Latest

ಆಂಬ್ಯುಲೆನ್ಸ್ ಗೆ ಹಣವಿಲ್ಲದೆ ಶಿಶುವಿನ ಶವ ಚೀಲದಲ್ಲಿಟ್ಟು ತಂದ ನತದೃಷ್ಟ ತಂದೆ

ಪ್ರಗತಿವಾಹಿನಿ ಸುದ್ದಿ, ಜಬಲ್‌ಪುರ: ಆಂಬ್ಯುಲೆನ್ಸ್ ಗೆ ನೀಡಲು ಹಣವಿಲ್ಲದ ಕಾರಣ ವ್ಯಕ್ತಿಯೊಬ್ಬರು ತಮ್ಮ ಶಿಶುವಿನ ಶವವನ್ನು ಚೀಲದಲ್ಲಿಟ್ಟುಕೊಂಡು ತಂದ ಹೃದಯವಿದ್ರಾವಕ ಘಟನೆ ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯಲ್ಲಿ ನಡೆದಿದೆ.

ಬುಡಕಟ್ಟು ಜನಾಂಗದ ಸುನೀಲ್ ಧುರ್ವೆ ಎಂಬುವವರು ಈ ರೀತಿ ಶಿಶುವಿನ ಶವ ಸಾಗಿಸಿದ ನತದೃಷ್ಟ ತಂದೆ. ಅವರ ಪತ್ನಿ ಜುಮ್ನಿಬಾಯಿ ಜಬಲ್‌ಪುರದ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮಗುವೊಂದಕ್ಕೆ ಜನ್ಮ ನೀಡಿದ್ದಾರೆ. ಆದರೆ ನವಜಾತ ಶಿಶು ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆ ಕೊಡಿಸಿದರೂ ಬದುಕಿ ಉಳಿಯಲಿಲ್ಲ.

ಆಸ್ಪತ್ರೆಯವರು ಶಿಶುವಿನ ಶವವನ್ನು ದಂಪತಿಗೆ ಹಸ್ತಾಂತರಿಸಿದರಾದರೂ ಮೃತದೇಹ ಸಾಗಿಸಲು ಆಂಬ್ಯುಲೆನ್ಸ್‌ ಗೆ ನೀಡಲು ದಂಪತಿ ಬಳಿ ಹಣವಿರಲಿಲ್ಲ. ಕೊನೆಗೆ ಕೈಯಲ್ಲಿದ್ದ ಚೀಲದಲ್ಲೇ ಮಗುವಿನ ಶವ ಹಾಕಿಕೊಂಡು ಅಲ್ಲೇ ಇದ್ದ ಬಸ್‌ನಲ್ಲಿ ಕುಳಿತಿದ್ದಾರೆ. ನವಜಾತ ಶಿಶುವಿನ ಮೃತದೇಹವನ್ನು ವೈದ್ಯಕೀಯ ಕಾಲೇಜಿನಿಂದ ಆಟೋ ರಿಕ್ಷಾದಲ್ಲಿ ಜಬಲ್‌ಪುರ ಬಸ್ ನಿಲ್ದಾಣಕ್ಕೆ ತೆಗೆದುಕೊಂಡು ಬಂದಿದ್ದಾರೆ. ಆದರೆ ಬಸ್ ಚಾಲಕ ಮೃತದೇಹದೊಂದಿಗೆ ಬಸ್ ಪ್ರವೇಶಿಸಲು ತಡೆದಿದ್ದಾನೆ.

ದಿಕ್ಕು ತೋಚದ ವ್ಯಕ್ತಿ ಮಗು ಕಳೆದುಕೊಂಡ ದುಃಖದ ಮಧ್ಯೆ ಶಿಶುವಿನ ಮೃತದೇಹವನ್ನು ಚೀಲದಲ್ಲಿ ಇಟ್ಟುಕೊಂಡು ಮತ್ತೊಂದು ಬಸ್ ನಲ್ಲಿ 150 ಕಿಲೋಮೀಟರ್ ಪ್ರಯಾಣಿಸಿ ತಡರಾತ್ರಿ ದಿಂಡೋರಿಗೆ ತಲುಪಿದ್ದಾರೆ. ಚೀಲದಲ್ಲಿ ಶಿಶುವಿನ ಶವ ಇಟ್ಟುಕೊಂಡು ತಮ್ಮ ಸಂಬಂಧಿಕರಿಗಾಗಿ ದಿಂಡೋರಿ ಬಸ್ ನಿಲ್ದಾಣದಲ್ಲಿ ಅಲೆದಾಡಿದರೂ ಯಾರೂ ಸಹಾಯಕ್ಕೆ ಮುಂದಾಗಲಿಲ್ಲ ಎನ್ನಲಾಗಿದೆ.

Home add -Advt

ಸರಕಾರ ಜನಕಲ್ಯಾಣಕ್ಕೆ ಎಷ್ಟೇ ಅನುದಾನ ಒದಗಿಸಿದರೂ ಕೆಲ ಸಂದರ್ಭಗಳಲ್ಲಿನ ಅನಿವಾರ್ಯತೆಗಳು ಇಂಥ ಹೃದಯವಿದ್ರಾವಕ ಘಟನೆಗಳಿಗೆ ಕಾರಣವಾಗುತ್ತಿರುವುದು ಶೋಚನೀಯ.

Related Articles

Back to top button