*ಪತ್ನಿ ಡಾ.ಕೃತ್ತಿಕಾ ರೆಡ್ಡಿ ಹತ್ಯೆ ಪ್ರಕರಣ: ವೈದ್ಯ ಪತಿ ನ್ಯಾಯಾಂಗ ಬಂಧನಕ್ಕೆ*

ಪ್ರಗತಿವಾಹಿನಿ ಸುದ್ದಿ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಡಾ.ಕೃತ್ತಿಕಾ ರೆಡ್ಡಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂತಕ ಪತಿ ಡಾ.ಮಹೇಂದ್ರ ರೆಡ್ಡಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಅನಸ್ತೇಷಿಯಾ ಡೋಸೇಜ್ ಹೆಚ್ಚು ನೀಡಿ ಪತ್ನಿಯನ್ನು ಹಂತ ಹಂತವಾಗಿ ಕೊಲೆಗೈದಿದ್ದ ಡಾ.ಮಹೇಂದ್ರ ರೆಡ್ದಿ ಪತಿ ಕೃತ್ತಿಕಾಳನ್ನು ತಾನೇ ಕೊಲೆಗೈದಿರುವುದಾಗಿ ಮಾರತ್ತಹಳ್ಳಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ.
ಪತ್ನಿ ಹತ್ಯೆ ಬಳಿಕ ನಾನು ಆಕೆಯನ್ನು ಕೊಲೆಗೈದೆ ಎಂದು ಸ್ನೇಹಿತನಿಗೆ ವಾಟ್ಸಪ್ ಮೆಸೇಜ್ ಕೂಡ ಮಾಡಿದ್ದಾನೆ. ಮಹೇಂದ್ರ ರೆಡ್ಡಿ ಮೊಬೈಲ್ ವಶಕ್ಕೆ ಪಡೆದಿರುವ ಪೊಲೀಸರು ವೈದ್ಯನ ಕೊಲೆ ಸ್ಕೆಚ್ ಕಂಡು ದಂಗಾಗಿದ್ದಾರೆ.
ಡಾ.ಕೃತ್ತಿಕಾ ರೆಡ್ಡಿ ತಂದೆ-ತಾಯಿಗೆ ಇಬ್ಬರು ಹೆಣ್ಣು ಮಕ್ಕಳು ಕೃತ್ತಿಕಾ ಹಾಗೂ ಮತ್ತೋರ್ವ ಹಿರಿಯ ಮಗಳು ಕೂಡ ವೃತ್ತಿಯಲ್ಲಿ ವೈದ್ಯೆ. ಕೋಟ್ಯಂತರ ಆಸ್ತಿ ಮಾಡಿಟ್ಟಿದ್ದ ಕೃತ್ತಿಕಾಳ ತಂದೆ. ಜೊತೆಗೆ ಹೆಣ್ಣು ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ನೀಡಿದ್ದರು. ಇಬ್ಬರೂ ಹೆಣ್ಣುಮಕ್ಕಳು ತಮ್ಮ ಸ್ವಂತಕಾಲಮೇಲೆ ನಿಂತು ಸಮಾಜಸೇವೆಯಲ್ಲಿ ತೊಡಗಿಕೊಳ್ಳಲಿ ಎಂಬ ಉದ್ದೇಶ ಹೊಂದಿದ್ದರು. ಇದೇ ಕಾರಣಕ್ಕೆ ಮಕ್ಕಳಿಬ್ಬರಿಗೂ ಮೆಡಿಕಲ್ ಓದಿಸಿದ್ದರು.
ಕೃತ್ತಿಕಾ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯೆಯಾಗಿದ್ದಳು. ಡಾ.ಮಹೇಂದ್ರ ಕೂಡ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯ. ವೈದ್ಯನ ಮನಸ್ಸಿನಲ್ಲಿ ಆಸ್ತಿಗಾಗಿ ಪತ್ನಿಯನ್ನೇ ಕೊಲೆಗೈಯ್ಯುವ ನೀಚ ಬುದ್ಧಿ ಇದ್ದಿದ್ದು ಮಾತ್ರ ಆಘಾತಕಾರಿ. ತಾನು ಎಲ್ಲರೊಂದಿಗೂ ಒಳ್ಳೆಯವನಾಗಿಯೇ ಇರಬೇಕು. ಆದರೆ ಪತ್ನಿಯ ಆಸ್ತಿ ಮಾತ್ರ ತನಗೆ ಬರಬೇಕು. ಅದಕ್ಕಾಗಿ ಆಕೆ ಅನರೋಗ್ಯದಿಂದ ಬಳಲುತ್ತಿದ್ದಾಳೆ ಎಂದು ಬಿಂಬಿಸಿ ನ್ಯಾಚುರಲ್ ಡೆತ್ ಎಂದು ತೋರಿಸಬೇಕು. ನ್ಯಾಚುರಲ್ ಡೆತ್ ಎಂದು ವೈದ್ಯರು ಹೇಳಿದರೆ ಮಾತ್ರ ಮರಣೋತ್ತರ ಪರೀಕ್ಷೆ ಮಾಡುವುದಿಲ್ಲ ಎಂಬುದನ್ನು ಅರಿತು ಪತ್ನಿ ಕೃತ್ತಿಕಾಳ ಹತ್ಯೆಗೆ ಸೈಲೆಂಟ್ ಆಗಿ ಸಂಚು ರೂಪಿಸಿದ್ದ. ತುಂಬಾ ಒಳ್ಳೆಯವನಂತೆ ವಿನಯದಿಂದ ಇರುತ್ತಿದ್ದ ಪತಿಯೊಳಗೆ ಹಂತಕನ ಮನಸ್ಸು ಇತ್ತು ಎಂಬುದನ್ನೂ ಅರಿಯದ ಡಾ.ಕೃತ್ತಿಕಾ ಪತಿಯನ್ನು ಸಂಪೂರ್ಣವಾಗಿ ನಂಬಿದ್ದಳು. ಆಕೆಯ ತಂದೆ-ತಾಯಿ ಕೂಡ ಅಳಿಯನನ್ನು ನಂಬಿದ್ದರು.
ಪತ್ನಿಯನ್ನು ಕೊಲ್ಲುವ ಉದ್ದೇಶಕ್ಕೆ ಆಕೆಯ ಕಾಲಿಗೆ ಅನಸ್ತೇಷಿಯಾವನ್ನು ಕೊಟ್ಟಿದ್ದಾಗಿ, ಕೊಲೆ ಬಳಿಕ ನ್ಯಾಚುರ್ ಡೆತ್ ಎಂದು ಬಿಂಬಿಸಲು ಹಲವು ಗಂಟೆಗಳ ಕಾಲ ಶವದೊಂದಿಗೆ ಇದ್ದಿದ್ದಾಗಿ ಹಂತಕ ಮಹೇಂದ್ರ ಬಾಯ್ಬಿಟ್ಟಿದ್ದಾನೆ. ಆದರೆ ಇದ್ದಕ್ಕಿದ್ದಂತೆ ತಂಗಿ ಸಾವನ್ನಪ್ಪಿದ್ದನ್ನು ನಂಬದ ಕೃತ್ತಿಕಾ ಸಹೋದರಿ ಮರಣೋತ್ತರ ಪರೀಕ್ಷೆ ನಡೆಸಬೇಕು ಎಂದು ಪಟ್ಟು ಹಿಡಿದಿದ್ದಳು. ಈ ಬಗ್ಗೆ ತಂದೆ-ತಾಯಿಗೂ ಹೇಳಿದ್ದಳು. ಹಾಗಾಗಿ ಮಹೇಂದ್ರ ಹಾಗೂ ಆತನ ತಂದೆ-ತಾಯಿ ಕೃತ್ತಿಕಾಳ ಮರಣೋತ್ತರ ಪರೀಕ್ಷೆ ಬೇಡ ಎಂದು ಹೇಳಿದರೂ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ ಕೊಲೆ ರಹಸ್ಯ ಬಯಲಾಗಿತ್ತು. ಅತಿಯಾದ ಅನಸ್ತೇಷಿಯಾ, ಅನಗತ್ಯ ಔಷಧಗಳಿಂದ ಸಾವು ಎಂಬುದು ದೃಢಪಟ್ಟಿತ್ತು.
ಸದ್ಯ ಮಹೇಂದ್ರನನ್ನು ಬಂಧಿಸಿರುವ ಮಾರತ್ತಹಳ್ಳಿ ಪೊಲೀಸರು 29ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಕೋರ್ಟ್ 14 ದಿನಗಳ ಕಾಲ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.