ಪ್ರಗತಿವಾಹಿನಿ ಸುದ್ದಿ: ಸರ್ಕಾರ ಮೆಡಿಕಲ್ ಎಮರ್ಜೆನ್ಸಿಯನ್ನು ತಕ್ಷಣವೇ ಘೋಷಿಸಬೇಕು. ಸೊಳ್ಳೆಗಳ ನಿಯಂತ್ರಣದಿಂದ ಮಾತ್ರವೇ ಡೆಂಘಿ ಜ್ವರ ನಿಯಂತ್ರಣ ಸಾಧ್ಯ ಎಂದು ಸಂಸದ ಡಾ. ಸಿ.ಎನ್ ಮಂಜುನಾಥ್ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಡೆಂಘಿ ತಡೆಗಟ್ಟದಿದ್ರೆ ಚಿಕನ್ ಗುನ್ಯ, ಜೀಕಾ ವೈರಸ್ ಹರಡುವಿಕೆಯೂ ಹೆಚ್ಚಾಗಬಹುದು ಎಂದು ಎಚ್ಚರಿಕೆ ನೀಡಿದರು. ಇದಕ್ಕೆ ತುರ್ತು ಚಿಕಿತ್ಸೆ ಅಗತ್ಯವಿದೆ. ರಾಜ್ಯದಲ್ಲಿ ಮೆಡಿಕಲ್ ಎಮರ್ಜೆನ್ಸಿ ಘೋಷಣೆ ಮಾಡಬೇಕು. ಪ್ರತ್ಯೇಕ ಟಾಸ್ಕ್ ಫೋರ್ಸ್ ರಚನೆ ಮಾಡಬೇಕು ಎಂದು ಆಗ್ರಹಿಸಿದರು.
ಡೆಂಘಿ ಪರೀಕ್ಷೆ ಮಾಡುವ ಡಯೋಗ್ನಾಸಿಸ್ ಕೇಂದ್ರಗಳು ಹೆಚ್ಚು ವಸೂಲಿ ಮಾಡಿದ್ರೆ, ಅವುಗಳ ಬಾಗಿಲು ಮುಚ್ಚಿಸಬೇಕು ಎಂದರು. ಹಲವೆಡೆ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಅಲ್ಲಿ ಸೊಳ್ಳೆಗಳು ಉತ್ಪತ್ತಿ ಆಗುತ್ತಿವೆ. ಡೆಂಘಿ ತಡೆಗಟ್ಟುವಲ್ಲಿ ಸರ್ಕಾರ ಮತ್ತು ಸಾರ್ವಜನಿಕರು ಇಬ್ಬರದ್ದೂ ಜವಾಬ್ದಾರಿ ಇದೆ. ಮಕ್ಕಳಲ್ಲಿ ಹೆಚ್ಚಾಗಿ ಡೆಂಘಿ ಕಂಡುಬರ್ತಿದೆ. ಹೀಗಾಗಿ ಶಾಲೆಗಳಿಗೆ ಸರ್ಕ್ಯೂಲರ್ ಹೊರಡಿಸಬೇಕು. ಈಗಾಗಲೇ ಏಳೆಂಟು ಜನ ಸಾವನ್ನಪ್ಪಿದ್ದಾರೆ. ಸೊಳ್ಳೆ ನಿಯಂತ್ರಣ ಮಾಡೋದ್ರಲ್ಲಿ ಸರ್ಕಾರ ಎಡವಿದೆ ಮಂಜುನಾಥ್ ಆರೋಪಿಸಿದ್ದಾರೆ.
ಮಾಜಿ ಡಿಸಿಎಂ ಅಶ್ವಥ್ ನಾರಾಯಣ್ ಮಾತನಾಡಿ, ರಾಜ್ಯದಲ್ಲಿ ಸರ್ಕಾರ ಐಸಿಯುನಲ್ಲಿದ್ದು ,ಕಳೆದ ಒಂದು ತಿಂಗಳಿಂದ ಡೆಂಘಿ ಕಾಡ್ತಿದೆ. ಆದ್ರೆ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿಲ್ಲ ಎಂದು ಆರೋಪಿಸಿದರು. ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸುತ್ತೋಲೆ ಹೊರಡಿಸಬೇಕು. ಖಾಸಗಿ ನರ್ಸಿಂಗ್ ಹೋಮ್‌ನಲ್ಲಿ ಮನ ಬಂದಂತೆ ಡೆಂಘೀ ತಪಾಸಣೆಯ ದರ ಹೆಚ್ಚಿಸಿದ್ದಾರೆ. ಇದರ ಬಗ್ಗೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ