅವರು ನಮ್ಮ ಆಯುರ್ವೇದವನ್ನು ಕಾರ್ಪೋರೇಟ್ ಜಗತ್ತಿಗೆ ಪರಿಣಾಮಕಾರಿಯಾಗಿ ತಲುಪಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಅವರು ಕನ್ನಡದಲ್ಲಿ ಬರೆದಿರುವ ಆಯುರ್ವೇದದ ಕುರಿತಾದ ಪುಸ್ತಕಗಳನ್ನು ಕೊಂಡು ಓದುವ ಮೂಲಕ ಓದುವ ಸಂಸ್ಕೃತಿಯನ್ನು ಬೆಳೆಸುವಂತೆ ಕರೆ ನೀಡಿದರು.
ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಶಿಕ್ಷಣ ಸಚಿವ ಎಸ್. ಸುರೇಶ ಕುಮಾರ್ ಮಾತನಾಡಿ, ವೈದ್ಯರು ತಮ್ಮಲ್ಲಿ ಚಿಕಿತ್ಸೆಗೆ ಬರುವ ರೋಗಿಗಳಿಗೆ ಧೈರ್ಯ ತುಂಬಬೇಕು. ಇಂದಿನ ದಿನಮಾನದಲ್ಲಿ ಹೆದರಿಸುವ ವೈದ್ಯರೇ ಹೆಚ್ಚಿರುವಾಗ ಡಾ. ಗಿರಿಧರ ಕಜೆ ಅವರು ರೋಗಿಗಳಲ್ಲಿ ಧೈರ್ಯ ತುಂಬುವ ವೈದ್ಯರ ಸಾಲಿನಲ್ಲಿ ಶ್ರೇಷ್ಠರಾಗಿ ನಿಲ್ಲುತ್ತಾರೆ. ಅವರ ಬಳಿ ಚಿಕಿತ್ಸೆ ಪಡೆದು ಗುಣಮುಖನಾಗಿರುವ ನನ್ನ ಅನುಭವದ ಮಾತು ಇದಾಗಿದೆ ಎಂದರು.
ಆಯುರ್ವೇದ ಸಿದ್ಧಾಂತ ತಲುಪಲಿ
ಆಶಯ ನುಡಿಗಳನ್ನಾಡಿದ ಕೃತಿಕಾರ ಡಾ. ಗಿರಿಧರ ಕಜೆ, ವಿಶ್ವ ಆರೋಗ್ಯ ಸಂಸ್ಥೆಯು ೨೦೦೦ನೇ ಇಸವಿಯ ಹೊತ್ತಿಗೆ ವಿಶ್ವದ ಪ್ರತಿಯೊಬ್ಬರಿಗೂ ಆರೋಗ್ಯ ಒದಗಿಸುವ ಗುರಿ ಹೊಂದಿತ್ತು. ಆದರೆ ಪ್ರಸ್ತುತ ೨೦೨೨ನೇ ಇಸವಿ ಬಂದರೂ ವಿಶ್ವದ ಪ್ರತಿಯೊಬ್ಬರಿಗೂ ಆರೋಗ್ಯ ಒದಗಿಸುವ ಕನಸು ಈಡೇರಿಲ್ಲ, ಬದಲಿಗೆ ರೋಗಗಳು ಹೆಚ್ಚಾಗುತ್ತಲೇ ಇವೆ. ಮೊದಲಿದ್ದ ಸಣ್ಣ ಪುಟ್ಟ ಕಾಯಿಲೆಗಳ ಜೊತೆಗೆ ಮಧುಮೇಹ, ಅಧಿಕ ರಕ್ತದೊತ್ತಡ ಮೊದಲಾದ ಕಾಯಿಲೆಗಳ ಪ್ರಮಾಣ ಉಲ್ಬಣಗೊಂಡಿದೆ ಎಂದರು.
ವಿಶ್ವ ಆರೋಗ್ಯ ಸಂಸ್ಥೆಯು ಉತ್ತಮ ಉದ್ದೇಶ ಹೊಂದಿದ್ದರೂ ಅದರ ಕಾರ್ಯ ವಿಧಾನದಲ್ಲಿ ಎಡವಿದ್ದರಿಂದ ಉದ್ದೇಶ ಈಡೇರದಂತಾಯಿತು. ವಿಶ್ವ ಆರೋಗ್ಯ ಸಂಸ್ಥೆಯು ವಿಶ್ವದ ಎಲ್ಲೆಡೆ ಔಷಧ ತಲುಪಿಸಿದರೆ ಎಲ್ಲಿಗೂ ಆರೋಗ್ಯ ಲಭಿಸುತ್ತದೆ ಎಂಬ ತಪ್ಪು ಕಲ್ಪನೆಯೇ ಅದರ ಗುರಿ ಈಡೇರದಿರಲು ಕಾರಣವಾಯಿತು. ಎಲ್ಲೆಡೆ ಔಷಧ ತಲುಪಿಸಿದರೆ ಆರೋಗ್ಯ ಲಭಿಸುವುದಿಲ್ಲ. ಆಯುರ್ವೇದ ಸಿದ್ಧಾಂತದ ಜೀವನ ಶೈಲಿಯಿಂದ ಮಾತ್ರ ವಿಶ್ವದಾದ್ಯಂತ ಪ್ರತಿಯೊಬ್ಬರಿಗೂ ಆರೋಗ್ಯ ಭಾಗ್ಯ ಸಾಧ್ಯ ಎಂದರು.
ಆಯುರ್ವೇದ ವೈದ್ಯ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಬೇರೆ ವಿಧಾನಗಳನ್ನು ಪ್ರಾಕ್ಟೀಸ್ ಮಾಡಬೇಡಿ ಎಂದು ಸಲಹೆ ನೀಡಿದ ಡಾ. ಗಿರಿಧರ ಕಜೆ, ನಮ್ಮ ಉದ್ದೇಶ ಮನೆ ಮನೆಗೆ ಆಯುರ್ವೇದ ಔಷಧಗಳನ್ನು ತಲುಪಿಸುವುದಲ್ಲ, ಬದಲಿಗೆ ಪ್ರತಿ ಮನಸ್ಸಿಗೆ ಆಯುರ್ವೇದ ಸಿದ್ಧಾಂತವನ್ನು ತಲುಪಿಸುವುದಾಗಿದೆ ಎಂದರು.
ಸೆಲ್ಕೋ ಸೋಲಾರ್‌ನ ಸಿಇಒ ಮೋಹನ ಭಾಸ್ಕರ ಹೆಗಡೆ ಮಾತನಾಡಿ, ಆಯುರ್ವೇದ ಕೇವಲ ರೋಗಕ್ಕೆ ಚಿಕಿತ್ಸೆ ನೀಡುವ ಶಾಸ್ತ್ರವಲ್ಲ, ಬದಲಿಗೆ ಅದು ರೋಗ ಬರದಂತೆ ತಡೆದು ಸ್ವಾಸ್ಥ್ಯ ಕಾಪಾಡುವ ಶಾಸ್ತ್ರವಾಗಿದೆ ಎಂದರು.
ಇಂದಿನ ಆಧುನಿಕ ಯುಗದಲ್ಲೂ ಆಯುರ್ವೇದ ಪ್ರಸ್ತುತ ಎಂಬುದನ್ನು ಡಾ. ಗಿರಿಧರ ಕಜೆ ಅವರು ಸಾಧಿಸಿ ತೋರಿಸಿದ್ದಾರೆ. ಋಷಿ ಸಂಸ್ಕೃತಿಯ ಬೇರನ್ನು ಹೊಸ ಸಂಸ್ಕೃತಿಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಮಾಜಿ ಶಾಸಕ ಖಾನಾಪುರದ ಅರವಿಂದ ಪಾಟೀಲ ಮಾತನಾಡಿ, ಡಾ.ಗಿರಿಧರ ಕಜೆ ಅವರಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿರುವ ತಮ್ಮ ಅನುಭವವನ್ನು ವಿವರಿಸಿದರು. ಕಾಹೆರ್ ರೆಜಿಸ್ಟ್ರಾರ್ ಡಾ. ವಿ. ಎ. ಕೋಟಿವಾಲೆ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಡಾ. ಗಿರಿಧರ ಕಜೆ, ಎಸ್. ಸುರೇಶ ಕುಮಾರ ಅವರನ್ನು ಸನ್ಮಾನಿಸಲಾಯಿತು., ಎಸ್‌ಬಿಜಿ ಆಯುರ್ವೇದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಅಡಿವೇಶ ಅರಕೇರಿ, ಡಾ. ರವಿ ಪಾಟೀಲ ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಡಾ. ಕಿರಣ ಖೋತ್ ಪಾಟೀಲ, ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ ಮೊದಲಾದವರು ಇದ್ದರು.
ಸೆಲ್ಕೋ ಸೋಲಾರ್ ಸಂಸ್ಥೆ ಕಾರ್ಯಕ್ರಮ ಆಯೋಜನೆ ಮಾಡಿತ್ತು.
ವಿನಾಯಕ ಹೆಗಡೆ ಸ್ವಾಗತಿಸಿದರು. ಸುಬ್ರಮಣ್ಯ ಭಟ್ ನಿರೂಪಿಸಿದರು. ಬಿ. ಎಂ. ಕಂಕಣವಾಡಿ ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಡಾ. ಸುಹಾಸ ಶೆಟ್ಟಿ ವಂದಿಸಿದರು.
https://pragati.taskdun.com/%e0%b2%b0%e0%b2%be%e0%b2%9c%e0%b3%8d%e0%b2%af/dr-giridhara-kajes-ayurveda-gnana-yana-will-be-released-in-belgaum-on-sunday/
ಬೆಳಗಾವಿ-ಮಹಾರಾಷ್ಟ್ರ ಗಡಿ ಭಾಗದಲ್ಲಿ ಭಾರಿ ಮಳೆ; 4 ಸೆತುವೆ ಮುಳುಗದೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ