*ಪಿಜಿ-ನೀಟ್ ಪರೀಕ್ಷೆಯಲ್ಲಿ ದೇಶಕ್ಕೆ 9ನೇ ರ್ಯಾಂಕ್ ಗಳಿಸಿದ ಡಾ.ಶರಣಪ್ಪ: ಬಿಮ್ಸ್ ಮುಕುಟಕ್ಕೆ ಮತ್ತೊಂದು ಗರಿ*
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಮ್ಸ್)ಯ ವೈದ್ಯಕೀಯ ವಿದ್ಯಾರ್ಥಿ ರಾಷ್ಟ್ರಮಟ್ಟದ ಪಿ.ಜಿ. ನೀಟ್ ಪರೀಕ್ಷೆಯಲ್ಲಿ ಒಂಬತ್ತನೇ ರ್ಯಾಂಕ್ ಗಳಿಸುವ ಮೂಲಕ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ಬಿಮ್ಸ್ ಸಾಧನೆ ಗುರುತಿಸುವಂತಾಗಿದೆ.
ಬಿಮ್ಸ್ ನ ಎಂ.ಬಿ.ಬಿ.ಎಸ್ ವಿದ್ಯಾರ್ಥಿಯಾಗಿರುವ ಡಾ. ಶರಣಪ್ಪ ಶೀನಪ್ಪನವರ ಪಿ.ಜಿ. ನೀಟ್ ಪರೀಕ್ಷೆಯಲ್ಲಿ ಒಂಬತ್ತನೇ ರ್ಯಾಂಕ್ ಗಳಿಸುವ ಮೂಲಕ ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸುವುದರ ಜತೆಗೆ ಸಂಸ್ಥೆಗೆ ಕೀರ್ತಿಯನ್ನು ತಂದಿರುತ್ತಾರೆ.
ಬಿಮ್ಸ್ ಸಂಸ್ಥೆಯು ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡುವಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತಿದೆ. ರಾಜ್ಯದ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯಲ್ಲಿ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ದಾಪುಗಾಲನ್ನು ಹಾಕುತ್ತಿದೆ.
ಅದಕ್ಕೆ ಉದಾಹರಣೆ ಎನ್ನುವಂತೆ ಬಿಮ್ಸ್ ಎಂ.ಬಿ.ಬಿ.ಎಸ್ ವಿದ್ಯಾರ್ಥಿ ಡಾ. ಶರಣಪ್ಪ ಶೀನಪ್ಪನವರ ಆಲ್ ಇಂಡಿಯಾ ಪಿ.ಜಿ ನೀಟ್ ಪರೀಕ್ಷೆಯಲ್ಲಿ 9 ನೇ ರ‍್ಯಾಂಕನ್ನು ಗಳಿಸುವ ಮೂಲಕ ಸಂಸ್ಥೆಯ ಮತ್ತೊಂದು ಮಹತ್ವದ ಗರಿಯನ್ನು ಮುಡಿಗೇರಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದಾರೆ ಎಂದರೆ ತಪ್ಪಾಗಲಾರದು.
ಬಿಮ್ಸ್ ಬೆಳಗಾವಿಯು ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಚಾಪನ್ನು ಮೂಡಿಸಿ ದೇಶದ ಗಮನವನ್ನು ತನ್ನತ್ತ ಸೆಳೆಯುವಲ್ಲಿ ಸಫಲವಾಗಿದೆ. ಸಾಂಸ್ಕೃತಿಕ, ಕ್ರೀಡೆ ಹಾಗೂ ಶೈಕ್ಷಣಿಕವಾಗಿ ಎಲ್ಲದರಲ್ಲಿಯೂ ತನ್ನದೇ ಆದ ಕೊಡುಗೆಯನ್ನು ನೀಡುತ್ತ ಬಂದಿರುವ ಬಿಮ್ಸ್ ಬೋಧಕ ಸಿಬ್ಬಂದಿಯು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಿಕ್ಷಕರು ಶೈಕ್ಷಣಿಕವಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನು ನೀಡಿ ವಿದ್ಯಾರ್ಥಿಗಳು ಸಾಧನೆಯ ಶಿಖರವನ್ನು ಏರುವುದರಲ್ಲಿ ಪ್ರಮುಖವಾದ ಪಾತ್ರವನ್ನು ನಿರ್ವಹಿಸುತ್ತಾರೆ. ಎಲ್ಲ ವಿಭಾಗದ ಮುಖ್ಯಸ್ಥರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳು ಪ್ರಗತಿಯನ್ನು ಸಾದಿಸುವಲ್ಲಿ ಶ್ರಮವನ್ನು ಪಡುತ್ತಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಯ ಏಳಿಗೆಗೆ ಬೆನ್ನೆಲುಬಾಗಿ ನಿಂತಿದ್ದಾರೆ.
ಪ್ರತಿಭಾವಂತ ವಿದ್ಯಾರ್ಥಿಗೆ ಅಭಿನಂದನೆ:
ಅತ್ಯಂತ ಕಠೀಣವಾದ ಪಿ.ಜಿ.-ನೀಟ್ ಪರೀಕ್ಷೆಯಲ್ಲಿ ದೇಶದಲ್ಲಿಯೇ 9 ನೇ ರ‍್ಯಾಂಕನ್ನು ಗಳಿಸಿರುವ ನಮ್ಮ ವಿದ್ಯಾರ್ಥಿ ಡಾ. ಶರಣಪ್ಪ ಶೀನಪ್ಪನವರ ಬಿಮ್ಸ್ ಸಾಧನೆಗೆ ಕೈಗನ್ನಡಿಯಾಗಿದ್ದಾನೆ. ಇಲ್ಲಿಯ ಶಿಕ್ಷಣ ವ್ಯವಸ್ಥೆ ಶಿಕ್ಷಕರು ಹಾಗೂ ಅವರ ಶ್ರಮದ ಅನಾವರಣಕ್ಕೆ ಈ ಸಾಧನೆಯು ಸಾಕ್ಷಿಯಾಗಿದೆ. ನಮ್ಮ ಸಂಸ್ಥೆಗೆ ೯ನೇ ರ‍್ಯಾಂಕ್ ಬಂದಿರುವುದು ಹೆಮ್ಮೆಯ ವಿಚಾರವಾಗಿದೆ. ಈ ಮೂಲಕ ನಮ್ಮ ಸಂಸ್ಥೆಯು ಶೈಕ್ಷಣಿಕವಾಗಿ ಪ್ರಗತಿಯಲ್ಲಿ ತನ್ನದೇ ಛಾಪನ್ನು ಮೂಡಿಸಿರುವುದು ಸಂತೋಷ ತಂದಿದೆ. ಸಂಸ್ಥೆಯ ಎಲ್ಲ ಸಿಬ್ಬಂದಿಗಳ ಪರವಾಗಿ ವಿದ್ಯಾರ್ಥಿಗೆ ಅಭಿನಂದನೆಗಳು. ಈ ಮೂಲಕ ಸಮಾಜದಲ್ಲಿ ಒಳ್ಳೆಯ ವೈದ್ಯನಾಗಿ ತನ್ನ ಸೇವೆಯನ್ನು ಸಲ್ಲಿಸಲಿ ಎಂದು ಬಿಮ್ಸ್ ಬೆಳಗಾವಿಯ ನಿರ್ದೇಶಕರಾದ ಡಾ. ಅಶೋಕ ಕುಮಾರ ಶೆಟ್ಟಿ ಇವರು ವಿದ್ಯಾರ್ಥಿಗೆ ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.
ಇನ್ನು ತಮ್ಮ ಸತತವಾದ ಪ್ರಯತ್ನದಿಂದ ಉತ್ತಮವಾದ ಫಲಿತಾಂಶವನ್ನು ಪಡೆದುಕೊಂಡಿರುವ ಡಾ. ಶರಣಪ್ಪ, ಮೂಲತಃ ಗದಗ ಜಿಲ್ಲೆಯವರು. ತಂದೆ ತುಳಸಪ್ಪ ತಾಯಿ ಶಶಿಕಲಾ.
ಎಲ್ಲರಂತೆ ಸಾಧನೆಯ ಕನಸಿನೊಂದಿಗೆ ಬಿಮ್ಸ್ ಆವರಣಕ್ಕೆ ಕಾಲಿಟ್ಟು ದಿನಕಳೆದಂತೆ ಕಾಲೇಜು ವಾತಾವರಣಕ್ಕೆ ಹೊಂದಿಕೊಂಡು ನಿಶ್ಚಿತವಾದ ಗುರಿಯನ್ನು ತಲುಪಲು ತನ್ನ ದೃಢ ಸಂಕಲ್ಪದೊಂದಿಗೆ ಓದಿನಲ್ಲಿ ಯಾವುದೇ ರಾಜಿಯನ್ನು ಮಾಡಿಕೊಳ್ಳದೇ ತಪಸ್ಸಿನಂತೆ ಶಿಸ್ತಿನಿಂದ ದಿನಕ್ಕೆ 10 ತಾಸು ಓದಿರುವ ಪ್ರತಿಫಲವೇ ಈ ಫಲಿತಾಂಶ ಎನ್ನುತ್ತಾರೆ ಡಾ. ಶರಣಪ್ಪ.
ದೇಶದಲ್ಲಿದಲ್ಲಿಯೇ 9 ನೇ ರ‍್ಯಾಂಕ ಗಳಿಸಿರುವುದು ತಂದೆ, ತಾಯಿ, ಶಿಕ್ಷಕರು ಹಾಗೂ ಸಂಸ್ಥೆಯ ಎಲ್ಲರಿಗೂ ಹೆಮ್ಮೆಯನ್ನು ತಂದಿರುತ್ತದೆ. ವಿದ್ಯಾರ್ಥಿಗೆ ನೆಮ್ಮದಿಯನ್ನು ನೀಡುವುದರ ಜೊತೆಗೆ ಇನ್ನು ಭವಿಷ್ಯದಲ್ಲಿ ಜವಾಬ್ದಾರಿಯನ್ನು ಹೆಚ್ಚು ಮಾಡಿದೆ.
ಅದೇ ರೀತಿ ಬಿಮ್ಸ್ ಸಂಸ್ಥೆಗೆ ಹೆಮ್ಮೆಯನ್ನು ನೀಡಿರುವ ವಿದ್ಯಾರ್ಥಿ, ಭವಿಷ್ಯದಲ್ಲಿ ಒಳ್ಳೆಯ ವೈದ್ಯನಾಗಿ ಸಮಾಜಕ್ಕೆ ತನ್ನ ಉತ್ತಮ ಕೊಡುಗೆಯನ್ನು ನೀಡಲು ಸಂಸ್ಥೆಯ ಉಳಿದ ವಿದ್ಯಾರ್ಥಿಗಳಿಗೆ ಮಾದರಿಯಾಗಿ ದಕ್ಷ ವೈದ್ಯನಾಗಿ ಸಮಾಜಕ್ಕೆ ತನ್ನದೇ ಸೇವೆ ನೀಡುವಂತಾಗಲಿ ಎಂಬುದು ಎಲ್ಲರ ಆಶಯವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ