ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ೨೦೧೮ನೇ ಸಾಲಿನ ಏಕಲವ್ಯ ಪ್ರಶಸ್ತಿಯನ್ನು ಪಡೆದ ಜುಡೋಪಟು ಗೀತಾ ದಾನಪ್ಪಗೋಳರನ್ನು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರು ಲಿಂಗರಾಜ ಮಹಾವಿದ್ಯಾಲಯದಲ್ಲಿ ಕೆಎಲ್‌ಇ ಸಂಸ್ಥೆಯ ಪರವಾಗಿ ಸತ್ಕರಿಸಿ ಗೌರವಿಸಿದರು.
ಇತ್ತೀಚಿಗೆ ಬೆಂಗಳೂರಿನಲ್ಲಿ ಜರುಗಿದ ಕ್ರೀಡಾ ಪ್ರಶಸ್ತಿಗಳ ಪ್ರದಾನ ಸಮಾರಂಭದಲ್ಲಿ ಮಾನ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಗೀತಾ ದಾನಪ್ಪಗೋಳ ಅವರಿಗೆ ಏಕಲವ್ಯ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದರು.
ಕೆಎಲ್‌ಇ ಸಂಸ್ಥೆಯು ಕಳೆದ ಮೂರು ವರ್ಷಗಳಿಂದ ಗೋಕಾಕ ತಾಲೂಕಿನ ನಾಗನೂರ ಗ್ರಾಮದ ಗೀತಾ ದಾನಪ್ಪಗೋಳ ಅವರನ್ನು ದತ್ತು ಪಡೆದು ಸಂಸ್ಥೆಯ ವತಿಯಿಂದ ಆರ್ಥಿಕ ನೆರವು ನೀಡಿ ತರಬೇತಿಯನ್ನು ನೀಡುತ್ತಿದೆ.
ಗೀತಾಳ ಸಾಧನೆಯನ್ನು ಪ್ರಶಂಸಿಸಿ ಮಾತನಾಡಿದ ಡಾ.ಪ್ರಭಾಕರ ಕೋರೆ, ಗೀತಾ ಭರವಸೆಯ ಕ್ರೀಡಾಪಟು, ಗ್ರಾಮೀಣ ಪರಿಸರದಿಂದ ಬಂದ ಅವಳು ಅಗಾಧವಾದ ಸಾಧನೆಯನ್ನು ಮಾಡಿದ್ದಾಳೆ. ಇಂದು ಯುವತಿಯರು ಕ್ರೀಡೆಯತ್ತ ಹೆಚ್ಚಿನ ಆಸಕ್ತಿ ಹೊಂದುತ್ತಿರುವುದು ಹೆಮ್ಮೆಯ ವಿಷಯ. ಕಡುಬಡತನದಲ್ಲಿ ಗೀತಾ ಸವಾಲುಗಳನ್ನು ಸ್ವೀಕರಿಸಿ ಯುವತಿಯರಿಗೆ ಸ್ಫೂರ್ತಿದಾಯಕಳಾಗಿದ್ದಾಳೆ, ಅವಳ ಸಾಧನೆಯನ್ನು ಅಭಿನಂದಿಸಲೇಬೇಕು ಎಂದರು.
ಅಂತೆಯೆ ಮುಂದಿನ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ ಅದ್ಭುತವಾದ ಸಾಧನೆ ಮಾಡಲು ಪ್ರೇರೇಪಿಸಿದರು. ಈ ನಿಟ್ಟಿನಲ್ಲಿ ಸಂಸ್ಥೆಯು ಎಲ್ಲ ರೀತಿಯ ಸಹಾಯ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಲಿಂಗರಾಜ ಕಾಲೇಜಿನ ಪ್ರಾಚಾರ್ಯರಾದ ಡಾ.ಆರ್.ಎಂ.ಪಾಟೀಲ, ಎಂ.ಆರ್.ಬನಹಟ್ಟಿ, ಪಿಯು ಪ್ರಾಚಾರ್ಯೆ ಗಿರಿಜಾ ಹಿರೇಮಠ, ದೈಹಿಕ ನಿರ್ದೇಶಕರಾದ ಡಾ.ಸಿ.ರಾಮರಾವ್ ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು. ಡಾ.ಮಹೇಶ ಗುರನಗೌಡರ ನಿರೂಪಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ