Karnataka NewsLatestPolitics

*ಗುರು ದ್ವಾರಕನಾಥ್ ನುಡಿದ ಭವಿಷ್ಯ ಹೇಳಿದ ಸಿಎಂ ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರು: ದ್ವಾರಕನಾಥ್ ಅವರು ಸುಬ್ರಹ್ಮಣ್ಯ ದೇವಾಲಯ ಕಟ್ಟುವ ವಿಚಾರ ಹೇಳುತ್ತಲೇ ಇದ್ದರು. ನಾನು ಸಂದರ್ಭ ಬರಲಿ ಎಂದು ಹೇಳಿದ್ದೆ. ಈಗ ಸಂದರ್ಭ ಬಂದಿದೆ. ದ್ವಾರಕನಾಥ್ ಅವರು ನನಗೆ ಪೂಜ್ಯ ಗುರು ಸಮಾನರು. ಅವರ ಕುಟುಂಬ ಬಹಳ ಉತ್ತಮವಾಗಿ ಬೆಳೆಯುತ್ತಿದೆ. ದ್ವಾರಕನಾಥ್ ಅವರು ಹಿಂದೆ ಒಂದು ಭವಿಷ್ಯ ನುಡಿದಿದ್ದರು. ಅದನ್ನು ನಾನು ಇಲ್ಲಿ ಹೇಳಿದರೆ ದೊಡ್ಡ ಸುದ್ದಿಯಾಗುತ್ತದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಬೆಂಗಳೂರಿನ ಬನಶಂಕರಿಯ ಆರನೇ ಹಂತದ ಲಿಂಗಧೀರನಹಳ್ಳಿಯಲ್ಲಿ ಶ್ರೀ ಷಣ್ಮುಖ ಸುಬ್ರಮಣ್ಯ ದೇಗುಲದ ಶೀಲಾನ್ಯಾಸ ನೆರವೇರಿಸಿ ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್, ದೇವಾಲಯ ಎಂದರೆ ಭಕ್ತಿ, ಶಕ್ತಿ, ಸಂಸ್ಕಾರ, ಮತ್ತು ಧರ್ಮದ ನೆಲೆ. ಭಕ್ತ ಹಾಗೂ ಭಗವಂತನಿಗೆ ವ್ಯವಹಾರ ನಡೆಯುವ ಸ್ಥಳ. ಈ ದೇವಾಲಯದಲ್ಲಿ ಭಕ್ತರು ಬಂದು ಶಾಂತಿ ಪಡೆದುಕೊಳ್ಳಬೇಕು. ನಮ್ಮ ವೀರ ಗಂಗಾಧರ ಅಜ್ಜಯ್ಯ ಅವರು ಮಾನವ ಧರ್ಮಕ್ಕೆ ದೇವ ಆಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಅಂತ ಹೇಳಿ ಅವರು ಘೋಷಣೆಯನ್ನ ಮಾಡಿದ್ದಾರೆ ಎಂದರು.

ದ್ವಾರಕಾನಾಥ ಅವರು ಸುಬ್ರಹ್ಮಣ್ಯೇಶ್ವರ ದೇವಾಲಯ ಕಟ್ಟಿದ್ದಾರೆ. ಆಗ ಅವರ ಮನೆ ದೇವರು ಮೈಲಾರೇಶ್ವರ ಅಂತ ಹೇಳಿದರು. ಆದರೆ ಧರ್ಮ ಯಾವುದಾದರೂ ತತ್ವ ಒಂದೇ. ನಾಮ ಯಾವುದಾದರೂ ದೈವ ಒಂದೇ. ಪೂಜೆ ಯಾವುದಾದರೂ ಭಕ್ತಿ ಒಂದೇ. ಕರ್ಮ ಯಾವುದಾದರೂ ನಿಷ್ಠೆ ಒಂದೇ. ದೇವರೊಬ್ಬ ನಾಮ ಹಲವು ಎಂದರು.

ದೇವರ ರೂಪ ವಿವಿಧ ರೀತಿಯಲ್ಲಿ ಇರುತ್ತದೆ. ಕಲ್ಲು, ಗೋಡೆ, ಮನುಷ್ಯ ಹೀಗೆ ಪಶುಗಳಲ್ಲಿ ದೈವ ಸ್ವೂರಪವಿದೆ. ಕಾಯಕವೇ ಕೈಲಾಸ ಎಂದು ಬಸವಣ್ಣ ಹೇಳಿದ್ದಾರೆ. ವಿಧಾನಸೌಧದ ಮೇಲೆ ಸರ್ಕಾರದ ಕೆಲಸ ದೇವರ ಕೆಲಸ ಎಂದು ಬರೆದಿದ್ದಾರೆ ಎಂದರು.

Home add -Advt

ಶಿವನ ಮೂರನೇ ಕಣ್ಣಿನ ತೇಜಸ್ಸಿನಿಂದ ಹುಟ್ಟಿದವನು ಸುಬ್ರಹ್ಮಣ್ಯ. ನಾವು ಯಾವುದೇ ಪೂಜೆ ಮಾಡಿದ್ರು, ಏನೇ ಮಾಡಿದರೂ ಎಷ್ಟೇ ನದಿಗಳು ಹರಿದರೂ ಕೊನೆಗೆ ಸಮುದ್ರಕ್ಕೆ ಸೇರುವುದು. ಅದೇ ರೀತಿ ಯಾವುದೇ ದೇವರಿಗೆ ಪೂಜೆ ಮಾಡಿದರೂ ಕೊನೆಗೆ ಆ ಭಗವಂತನಿಗೆ ಸೇರಲಿದೆ ಎಂದರು.

ಆ ಸುಬ್ರಹ್ಮಣ್ಯನ ಕೃಪೆ ಎಲ್ಲರ ಮೇಲಿರಲಿ. ಒಬ್ಬರಿಂದಲೇ ದೇವಸ್ಥಾನ ಕಟ್ಟಲು ಸಾಧ್ಯವಿಲ್ಲ. ಎಲ್ಲರೂ ಕೈ ಜೋಡಿಸಿದರೆ ಮಾತ್ರ ಸಾಧ್ಯ. ಇದು ಜನರ, ನಿಮ್ಮ ದೇವಾಲಯ ಆಗಬೇಕು ಎಂದರು.

ಭಕ್ತಿಯ ಅಡಿಪಾಯದ ಮೇಲೆ ದೈವ ಕೃಪೆಯ ಗೋಪುರವನ್ನ ಕಟ್ಟಲಿಕ್ಕೆ ನಾವೆಲ್ಲ ಸೇರಿದ್ದೇವೆ. ಧರ್ಮ ಏವ ಹತೋ ಹಂತಿ ಧರ್ಮೋ ರಕ್ಷತಿ ರಕ್ಷಿತಃ/ ತಸ್ಮಾಧರ್ಮೋ ನ ಹಂತವ್ಯೋ ಮಾ ನೋ ಧರ್ಮೋ ಹತೋವಧೀತ್. ಯಾರು ಧರ್ಮವನ್ನ ಕಾಪಾಡುತ್ತಾರೋ ಧರ್ಮವು ಅವರನ್ನ ಕಾಪಾಡುತ್ತದೆ. ಯಾವುದೇ ಜಾತಿಯವರು ಇರಬಹುದು ಹಿಂದೂ, ಕ್ರೈಸ್ತ, ಮುಸಲ್ಮಾನ, ಸಿಖ್, ಜೈನ ಹೀಗೆ ಅವರವರ ಧರ್ಮ, ಪದ್ಧತಿಯನ್ನ ಕಾಪಾಡಿಕೊಳ್ಳಬೇಕು. ನಾವಿದನ್ನೆಲ್ಲಾ ಸೃಷ್ಟಿ ಮಾಡಿದ್ದೇವೆ. ದೇವಸ್ಥಾನ ಮಾಡೋದು ಅವರ ಕೆಲಸ ಅಲ್ಲ. ನಿಮ್ಮ ನಮ್ಮೆಲ್ಲರ ಕೆಲಸ. ಇದನ್ನ ಬೆಳೆಸಿ ಉಳಿಸಿಕೊಳ್ಳೋಣ ಎಂದು ಹೇಳಿದರು. “ಇದು ಭಕ್ತಿಯ ಪೂಜೆ. ಇದು ನಮ್ಮ ಭೂಮಿ ಪೂಜೆ. ಇದು ನಮ್ಮ ನಾಡಿನ ಭಕ್ತಿಯ ಸಂಪ್ರದಾಯದ ಪೂಜೆ” ಎಂದರು.

ನನಗೆ ಸಿ ವಿ ಶಾಸ್ತ್ರೀ ಅವರು ದ್ವಾರಕನಾಥ್ ಅವರನ್ನು ಪರಿಚಯ ಮಾಡಿಕೊಟ್ಟರು. ನನಗೆ ಮೂವತ್ತೈದು ವರ್ಷದಿಂದಲೇ ಮಾರ್ಗದರ್ಶನ ನೀಡುತ್ತಾ ಬಂದವರು. ನನ್ನ ಹಾಗೂ ಅವರ ನಡುವೆ ನಡೆದ ವ್ಯವಹಾರಗಳು, ಚಟುವಟಿಕೆಗಳು, ಅವರು ಕೊಟ್ಟಂತ ಮಾರ್ಗದರ್ಶನ ಹೀಗೆ ಎಲ್ಲಾ ಸನ್ನಿವೇಶಗಳನ್ನು ಹೇಳಿದರೆ ಒಂದು ದೊಡ್ಡ ಚರಿತ್ರೆಯ ಪುಸ್ತಕವನ್ನೇ ಬರೆಯಬಹುದು ಎಂದರು.

ದ್ವಾರಕನಾಥ್ ಅವರೂ ಟೀಕೆಗೆ ಒಳಗಾಗಿದ್ದಾರೆ. ಅವರ ಮೇಲೆ ಮಾಧ್ಯಮದವರೂ ದಾಳಿ ಮಾಡಿದ್ದಾರೆ. ಡಿ ಕೆ ಶಿವಕುಮಾರ್ ಪರವಾಗಿ ಮಾತನಾಡುತ್ತಿದ್ದೀರಿ ಎಂದು ಕೇಳಿದ್ದಾರೆ. ಇಪ್ಪತ್ತೈದು ವರ್ಷದಿಂದ ಬೇಕಾದಷ್ಟು ಅವರಿಗೆ ಧಮ್ಕಿಗಳನ್ನ ಹಾಕ್ತಿದ್ದಾರೆ. ಆ ಧಮ್ಕಿಗಳಿಗೆ ಅವರು ಯಾವತ್ತೂ ಹೆದರಿಕೊಂಡಿಲ್ಲ. ದೇವರಾಜ ಅರಸು ಅವರು, ಎಸ್ ಎಂ ಕೃಷ್ಣ ಅವರು, ಧರ್ಮಸಿಂಗ್ ಅವರು ಅನೇಕ ಮುಖ್ಯಮಂತ್ರಿಗಳು ಅವರ ಸಲಹೆ ಪಡೆದಿದ್ದಾರೆ ಎಂದರು.

ಮಾಜಿ ಸಂಸದರ ಮಗ ನನ್ನ ಸ್ನೇಹಿತರಾದ ಸುಬ್ರಹ್ಮಣ್ಯ ಅವರ ಪತ್ನಿಗೆ ಕ್ಯಾನ್ಸರ್ ಆಗಿತ್ತು. 1993-94 ರ ಕಾಲ ಅಂದು ನಾನು ನನ್ನ ಪತ್ನಿ ಅವರನ್ನು ನೋಡಲು ಹೋಗಿದ್ದೆವು. ಅಂದು ಅಷ್ಟೊಂದು ವೈದ್ಯಕೀಯ ಸವಲತ್ತು ಇರಲಿಲ್ಲ. ಅವರು ಉಳಿಯುವ ಸ್ಥಿತಿಯಲ್ಲೂ ಇರಲಿಲ್ಲ. ನಾನು ಅವರ ಆಪ್ತರಿಂದ ಹೆಣ್ಣುಮಗಳ ಹಾಗೂ ಮಕ್ಕಳ ಜಾತಕ ತರಲು ಹೇಳಿದೆ. ಅದನ್ನು ಗುರುಗಳಾದ ದ್ವಾರಕನಾಥ್ ಅವರಿಗೆ ನೀಡಿದೆ. ಅವರು ಅದನ್ನು ನೋಡಿ ಈ ಮಕ್ಕಳ ಜಾತಕದಲ್ಲಿ ತಾಯಿಯನ್ನು ಕಳೆದುಕೊಳ್ಳುವುದಿಲ್ಲ ಎಂದಿದೆ ಎಂದರು. ನಂತರ ಹೊಸದುರ್ಗದ ಬಳಿ ಇರುವ ಆಂಜನೇಯನ ದೇವಸ್ಥಾನಕ್ಕೆ ತೆರಳಿ ಪೂಜೆ ಹೋಮ ಮಾಡಿ ಸಾಕು ಎಂದರು. ಆ ಹೆಣ್ಣು ಮಗಳು ಇನ್ನೂ ಆರೋಗ್ಯವಾಗಿ ಇದ್ದಾರೆ ಎಂದರು.

ಭಕ್ತಿಯ ಮೂಲಕ ಆಧ್ಯಾತ್ಮದ ದೊಡ್ಡ ಬೀಜವನ್ನ ಬಿತ್ತುವ ಕೆಲಸ ಮಾಡಲಾಗಿದೆ. ನಿಮ್ಮೆಲ್ಲರಿಗೂ ಕೂಡ ಮಂಗಳವಾಗಲಿ, ಶುಭವಾಗಲಿ, ಆರೋಗ್ಯ, ಜ್ಞಾನ, ನೆಮ್ಮದಿ ದೊರೆಯಲಿ. ಭಾರತೀ ತೀರ್ಥ ಮಹಾಸ್ವಾಮಿಗಳು ಹಾಗೂ ವಿಧುಶೇಖರ ಭಾರತೀ ತೀರ್ಥ ಸ್ವಾಮೀಗಳು ನನಗೆ ಆಶೀರ್ವಾದ ಮಾಡಿಕೊಂಡು ಬಂದಿದ್ದಾರೆ. ಈ ಪವಿತ್ರವಾದ ಸ್ಥಳದಲ್ಲಿ ಶಾಂತಿ, ನೆಮ್ಮದಿ ಜನರಿಗೆ ದೊರೆಯಲಿ ಎಂದರು.

Related Articles

Back to top button