
ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಹಾಲಿ ಕರ್ನಾಟಕ ವಿಧಾನಸಭೆ ಅವಧಿ 2023ರ ಮೇ 24ಕ್ಕೆ ಮುಕ್ತಾಯಗೊಳ್ಳುತ್ತಿದ್ದು ಮುಂದಿನ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸುತ್ತಿದೆ. ಇದರ ಜೊತೆಗೇ ತವರು ಜಿಲ್ಲೆಯಲ್ಲಿರುವ ಸರಕಾರಿ ನೌಕರರನ್ನು ತಕ್ಷಣವೇ ಎತ್ತಂಗಡಿ ಮಾಡಲು ಸರಕಾರಕ್ಕೆ ಸೂಚಿಸಿದೆ.
ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಈಗಾಗಲೇ ವಿಚಾರಣೆ ಕೈಗೊಂಡಿರುವ ಆಯೋಗ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು ಚುನಾವಣೆ ಕರ್ತವ್ಯಕ್ಕೆ ನಿಯೋಜನೆಯಾಗುವವರ ಮೇಲೆ ತೀವ್ರನಿಗಾ ವಹಿಸಲು ಸೂಚಿಸಿದೆ.
ಯಾವುದೇ ಅಧಿಕಾರಿಗಳು ತವರು ಜಿಲ್ಲೆಯಲ್ಲಿದ್ದರೆ ಅಥವಾ ದೀರ್ಘ ಕಾಲದಿಂದ ಒಂದೇ ಸ್ಥಳದಲ್ಲಿ ಬೀಡುಬಿಟ್ಟಿದ್ದರೆ ಅವರನ್ನು ತಕ್ಷಣ ಅಲ್ಲಿಂದ ಪರ ಜಿಲ್ಲೆಗಳಿಗೆ ನಿಯೋಜಿಸಬೇಕು ಎಂದು ತಿಳಿಸಿದೆ. ಬಡ್ತಿ ಹೆಸರಿನಲ್ಲಿ ತವರು ಜಿಲ್ಲೆಯಲ್ಲಿದ್ದವರಿಗೂ ಇದು ಅನ್ವಯಿಸಲಿದೆ.
ಪೊಲೀಸ್ ಇಲಾಖೆಯಲ್ಲಿ ಪಿಎಸ್ ಐ ಅಥವಾ ಅದಕ್ಕಿಂತ ಮೇಲ್ದರ್ಜೆಯ ಅಧಿಕಾರಿಗಳು ತವರು ಜಿಲ್ಲೆಯಲ್ಲಿದ್ದರೆ ಅಥವಾ 2023ರ ಮೇ 31ರ ಮೊದಲಿಗೆ 3 ವರ್ಷಗಳು ಒಂದೇ ಸ್ಥಳದಲ್ಲಿದ್ದರೆ ಅವರನ್ನು ಆ ಜಿಲ್ಲೆಯಲ್ಲಿ ಇರಿಸಕೂಡದು.
ವಿವಿಧ ಇಲಾಖೆಗಳ ರಾಜ್ಯ ಪ್ರಧಾನ ಕಚೇರಿಯಲ್ಲಿ ನಿಯೋಜಿಸಲಾದ ಅಧಿಕಾರಿಗಳು, ವೈದ್ಯರು, ಎಂಜಿನಿಯರ್ ಗಳು, ಶಿಕ್ಷಕರು ಪ್ರಾಚಾರ್ಯರು ಹಾಗೂ ಚುನಾವಣೆಗೆ ನೇರ ಸಂಬಂಧಿಸದ ನೌಕರರಿಗೆ ಇದು ಅನ್ವಯವಾಗುವುದಿಲ್ಲ.
ಯಾವುದೇ ನೌಕರರ ವಿರುದ್ಧ ರಾಜಕೀಯ ಪಕ್ಷಪಾತ ಅಥವಾ ಪೂರ್ವಾಗ್ರಹದಂಥ ಆರೋಪಗಳು ದೂರುಗಳಿದ್ದರೆ ಅಥವಾ ವಿಚಾರಣೆಯಲ್ಲಿ ಸಾಬೀತಾಗಿದ್ದರೆ ಅಂಥವರನ್ನು ತಕ್ಷಣ ವರ್ಗಾಯಿಸಲು ಅಥವಾ ಸೂಕ್ತ ಕ್ರಮ ಕೈಗೊಳ್ಳಲು ಅನುಮತಿ ನೀಡಲಾಗಿದೆ.
ಭೀಕರ ಅಪಘಾತ; ಮಗು ಸೇರಿ ಮೂವರು ದುರ್ಮರಣ