ಅವರನ್ನು ಸ್ಮರಿಸಿ, ಧೈರ್ಯದಿಂದ ಕುಟುಂಬ ಸಮೇತ ಬದುಕುತ್ತಿದ್ದೇವೆ : ಡಿ.ಕೆ.ಶಿವಕುಮಾರ
ಪ್ರಗತಿವಾಹಿನಿ ಸುದ್ದಿ, ರೋಣ: ದುಷ್ಟ ಶಕ್ತಿಗಳನ್ನು ನಾಶ ಮಾಡಿ ವಿಜಯ ಸಾಧಿಸುವುದೇ ವಿಜಯದಶಮಿ. ರಂಭಾಪುರಿ ಶ್ರೀಗಳು ಪ್ರತಿ ವರ್ಷ ಒಂದೊಂದು ಕಡೆ ಈ ಕಾರ್ಯಕ್ರಮ ಮಾಡುತ್ತಿದ್ದಾರೆ. ಆಮೂಲಕ ಧರ್ಮ ಹಾಗೂ ಸಮಾಜವನ್ನು ಒಂದುಗೂಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
*ಗದಗ ಜಿಲ್ಲೆಯ ರೋಣ ತಾಲೂಕಿನಲ್ಲಿ ರಂಭಾಪುರಿ ಜಗದ್ಗುರುಗಳು ಮಂಗಳವಾರ ಆಯೋಜಿಸಿದ “ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ”ದಲ್ಲಿ ಅವರು ಮಾತನಾಡಿದರು.
ಅವರ ಮಾತುಗಳು ಇಲ್ಲಿವೆ:*
ದುಷ್ಟ ಶಕ್ತಿಗಳು ನಾಶವಾಗಿ, ಉತ್ತಮ ಕೆಲಸಗಳು ಉಳಿಯಬೇಕು ಎಂದು ಪ್ರಾರ್ಥನೆ ಮಾಡಲು ನಾವಿಲ್ಲಿಗೆ ಬಂದಿದ್ದೇವೆ. ಈ ಜನಸಾಗರ, ಎಲ್ಲಾ ಧರ್ಮದವರು ಸೇರಿರುವ ಈ ಧರ್ಮ ಸಭೆಯಲ್ಲಿ ಭಾಗವಹಿಸಿರುವುದೇ ನನ್ನ ಭಾಗ್ಯ.
ಧರ್ಮ ಯಾವುದಾದರೂ ತತ್ವ ಒಂದೇ, ನಾಮ ನೂರಾದರೂ ದೈವ ಒಂದೇ, ಪೂಜೆ ಯಾವುದಾದರೂ ಭಕ್ತಿ ಒಂದೇ. ಕರ್ಮ ಹಲವಾದರೂ ನಿಷ್ಠೆ ಒಂದೇ, ದೇವನೊಬ್ಬ ನಾಮ ಹಲವು.
ಇಲ್ಲಿ ಸೇರಿರುವವರ ಪೈಕಿ ಬಹುತೇಕರು ಶಿವನ ಭಕ್ತರು. ಶಿವನಿಗೆ ನೂರಾರು ಹೆಸರು. ಆತನ ಆರಾಧನೆ ಮಾಡುತ್ತಿದ್ದೇವೆ. ಶಿವನ ಬೇರೆ ಬೇರೆ ಹೆಸರುಗಳನ್ನು ನಾವು ಇಟ್ಟುಕೊಂಡಿದ್ದೇವೆ.
ಧರ್ಮಗಳು ಇರುವುದೇ ಮನುಷ್ಯರ ಉದ್ಧಾರಕ್ಕೆ. ಯಾವುದೇ ಧರ್ಮ ಮನುಷ್ಯನನ್ನು ದ್ವೇಷ ಮಾಡು ಎಂದು ಹೇಳುವುದಿಲ್ಲ. ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕು ಎಂದು ಧರ್ಮ ಹೇಳುತ್ತದೆ.
ರಾಜಕಾರಣದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕಾರಣ ಇರಬಾರದು ಎಂದು ನಾನು ಆಗಾಗ್ಗೆ ಹೇಳುತ್ತಿರುತ್ತೇನೆ.
ಮರಕ್ಕೆ ಬೇರು ಎಷ್ಟು ಮುಖ್ಯವೋ, ಮನುಷ್ಯನಿಗೆ ನಂಬಿಕೆ ಅಷ್ಟೇ ಮುಖ್ಯ. ಮಾನವೀಯತೆಯೇ ಧರ್ಮ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಗಂಗಾಧರ ಅಜ್ಜಯ್ಯ ಅವರ ತತ್ವವನ್ನು ಪಾಲಿಸಿ ನಾವೆಲ್ಲರೂ ಇಂದು ಈ ಕಾರ್ಯಕ್ರಮದಲ್ಲಿ ಸೇರಿದ್ದೇವೆ.
ನಾನು ಪ್ರಮಾಣ ವಚನ ಸ್ವೀಕಾರ ಮಾಡುವಾಗ ಗಂಗಾಧರ ಅಜ್ಜಯ್ಯ ಅವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದೇನೆ. ನೀವು ಅನೇಕರು ಅಜ್ಜಯ್ಯ ಅವರನ್ನು ನೋಡದೆ ಇರಬಹುದು. ಆದರೆ ನನ್ನ ಬದುಕಿನ ಪ್ರತಿ ನಿತ್ಯ ಗಂಗಾಧರ ಅಜ್ಜಯ್ಯ ಅವರು ನನಗೆ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ಅವರನ್ನು ಸ್ಮರಿಸಿ, ಧೈರ್ಯದಿಂದ ಕುಟುಂಬ ಸಮೇತ ಬದುಕುತ್ತಿದ್ದೇವೆ. ನನ್ನ ಕಷ್ಟ ಕಾಲದಲ್ಲಿ ಅಜ್ಜಯ್ಯ ಅವರು ನನ್ನನ್ನು ಕಾಪಾಡಿಕೊಂಡು ಬಂದಿದ್ದಾರೆ.
ಸರ್ವಧರ್ಮಗಳಲ್ಲಿ ಸಮನ್ವಯತೆ ಸಾಧಿಸಬೇಕು ಎಂಬುದು ಈ ಹಬ್ಬದ ಉದ್ದೇಶ. ಇಂತಹ ದೊಡ್ಡ ಸಾಧನೆಯನ್ನು ರಂಭಾಪುರಿ ಶ್ರೀಗಳು ಪ್ರತಿ ವರ್ಷ ನಡೆಸಿಕೊಂಡು ಹೋಗುತ್ತಿದ್ದಾರೆ.
ರಾಜಕೀಯ ದೂರ ಇಟ್ಟು, ಧರ್ಮವನ್ನು ಉಳಿಸಿ, ಧರ್ಮದಿಂದ ಶಾಂತಿ ಸ್ಥಾಪಿಸಲು ರಂಭಾಪುರಿ ಶ್ರೀಗಳ ಪ್ರಯತ್ನಕ್ಕೆ ನಾವೆಲ್ಲರೂ ಶಕ್ತಿ ತುಂಬಬೇಕು.
ನಮ್ಮ ಸಂಸ್ಕೃತಿ, ಧರ್ಮವನ್ನು ಉಳಿಸುವುದೇ ದಸರಾ. ಸರ್ವ ಜನಾಂಗದ ಶಾಂತಿಯ ತೋಟಕ್ಕಾಗಿ ರಂಭಾಪುರಿ ಶ್ರೀಗಳು ಈ ದಸರಾ ಆಚರಣೆ ಮಾಡುತ್ತಾ ಬಂದಿದ್ದಾರೆ.
ಮೈಸೂರು ದಸರಾ ಅರಮನೆಯ ವೈಭೋಗದ ದಸರಾ, ಇದು ಗುರುಮನೆಯ ಬೆಳಕಿನ ದಸರಾ. ಎಲ್ಲಾ ಉಪ ಪಂಗಡಗಳನ್ನು ಒಟ್ಟಾಗಿ ಸೇರಿಸಿ ಶ್ರೀಗಳು ಮಾನವೀಯ ಸೇವೆ ಮಾಡುತ್ತಿದ್ದಾರೆ.
ನಮ್ಮ ಸ್ನೇಹಿತರಾದ ಶಾಸಕ ಜಿ.ಎಸ್ ಪಾಟೀಲ ಅವರು ಈ ಭಾಗದ ನೀರಾವರಿ ಸಮಸ್ಯೆ ಬಗ್ಗೆ ನನ್ನ ಬಳಿ ಬಂದು ಚರ್ಚೆ ಮಾಡಿದ್ದಾರೆ. ಅವರ ಮೇಲೆ ನಿಮ್ಮ ವಿಶ್ವಾಸ ಗಟ್ಟಿಯಾಗಿರಲಿ. ನಿಮ್ಮ ಸಹಕಾರದಿಂದ ಭಗವಂತ ಅವರಿಗೆ ಹೆಚ್ಚಿನ ಶಕ್ತಿ ನೀಡಲಿ. ಅವರು ರಾಜ್ಯಮಟ್ಟದಲ್ಲಿ ಸೇವೆ ಮಾಡುವ ಸಂದರ್ಭ ನಿರ್ಮಾಣ ಆಗಲಿದೆ. ಇದಕ್ಕೆ ನಿಮ್ಮ ಆಶೀರ್ವಾದ ಬಹಳ ಮುಖ್ಯ.
ಈ ಕ್ಷೇತ್ರದಲ್ಲಿ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿದ್ದನ್ನು ನೋಡಿ ನಾನು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ 400 ಕಡೆಗಳಲ್ಲಿ ಈ ಘಟಕ ಸ್ಥಾಪನೆ ಮಾಡಿದೆವು.
ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲ ಆಗುವುದಿಲ್ಲ. ನಾವೆಲ್ಲರೂ ಇಲ್ಲಿ ಪ್ರಾರ್ಥನೆ ಮಾಡಲು ಸೇರಿದ್ದೇವೆ. ದೇವರು ವರ ಮತ್ತು ಶಾಪ ಎರಡನ್ನೂ ನೀಡುವುದಿಲ್ಲ. ಕೇವಲ ಅವಕಾಶ ನೀಡುತ್ತಾನೆ. ಈ ಅವಕಾಶವನ್ನು ಜಿ.ಎಸ್ ಪಾಟೀಲರು ಸದ್ಬಳಕೆ ಮಾಡಿಕೊಂಡು ನಿಮ್ಮ ಸೇವೆ ಮಾಡುತ್ತಾ ಬಂದಿದ್ದಾರೆ.
ನಮಗೆ ಕೈ ಇರುವುದು ಸಾಧ್ಯವಾದಷ್ಟು ದಾನ ಮಾಡಲು. ಇಂತಹ ಧರ್ಮದ ಕೆಲಸಕ್ಕೆ ನೀವು ನಿಮ್ಮ ಕೈಲಾದಷ್ಟು ದಾನ ಮಾಡಬೇಕು. ಆಗಮಾತ್ರ ಇಂತಹ ಧರ್ಮ ಸಭೆಗಳು ಉಳಿಯಲು ಸಾಧ್ಯ. ಈ ಧರ್ಮ ಪೀಠಗಳು ಉಳಿಯಬೇಕು.
ಶ್ರೀಗಳ ಈ ಪವಿತ್ರವಾದ ಧರ್ಮ ಕಾರ್ಯದಲ್ಲಿ ಕರ್ನಾಟಕ ಸರ್ಕಾರ ಹಾಗೂ ಡಿ.ಕೆ. ಶಿವಕುಮಾರ್ ಇದ್ದಾರೆ ಎಂದು ತಿಳಿಸಲು ನಾನು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದೇನೆ. ಈ ಹಿಂದೆ ರಾಜಕಾರಣದಲ್ಲಿ ನಮ್ಮಿಂದಾದ ತಪ್ಪಿಗೆ ನಾನು ಶ್ರೀಗಳ ಬಳಿ ಕ್ಷಮೆ ಕೇಳಿದ್ದೇನೆ. ಅದಕ್ಕೆ ಅನೇಕ ಟೀಕೆ ಟಿಪ್ಪಣಿ ಎದುರಾದರೂ ನಾನು ಹಿಂಜರಿಯಲಿಲ್ಲ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ