Kannada NewsKarnataka NewsUncategorized

ಖಾನಾಪುರ ತಾಲ್ಲೂಕಿನ 14 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ

ಖಾಸಗಿ ಬೋರವೆಲ್, ಟ್ಯಾಂಕರ್ ಮೂಲಕ ನೀರು ಸರಬರಾಜಿಗೆ ಜಿ.ಪಂ ಸಿಇಒ ಸೂಚನೆ


ಪ್ರಗತಿವಾಹಿನಿ ಸುದ್ದಿ, ಖಾನಾಪುರ: ತಾಲ್ಲೂಕಿನ 14 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದೆ.


ಕಳೆದ ಹಲವು ದಿನಗಳಿಂದ ಹಲಕರ್ಣಿ, ಗಾಂಧಿನಗರ, ಲಕ್ಕೆಬೈಲ, ರಾಮಾಪೂರ, ಕಸಬಾ ನಂದಗಡ,
ಗರ್ಬೆನಟ್ಟಿ ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿಗಳಿಂದ ಬಾಡಿಗೆ ಆಧಾರದ ಮೇಲೆ ಮತ್ತು
ವಡಗಾಂವ, ಲೋಕೋಳಿ, ಕಕ್ಕೇರಿ, ಕರೀಕಟ್ಟಿ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು
ಸರಬರಾಜು ಮಾಡಲಾಗುತ್ತಿದೆ. ಮೇ ತಿಂಗಳಲ್ಲಿ ಈ ಗ್ರಾಮಗಳ ಜೊತೆಗೆ ಉಚವಡೆ ಗ್ರಾಮದಲ್ಲೂ
ನೀರಿನ ಸಮಸ್ಯೆ ಉದ್ಭವಿಸುವ ಸಂಭವವಿದ್ದು, ನೀರಿನ ಸಮಸ್ಯೆ ಕಾಣಿಸಿಕೊಂಡಿರುವ
ಕಡೆಗಳಲ್ಲಿ ಟ್ಯಾಂಕರ್ ಅಥವಾ ಖಾಸಗಿ ಕೊಳವೆಬಾವಿಗಳಿಂದ ನೀರು ಸರಬರಾಜು ಮಾಡುವಂತೆ
ಸಂಬಂಧಿಸಿದ ಅಧಿಕಾರಿಗಳಿಗೆ ಮತ್ತು ಗ್ರಾಪಂ ಪಿಡಿಒಗಳಿಗೆ ಸೂಚಸಲಾಗಿದೆ ಎಂದು ಬೆಳಗಾವಿ
ಜಿಪಂ ಸಿಇಒ ಹರ್ಷಲ್ ಭೋಯಾರ್ ಮಾಹಿತಿ ನೀಡಿದರು.


ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಗೃಹದಲ್ಲಿ ಶುಕ್ರವಾರ ಜರುಗಿದ ತಾಲ್ಲೂಕಿನ ವಿವಿಧ
ಇಲಾಖೆಗಳ ಅಧಿಕಾರಿಗಳು ಮತ್ತು ಪಿಡಿಒಗಳ ಸಭೆ ಉದ್ದೇಶಿಸಿ ಮಾತನಾಡಿದ ಅವರು,
ಬೇಸಿಗೆಯಲ್ಲಿ ಉದ್ಭವಿಸಬಹುದಾದ ನೀರಿನ ಸಮಸ್ಯೆಯ ಬಗ್ಗೆ ಗಮನಹರಿಸಬೇಕು, ಚುನಾವಣೆ
ಸಂದರ್ಭದಲ್ಲಿ ನೀತಿ ಸಂಹಿತೆಗೆ ಧಕ್ಕೆಯಾಗದಂತೆ ಕೆಲಸ ನಿರ್ವಹಿಸಬೇಕು, ಗ್ರಾಮೀಣ ಭಾಗದ
ಪ್ರತಿಯೊಂದು ಮತಗಟ್ಟೆಗಳಲ್ಲಿ ಕನಿಷ್ಠ ಮೂಲಭೂತ ಸೌಲಭ್ಯಗಳಿರುವುದನ್ನು
ಖಾತರಿಪಡಿಸಿಕೊಳ್ಳಬೇಕು, ಮೇ.10ರಂದು ನಡೆಯುವ ಚುನಾವಣೆಯಲ್ಲಿ ಕಡ್ಡಾಯ ಮತದಾನದ
ಕುರಿತು ಮತದಾರರಲ್ಲಿ ಜಾಗೃತಿ ಮೂಡಿಸುವ ಚಟುವಟಿಕೆಗಳನ್ನು ಕೈಗೊಳ್ಳಬೇಕು ಎಂದು
ಅಧಿಕಾರಿಗಳಿಗೆ ಸೂಚಿಸಿದರು.


ಸಭೆಯ ಅಂಗವಾಗಿ ವಿವಿಧ ಯೋಜನೆಗಳಡಿ ಗ್ರಾಮ ಪಂಚಾಯ್ತಿವಾರು ಆಗಿರುವ ಮತ್ತು ಆಗಬೇಕಾದ
ಪ್ರಗತಿ ಪರಿಶೀಲನೆ ನಡೆಸಿದ ಸಿಇಒ, ನರೇಗಾ, ಜಲನಿರ್ಮಲ ಮಿಷನ್ ಮತ್ತು 16ನೇ ಹಣಕಾಸು
ಯೋಜನೆಯಡಿ ಕೈಗೊಂಡ ಮತ್ತು ಕೈಗೊಳ್ಳಬೇಕಾದ ಕಾಮಗಾರಿಗಳ ಬಗ್ಗೆ ಪಿಡಿಒಗಳಿಗೆ
ಸಲಹೆ-ಸೂಚನೆ ನೀಡಿದರು.


ಸಭೆಯ ಬಳಿಕ ತಾಲ್ಲೂಕಿನ ಕಸಬಾ ನಂದಗಡ ಗ್ರಾಮ ಪಂಚಾಯ್ತಿಗೆ ಅನಿರೀಕ್ಷಿತ ಭೇಟಿ ನೀಡಿದ
ಸಿಇಒ, ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಕೈಗೊಳ್ಳಲಾದ ಕಾಮಗಾರಿಗಳ
ಪರಿಶೀಲನೆ ನಡೆಸಿದರು. ಬಳಿಕ ಗ್ರಾಪಂ ಕಚೇರಿಯಲ್ಲಿ ಗ್ರಾಪಂ ಅಧ್ಯಕ್ಷರು, ಸದಸ್ಯರು,
ಪಿಡಿಒ ಮತ್ತು ಸಿಬ್ಬಂದಿ ಜೊತೆ ಸಂವಾದ ನಡೆಸಿದರು.


ಈ ಸಂದರ್ಭದಲ್ಲಿ ತಾ.ಪಂ ಇ.ಒ ವೀರನಗೌಡ ಏಗನಗೌಡರ, ನರೇಗಾ ಸಹಾಯಕ ನಿರ್ದೇಶಕ ಎಂ.ಜಿ
ದೇವರಾಜ್, ನರೇಗಾ ತಾಂತ್ರಿಕ ಸಂಯೋಜಕ ಮುರುಗೇಶ ಯಕ್ಕಂಚಿ, ಎಂಐಎಸ್ ಕೋ-ಆರ್ಡಿನೇಟರ್
ಸಾತಪ್ಪ ಈರಗಾರ, ಐಇಸಿ ಸಂಯೋಜಕ ಮಹಾಂತೇಶ ಜಾಂಗಟಿ ಸೇರಿದಂತೆ ವಿವಿಧ ಇಲಾಖೆಗಳ
ಅಧಿಕಾರಿಗಳು, ಸಿಬ್ಬಂದಿ, ಗ್ರಾಪಂ ಪಿಡಿಒ, ಕಾರ್ಯದರ್ಶಿ ಹಾಗೂ ಸಿಬ್ಬಂದಿ ಇದ್ದರು.

https://pragati.taskdun.com/smile-and-forget-the-bitter-memories/


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button