ಬರ ನಿರ್ವಹಣೆ: ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಸಭೆ
ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಟ್ಯಾಂಕರ್ ಖರೀದಿಗೆ ಕಟ್ಟುನಿಟ್ಟಿನ ಸೂಚನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಜಿಲ್ಲೆಯಲ್ಲಿ ಕುಡಿಯುವ ನೀರು ಸಮಸ್ಯೆ ಕಂಡುಬಂದ ತಕ್ಷಣವೇ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು. ಕುಡಿಯುವ ನೀರು ಸಮಸ್ಯೆ ನಿವಾರಣೆಗೆ ಅನುಕೂಲವಾಗುವಂತೆ ಜಿಲ್ಲೆಯ ಪ್ರತಿಯೊಂದು ಪಂಚಾಯಿತಿಗಳು ಕೂಡಲೇ ಸ್ವಂತ ಟ್ಯಾಂಕರ್ ಖರೀದಿಸಲು ಕ್ರಮ ಕೈಗೊಳ್ಳಬೇಕು ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಸೂಚನೆ ನೀಡಿದರು.
ಬರ ನಿರ್ವಹಣೆ ಕುರಿತು ಸುವರ್ಣ ವಿಧಾನಸೌಧದಲ್ಲಿ ಶುಕ್ರವಾರ(ನ.17) ನಡೆದ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತಿ ಗ್ರಾಮ ಪಂಚಾಯಿತಿಗೆ ಒಂದು ಸ್ವಂತ ಟ್ಯಾಂಕರ್ ಹೊಂದಲು ಕೆಲವು ವರ್ಷಗಳ ಹಿಂದೆ ತಿಳಿಸಲಾಗಿತ್ತು. ಆದ್ದರಿಂದ ಈ ಬಾರಿ ಪ್ರತಿ ಗ್ರಾಮ ಪಂಚಾಯಿತಿ ಕಡ್ಡಾಯವಾಗಿ ಟ್ಯಾಂಕರ್ ಖರೀದಿಸಿ ತಮಗೆ ಪಟ್ಟಿ ಒದಗಿಸಬೇಕು ಎಂದು ತಿಳಿಸಿದರು.
ಒಂದು ವೇಳೆ ಟ್ಯಾಂಕರ್ ಖರೀದಿ ಮಾಡದೇ ಇದ್ದರೆ ಸಂಬಂಧಿಸಿದ ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಟಾಸ್ಕ್ ಫೋರ್ಸ್ ಸಭೆಗಳನ್ನು ನಡೆಸಿ ಸೂಕ್ತ ಯೋಜನೆ ರೂಪಿಸಬೇಕು ಎಂದರು.
ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಾಗಿರುವುದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಬೆಳೆ ಪರಿಹಾರ ಹಾಗೂ ಮೇವು ಪೂರೈಕೆಗೆ ಕ್ರಮ ವಹಿಸಬೇಕು ಎಂದರು.
ನರೇಗಾ ಯೋಜನೆಯಡಿ ಸಮರ್ಪಕ ಬರ ನಿರ್ವಹಣೆಗೆ ಅನುಕೂಲವಾಗುವಂತಹ ಮತ್ತು ಶಾಶ್ವತ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ತಿಳಿಸಿದರು.
ಜಲಜೀವನ ಮಿಷನ್ ಯೋಜನೆ ಪೂರ್ಣಗೊಳಿಸಲು ಸೂಚನೆ:
ಬಹುತೇಕ ಕಡೆ ಜಲಜೀವನ ಮಿಷನ್ ಯೋಜನೆಯ ಕಾಮಗಾರಿಗಳು ಅಪೂರ್ಣವಾಗಿವೆ ಹಾಗೂ ಕಳಪೆಯಾಗಿವೆ ಎಂದು ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಆದ್ದರಿಂದ ಕುಡಿಯುವ ನೀರಿನ ಯೋಜನೆಗಳನ್ನು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.
ಬರ ನಿರ್ವಹಣೆಗೆ ರಾಜ್ಯ ಸರಕಾರ ಈಗಾಗಲೇ ಜಿಲ್ಲೆಗೆ 22.50 ಕೋಟಿ ಬಿಡುಗಡೆ ಮಾಡಿದ್ದು, ಒಟ್ಟಾರೆ 32 ಕೋಟಿ ರೂಪಾಯಿ ಹಣ ಲಭ್ಯವಿರುತ್ತದೆ. ಬರ ನಿರ್ವಹಣೆ ಕಾಮಗಾರಿಗಳಿಗೆ ಹಣಕಾಸಿನ ತೊಂದರೆಯಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ತಿಳಿಸಿದರು.
422 ಕೋಟಿ ರೂಪಾಯಿ ಪರಿಹಾರಕ್ಕೆ ಮನವಿ:
ಮುಂಗಾರು ಮಳೆ ಕೊರತೆ ಎಲ್ಲ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಹಿಂಗಾರು ಹಂಗಾಮಿನ ಬೆಳೆಗಳಿಗೆ ತೇವಾಂಶ ಕೊರತೆಯಾಗಿದೆ. ಪರ್ಯಾಯ ಬೆಳೆಗೆ ಅಗತ್ಯವಿರುವ ಬಿತ್ತ ಬೀಜ ದಾಸ್ತಾನು ಇರುತ್ತದೆ. ಬೀಜ-ಗೊಬ್ಬರಗಳ ಕೊರತೆ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.
3.53 ಲಕ್ಷ ಹೆಕ್ಟೇರ್ ಕೃಷಿ ಬೆಳೆ ಹಾಗೂ 11,814 ಹೆ. ಸೇರಿ ಜಿಲ್ಲೆಯಲ್ಲಿ ಒಟ್ಟಾರೆ 3.65 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿರುತ್ತದೆ.
ರಾಜ್ಯ ಸರಕಾರ 22.50 ಕೋಟಿ ಬಿಡುಗಡೆ ಮಾಡಿದ್ದು, ಒಟ್ಟಾರೆ 31 ಕೋಟಿ ರೂಪಾಯಿ ಜಿಲ್ಲಾಡಳಿತದ ಬಳಿ ಇರುತ್ತದೆ. ಬರ ನಿರ್ವಹಣೆಗೆ ಹಣದ ಕೊರತೆ ಇರುವುದಿಲ್ಲ. ಎನ್.ಡಿ.ಆರ್.ಎಫ್. ನಿಯಮಾವಳಿ ಪ್ರಕಾರ 422 ಕೋಟಿ ಪರಿಹಾರ ಕೇಂದ್ರ ಸರಕಾರದಿಂದ ಬಿಡುಗಡೆಯಾಗಬೇಕಿದೆ
ಜಾನುವಾರುಗಳಿಗೆ ಸದ್ಯಕ್ಕೆ ಮೇವಿನ ಕೊರತೆ ಇರುವುದಿಲ್ಲ. ಜನವರಿ ಬಳಿಕ ಅಗತ್ಯವಿರುವ ಮೇವು ಖರೀದಿಗೆ ಟೆಂಡರ್ ಕರೆಯಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.
ಮುಂಬರುವ ದಿನಗಳಲ್ಲಿ ಕುಡಿಯುವ ನೀರು ಸಮಸ್ಯೆ ನಿರ್ವಹಣೆಗೆ ಹಾಗೂ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಯೋಜನೆ ರೂಪಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಮೇವು ಸಾಗಾಣಿಕೆಗೆ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ವಿವರಿಸಿದರು.
ಆಯಾ ಕ್ಷೇತ್ರಗಳ ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ ಸಭೆಯನ್ನು ನಡೆಸಬೇಕು ಎಂದು ಅವರು ನಿರ್ದೇಶನ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್, ಕುಡಿಯುವ ನೀರು ಸಮಸ್ಯೆ ನಿರ್ವಹಣೆಗೆ ಯೋಜನೆ ರೂಪಿಸಲಾಗಿದೆ. ಟ್ಯಾಂಕರ್ ನೀರು ಪೂರೈಕೆ ಹಾಗೂ ಕೊಳವೆಬಾವಿ ದುರಸ್ತಿ ಮತ್ತಿತರ ಕೆಲಸಗಳಿಗೆ 35 ಕೋಟಿ ರೂಪಾಯಿ ವೆಚ್ಚದ ಪ್ರಸ್ತಾವನೆ ಸರಕಾರಕ್ಕೆ ಸಲ್ಲಿಸಲಾಗಿದೆ ಎಂದು ವಿವರಿಸಿದರು.
ಕೆರೆಗಳ ನೀರನ್ನು ಕುಡಿಯುವ ನೀರಿಗಾಗಿ ಮೀಸಲಿಡಲು ಉಪ ವಿಭಾಗಾಧಿಕಾರಿಗಳು ತಮ್ಮ ವ್ಯಾಪ್ತಿಯ ಕೆರೆಗಳ ನೀರು ಸಮರ್ಪಕ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಬೇಸಿಗೆ ಸಂದರ್ಭದಲ್ಲಿ ಮಹಾರಾಷ್ಟ್ರದಿಂದ ಎರಡು ಬಾರಿ ಕುಡಿಯುವ ನೀರು ಬಿಡುಗಡೆ ಮಾಡಲಾಗುತ್ತದೆ. ಈ ಬಾರಿ ತೀವ್ರ ಸಮಸ್ಯೆ ಎದುರಾಗುವ ಸಾಧ್ಯತೆಗಳಿರುವುದರಿಂದ ಈ ಬಗ್ಗೆ ಅಧಿಕಾರಿಗಳ ಮಟ್ಟದಲ್ಲಿ ಮುಂಚಿತವಾಗಿಯೇ ಚರ್ಚೆ ನಡೆಸಬೇಕು ಎಂದು ತಿಳಿಸಿದರು.
ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ, ಅವರು ಕುಡಚಿ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ತಿಳಿಸಿದರು.
ಸಭೆಯಲ್ಲಿ ಮಾತನಾಡಿದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು, ಏಪ್ರಿಲ್ ವೇಳೆಗೆ ಬರಗಾಲದ ತೀವ್ರ ಸಮಸ್ಯೆಗಳು ಕಂಡುಬರಲಿವೆ. ಆದ್ದರಿಂದ ಕುಡಿಯುವ ನೀರು, ವಿದ್ಯುತ್, ಜಾನುವಾರುಗಳಿಗೆ ಮೇವು ಮತ್ತಿತರ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಭೂಸ್ವಾಧೀನ ಮಾಡಿಕೊಂಡೂ ಬಳಕೆ ಮಾಡದಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ದಾಖಲಾತಿಗಳ ದೊರಕದಿರುವುದರಿಂದ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ. ಆದ್ದರಿಂದ ಕಂದಾಯ, ವಿಶೇಷ ಭೂಸ್ವಾಧೀನಾಧಿಕಾರಿಗಳು, ನೀರಾವರಿ ಇಲಾಖೆಯ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.
ಸವದತ್ತಿ ಶಾಸಕ ವಿಶ್ವಾಸ ವೈದ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಗುಳೇದ, ನದಿತೀರದಲ್ಲಿ ನೀರಾವರಿಗಾಗಿ ಅಳವಡಿಸಲಾಗಿರುವ ಪಂಪ್ ಸೆಟ್ ಕಳ್ಳತನ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು, ಪಶುವೈದ್ಯಕೀಯ ಇಲಾಖೆಯ ವತಿಯಿಂದ ರೈತರಿಗೆ ಮೇವಿನ ಕಿಟ್ ಗಳನ್ನು ವಿತರಣೆ ಮಾಡಿದರು.
ಅಪರ ಜಿಲ್ಲಾಧಿಕಾರಿ ವಿಜಯಕುಮಾರ್ ಹೊನಕೇರಿ, ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರರು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
**
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ