
ಲಿಂಗಾಯತರಿಗೆ ಶೇ.16 ಮೀಸಲಾತಿ ಏಕೆ?: ಯಡಿಯೂರಪ್ಪಗೆ ಬಸವರಾಜ ಹೊರಟ್ಟಿ ಬರೆದ ಪತ್ರ
ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ – ಲಿಂಗಾಯತ ಸಮಾಜಕ್ಕೆ ಶೇ.16ರಷಟು ಮೀಸಲಾತಿ ನೀಡುವ ಕುರಿತಂತೆ ಮಾಜಿ ಸಚಿವ, ವಿಧಾನಪರಿಷತ್ತಿನ ಮಾಜಿ ಸದಸ್ಯ ಬಸವರಾಜ ಹೊರಟ್ಟಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಖಾರವಾದ ಪತ್ರ ಬರೆದಿದ್ದಾರೆ.
ಲಿಂಗಾಯತ ಸಮಾಜದಲ್ಲಿ ಹುಟ್ಟಿದ್ದರಿಂದ ನಿಮಗೆ ಮುಖ್ಯಮಂತ್ರಿ ಪದವಿ ಸಿಕ್ಕಿದೆ, ಆದರೆ ಇಲ್ಲಿಯವರೆಗೆ ಲಿಂಗಾಯತರಿಗೆ ನೀವು ಮಾಡಿದ್ದೇನೆ? ಎಂದು ಪ್ರಶ್ನಿಸಿದ್ದಾರೆ.
ಹೊರಟ್ಟಿ ಬರೆದ ಪತ್ರದ ಪೂರ್ಣ ವಿವರ ಇಲ್ಲಿದೆ –
ಕರ್ನಾಟಕದಲ್ಲಿರುವಂತಹ ಹಿಂದೂ ಮರಾಠಾ ಸಮಾಜಕ್ಕೆ ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದ್ದು ಸಮಸ್ತ ಲಿಂಗಾಯತರ ವೇದಿಕೆ ಇದನ್ನು ತುಂಬು ಹೃದಯದಿಂದ ಸ್ವಾಗತಿಸಿದ್ದಾರೆ. ಇದು ಬಹಳ ದಿನಗಳಿಂದ ಅವರ ಬೇಡಿಕೆಯಾಗಿತ್ತು. ತಾವು ಗಟ್ಟಿ ನಿಲುವು ತಾಳಿ ಅದನ್ನು ಈಡೇರಿಸಿದ್ದಕ್ಕೆ ಅಭಿನಂದನೆಗಳು.
ಕರ್ನಾಟಕದಲ್ಲಿ ಅನೇಕ ದಿನಗಳಿಂದ ಲಿಂಗಾಯತರಿಗೆ ಶೇಕಡ ೧೬ ರಷ್ಟು ಮೀಸಲಾತಿ ಕೊಡಬೇಕೆಂದು ಕರ್ನಾಟಕದ ಸಮಸ್ತ ಲಿಂಗಾಯತರು ನಿಮಗೆ ಹತ್ತು ಹಲವಾರು ಬಾರಿ ಮನವಿಗಳನ್ನು ಸಲ್ಲಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಮರಾಠಾ ಸಮಾಜಕ್ಕೆ ಶೇಕಡ ೧೬ ರಷ್ಟು ಮೀಸಲಾತಿ ಆ ಸರಕಾರ ನೀಡಿ, ಆ ಸಮಾಜ ಎಲ್ಲ ಅನುಕೂಲತೆಗಳನ್ನು ಪಡೆಯುತ್ತಿದೆ. ಆದರೆ ಅಲ್ಲಿ ಮರಾಠಾ ಸಮುದಾಯ ಮಹಾರಾಷ್ಟ್ರದಲ್ಲಿ ಅಷ್ಟು ದೊಡ್ಡ ಸಂಖ್ಯೆಯಲ್ಲಿರುವುದು.
ಅದರಂತೆ ಕರ್ನಾಟಕದಲ್ಲಿ ಲಿಂಗಾಯತರು ಅತಿ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಅವರಿಗೆ ಶೇಕಡ ೧೬ ರಷ್ಟು ಮೀಸಲಾತಿಯನ್ನು ಕೊಡುವದು ಯೋಗ್ಯವಲ್ಲವೇ? ಇಡೀ ಕರ್ನಾಟಕದ ಸಮಸ್ತ ಲಿಂಗಾಯತರ ಹೋರಾಟ ವೇದಿಕೆ ತಮ್ಮನ್ನು ಭೆಟ್ಟಿಯಾಗಿ ಶೇಕಡ ೧೬ ರಷ್ಟು ಮೀಸಲಾತಿ ಕಲ್ಪಿಸಬೇಕೆಂದು ಕೇಳಿಕೊಂಡರೂ ಇಲ್ಲಿಯವರೆಗೆ ಯಾವ ಕ್ರಮ ತೆಗೆದುಕೊಂಡಿರುವುದಿಲ್ಲ.
ರಾಜ್ಯದಲ್ಲಿ ಶಾಸನ ಸಭೆಗಳಿಗೆ ಚುನಾವಣೆಗಳು ನಡೆದಾ ತಾವು ಚುನಾವಣಾ ಪ್ರಚಾರದಲ್ಲಿ ಲಿಂಗಾಯತರ ಒಂದು ಮತವೂ ಬೇರೆ ಪಕ್ಷದ ಅಭ್ಯರ್ಥಿಗೆ ಹೋಗಬಾರದೆಂದು ಇಲ್ಲಿಯವರೆಗೆ ತಾವು ಲಿಂಗಾಯತರಿಗೆ ಮಾಡಿದ್ದೇನು. ತಾವು ಲಿಂಗಾಯತ ಸಮಾಜದಲ್ಲಿ ಹುಟ್ಟಿದ್ದರಿಂದ ನಿಮಗೆ ಮುಖ್ಯ ಮಂತ್ರಿ ಪದವಿ ಸಿಕ್ಕಿದೆ ಎಂಬುದನ್ನು ಸಹ ನೀವು ನೆನಪಿನಲ್ಲಿಟ್ಟುಕೊಳ್ಳಬೇಕು. ಹಿತ್ತಲ ಗಿಡ ಮದ್ದಲ್ಲ ಎಂದು ಹೇಳುವ ಗಾದೆ ಮಾತಿನಂತೆ ನೀವು ಲಿಂಗಾಯತರನ್ನು ನಿಷ್ಕಾಳಜಿ ಮಾಡುತ್ತೀರಂಬುದು ಅನೇಕರ ಅಹವಾಲು.
ಈ ದಿಸೆಯಲ್ಲಿ ನೀವು ಲಿಂಗಾಯತರಿಗೆ ಶೇಕಡ ೧೬ ಮೀಸಲಾತಿಯನ್ನು ಕಲ್ಪಿಸಲೇಬೇಕು ಎಂಬುದು ಸಮಸ್ತ ಲಿಂಗಾಯತರ ಬೇಡಿಕೆಯಾಗಿದೆ. ನೀವು ಮುಖ್ಯ ಮಂತ್ರಿಗಳಾದ ನಂತರ ಬಹಳಷ್ಟು ಜನರು ಲಿಂಗಾಯತರಿಗೆ ಶೇಕಡ ೧೬ ಮೀಸಲಾತಿ ದೊರೆಯುತ್ತದೆಂಬ ನಿರೀಕ್ಷೆಯಲ್ಲಿದ್ದರು. ಈಗ ಅವರೆಲ್ಲರಿಗೂ ನಿರಾಸೆಯಾಗಿದೆ.
ಬೇರೆ ಬೇರೆ ಸಮುದಾಯದವರು ತಮಗೆ ಹೆಚ್ಚು ಹೆಚ್ಚು ಮೀಸಲಾತಿಯನ್ನು ಕೊಡಬೇಕೆಂದು ಹೋರಾಟ ಮಾಡುತ್ತಿದ್ದಾರೆ. ಅವರ ಹೋರಾಟಗಳು ನ್ಯಾಯಯುತವಾಗಿರುವುದರಿಂದ ಅದಕ್ಕೆ ಅವರು ಒತ್ತಾಯ ಮಾಡುತ್ತಿದ್ದಾರೆ. ಜ್ಯಾತ್ಯಾತೀತ ರಾಷ್ಟ್ರವಾದರೂ ಜ್ಯಾತ್ಯಾತೀತ ಮನೋಭಾವನೆ ಹೊಂದಿದ ಕರ್ನಾಟಕದಲ್ಲಿಯೂ ಎಲ್ಲವೂ ಜ್ಯಾತಿಯ ಆಧಾರದಲ್ಲಿಯೇ ನಡೆಯುತ್ತಿದೆ.
ತಮಿಳುನಾಡು ಮತ್ತು ಹರಿಯಾನಾ ಮೊದಲಾದ ಬೇರೆ ಬೇರೆ ರಾಜ್ಯಗಳಲ್ಲಿ ಜನಸಂಖ್ಯೆಯ ಆಧಾರದ ಮೇಲೆ ಮೀಸಲಾತಿ ಕಲ್ಪಿಸಿದ್ದಾರೆ. ಲಿಂಗಾಯರಲ್ಲಿಯೂ ಶೇಕಡ ೧೦೦ ರಲ್ಲಿ ೭೦ ರಷ್ಟು ಬಡವರು, ಕೂಲಿಕಾರರು ಇದ್ದಾರೆ. ಲಿಂಗಾಯತ ಸಮಾಜವು ಕೃಷಿಯ ಮೇಲೆ ಬದುಕಿರುವುದು. ಭೂಮಿ ತಾಯಿ ಒಡಲಲ್ಲೇ ಬದುಕಿನ ತುತ್ತಿನ ಚೀಲವನ್ನು ತುಂಬಿಕೊಳ್ಳುತ್ತಿದ್ದಾರೆ. ಪ್ರಕೃತಿಯ ವಿಕೋಪದಿಂದ ಇವರ ಜೀವನ ಹೆಚ್ಚು ಕಡಿಮೆಯಾಗಿದ್ದರಿಂದ ಸದಾ ಕಷ್ಟವನ್ನೇ ಅನುಭವಿಸುತ್ತಿರುವ ಈ ಸಮಾಜಕ್ಕೆ ಮೀಸಲಾತಿ ಕೊಡುವುದು ನ್ಯಾಯಯುತವಾದದ್ದು.
ಎಲ್ಲರೂ ಅಧಿಕಾರವಿದ್ದಾಗ ತಮ್ಮ ತಮ್ಮ ಸಮುದಾಯ, ಸಮಾಜದ ಬಗ್ಗೆ ಕಾಳಜಿಯನ್ನು ವಹಿಸುತ್ತಾರೆ. ಅವರಂತೆ ನೀವೇಕೆ ಕಾಳಜಿ ವಹಿಸಬಾರದು? ಮೇಲಿನ ಎಲ್ಲ ಅಂಶಗಳನ್ನು ಗಮನಕ್ಕೆ ತೆಗೆದುಕೊಂಡು ತಕ್ಷಣ ಶೇಕಡ ೧೬ ರಷ್ಟು ಮೀಸಲಾತಿಯನ್ನು ಲಿಂಗಾಯತ ಸಮುದಾಯಕ್ಕೆ ಕಲ್ಪಿಸುತ್ತೀರೆಂದು ನಂಬಿದ್ದೇನೆ. ಮರಾಠಾ ಸಮಾಜಕ್ಕೆ ಕರ್ನಾಟಕದಲ್ಲಿ ಪ್ರಾಧಿಕಾರ ಮಾಡಿದ್ದರಿಂದ ಮಹಾರಾಷ್ಟ್ರದಲ್ಲಿ ಅಲ್ಪಸಂಖ್ಯಾತ ಲಿಂಗಾಯತರಿಗೆ ಸಹ ಅಲ್ಲಿಯ ಸರಕಾರ ಅವರಿಗೂ ಅಲ್ಲಿಯ ಲಿಂಗಾಯತ ಸಮಾಜಕ್ಕೆ ಮೀಸಲಾತಿ ಸೌಲಭ್ಯವನ್ನು ಕಲ್ಪಿಸಬಹುದು.
ನಾನು ಈ ಪತ್ರ ಬರೆಯುವ ಸ್ಪಷ್ಟ ಉದ್ದೇಶ ಕರ್ನಾಟಕದ ಸಮಸ್ತ ಲಿಂಗಾಯತರ ಬೇಡಿಕೆ, ಒತ್ತಾಯ ಇವೆಲ್ಲವುಗಳನ್ನು ನಾನು ಬಲ್ಲವನಾಗಿದ್ದರಿಂದ ನಿಮಗೆ ಈ ಒತ್ತಾಯವನ್ನು ಮಾಡುತ್ತಿದ್ದೇನೆ. ನನ್ನ ಒತ್ತಾಯ ನನಗೆ ವೈಯಕ್ತಿಕವಾಗಿ ಯಾವ ಲಾಭವೂ ಇಲ್ಲ, ನಷ್ಟವೂ ಇಲ್ಲ. ಆದರೆ ಈ ಸಮಾಜದಲ್ಲಿ ನಾನು ಹುಟ್ಟಿದ್ದರಿಂದ ಕೆಲವರು ನನಗೆ ಮುಖ್ಯ ಮಂತ್ರಿಗಳಿಗೆ ನೀವು ತಿಳಿಸಬೇಕೆಂದು ನನಗೆ ಎಲ್ಲರೂ ಒತ್ತಾಯ ಮಾಡಿದ್ದು ಅವರ ವಿನಂತಿಯನ್ನು ನಿಮ್ಮ ಮುಂದೆ ಇಟ್ಟಿದ್ದೇನೆ. ನಿಮ್ಮ ಇಚ್ಛಾ ಶಕ್ತಿ ಇದ್ದರೆ ಮಾಡುವುದು ಒಳ್ಳೆಯದು ಹಾಗೂ ಸೂಕ್ತವೆಂದು ನನ್ನ ಭಾವನೆ.