ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ರಾಷ್ಟ್ರ ವಿರೋಧಿ ಚಟುವಟಿಕೆಗಳಿಗೆ ಚೀನಾದಿಂದ ನೆರವು ಪಡೆದ ಆರೋಪದಡಿ ಬಂಧನಕ್ಕೊಳಗಾದ ಎದುರಿಸುತ್ತಿರುವ ‘ನ್ಯೂಸ್‌ಕ್ಲಿಕ್’ ಸುದ್ದಿ ಮಾಧ್ಯಮದ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಹಾಗೂ ಸಂಸ್ಥೆಯ ಮಾನವ ಸಂಪನ್ಮೂಲ ಅಧಿಕಾರಿ ಅಮಿತ್ ಚಕ್ರವರ್ತಿಯನ್ನು ಕೋರ್ಟ್ ಏಳು ದಿನಗಳವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಚೀನಾ ಪರ ಪ್ರಚಾರಕ್ಕಾಗಿ ಅಪಾರ ಪ್ರಮಾಣದ ಹಣ ಸ್ವೀಕರಿಸಿರುವ ಪ್ರಬೀರ್, ಕಾಶ್ಮೀರ ಹಾಗೂ ಅರುಣಾಚಲ ಪ್ರದೇಶಗಳನ್ನು ‘ವಿವಾದಿತ ಪ್ರದೇಶ’ಗಳು ಎಂದು ಬಿಂಬಿಸುವ ಸಂಚು ರೂಪಿಸಿದ್ದರು ಎಂದು ದಿಲ್ಲಿ ಪೊಲೀಸರು ಆರೋಪಿಸಿದ್ದಾರೆ.
“ಪ್ರಬೀರ್, ಚೀನಾದಲ್ಲಿ ನೆಲೆಸಿರುವ ಆಸ್ಟ್ರೇಲಿಯಾದ ಉದ್ಯಮಿ ನೆವಿಲ್ಲೆ ರಾಯ್ ಸಿಂಘಂ ಮತ್ತು ಸಿಂಘಂ ಮಾಲೀಕತ್ವದ ಶಾಂಘೈ ಮೂಲದ ಕಂಪೆನಿಯ ಕೆಲವು ಚೀನೀ ಉದ್ಯೋಗಿಗಳು ಕೆಲವು ಇ- ಮೇಲ್‌ಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ಕಾಶ್ಮೀರ ಮತ್ತು ಅರುಣಾಚಲ ಪ್ರದೇಶಗಳು ಭಾರತದ ಭಾಗವಲ್ಲ ಎಂದು ಪ್ರತಿಪಾದಿಸುವ ಅವರ ಉದ್ದೇಶವನ್ನು ರಹಸ್ಯ ಮಾಹಿತಿಗಳು ಬಹಿರಂಗಪಡಿಸಿವೆ” ಎಂದು ರಿಮೈಂಡ್ ಅರ್ಜಿಯಲ್ಲಿ ದಿಲ್ಲಿ ಪೊಲೀಸರ ವಿಶೇಷ ಘಟಕ ದೂರಿದೆ.
ನ್ಯೂಸ್‌ಕ್ಲಿಕ್‌ನ ಶೇರುದಾರ ಗೌತಮ್ ನವಲಖಾ, ನಿಷೇಧಿತ ನಕ್ಸಲ್ ಸಂಘಟನೆಗಳನ್ನು ಸಕ್ರಿಯವಾಗಿ ಬೆಂಬಲಿಸುವುದು ಮತ್ತು ಪಾಕಿಸ್ತಾನದ ಐಎಸ್‌ಐ ಏಜೆಂಟ್ ಗುಲಾಮ್ ನಬಿ ಫೈ ಜತೆ ಸಂಬಂಧ ಹೊಂದುವ ಮೂಲಕ ರಾಷ್ಟ್ರ ವಿರೋಧಿ ಮತ್ತು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಕೂಡ ಕಂಡುಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಮಧ್ಯೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ಪ್ರಬೀರ್ ಪುರಕಾಯಸ್ಥ ಸ್ವತಂತ್ರವಾಗಿ , ಯಾವುದೇ ಒತ್ತಡ ಹಾಗೂ ಅಜೆಂಡಾಗಳಿಲ್ಲದೆಯೇ ನ್ಯೂಸ್‌ಕ್ಲಿಕ್ ಜನಪ್ರಿಯತೆ ಗಳಿಸಿದೆ. ಹಣದ ವಿಷಯದಲ್ಲಿ ಯಾವುದೇ ಅಕ್ರಮಗಳು ಆಗಿಲ್ಲ. ಈ ಬಗ್ಗೆ ಆರ್‌ಬಿಐನಲ್ಲಿ ಪರಿಶೀಲನೆ ನಡೆದಿದೆ. ಚೀನಾ ಪರ ಅಜೆಂಡಾ ನಡೆಸಿಲ್ಲ” ಎಂದು ಹೇಳಿಕೊಂಡಿದ್ದಲ್ಲದೆ ತಮ್ಮ ವಿರುದ್ಧದ ಎಫ್ಐಆರ್ ಗಳನ್ನು ರದ್ದುಪಡಿಸುವಂತೆ ಒತ್ತಾಯಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ