*ಹಿರಿಯರ ಮಾತು ಕೇಳಬೇಕು: ಡಿಸಿಸಿ ಬ್ಯಾಂಕ್ ಚುನಾವಣೆಯಿಂದ ಹಿಂದೆ ಸರಿದ ಬಗ್ಗೆ ಚನ್ನರಾಜ ಪ್ರತಿಕ್ರಿಯೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಿಲ್ಲೆಯ ರಾಜಕೀಯ ಪರಿಸ್ಥಿತಿ ಹಾಗೂ ಡಿಸಿಸಿ ಬ್ಯಾಂಕ್ ಚುನಾವಣೆ ಹೇಗೆ ನಡೆಸಬೇಕು ಎನ್ನುವ ವಿಚಾರದಲ್ಲಿ ಸಭೆ ಆಗಿದೆ. ನಾನು ಹಾಗೂ ಜಿಲ್ಲಾ ಮಂತ್ರಿಯವರು ಸುದೀರ್ಘ ಸಭೆ ಮಾಡಿದ್ದೆವು. ಸಭೆಯಲ್ಲಿ ನಾನು ಚುನಾವಣೆ ಕಣದಿಂದ ಹಿಂದೆ ಸರಿಯಬೇಕು ಎಂದು ನಿರ್ಧರಿಸಲಾಯಿತು ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ತಿಳಿಸಿದರು.
ಇಂದು ತಮ್ಮ ಗೃಹಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಜೊತೆಗೆ ಸುದೀರ್ಘ ಸಭೆ ನಡೆಸಿದ ಬಳಿಕ ಡಿಸಿಸಿ ಬ್ಯಾಂಕ್ ಚುನಾವಣೆ ಕಣದಿಂದ ಹಿಂದೆ ಸರಿಯಲು ನಿರ್ಧರಿಸಿದ್ದೇನೆ. ಕಳೆದ ನಾಲ್ಕೈದು ತಿಂಗಳಿನಿಂದ ಆಕ್ಟಿವ್ ಆಗಿ ಖಾನಾಪುರ ತಾಲೂಕಿನಲ್ಲಿ ಚುನಾವಣೆ ಸಿದ್ದತೆ ನಡೆಸಿದ್ದೆ. ಸೊಸೈಟಿಯ ಎಲ್ಲರೂ ಬಂದು ನನಗೆ ಬೆಂಬಲ ನೀಡಿದ್ದರು.
ಜಿಲ್ಲಾ ಮಂತ್ರಿಗಳು ನಿನ್ನೆ ವೀಡಿಯೊ ಬಿಡುಗಡೆ ಮಾಡಿ ಮಾತನಾಡಿರುವ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ. ನಾವು ಇನ್ನೂ ಸಣ್ಣವರು, ಅವಕಾಶಗಳು ಬಹಳ ಬರುತ್ತವೆ. ಕೆಲವೊಂದು ಸಂದರ್ಭದಲ್ಲಿ ಹಿರಿಯರು ಹೇಳಿದ್ದನ್ನು ಕೇಳಬೇಕು, ಅವಾಗ ಮಾತ್ರ ಅವಕಾಶ ಬರುತ್ತವೆ. ಹಾಗಾಗಿ, ಡಿಸಿಸಿ ಚುನಾವಣೆ ವಿಚಾರವಾಗಿ ನಾವು ಮಂತ್ರಿಗಳ ಹೇಳಿಕೆಗೆ ಬದ್ದರಿದ್ದೇವೆ ಎಂದರು.
ನಾನು ಸೊಸೈಟಿ ಸದಸ್ಯರನ್ನು ಮತ್ತೊಮ್ಮೆ ಸಂಪರ್ಕ ಮಾಡಿ ಸ್ಪಷ್ಟೀಕರಣ ನೀಡುತ್ತೇನೆ. ಸದ್ಯದ ಪರಿಸ್ಥಿತಿಯಲ್ಲಿ ಯಾವ ನಿರ್ಧಾರ ಕೈಗೊಳ್ಳಬೇಕು ಅದನ್ನ ಕೈಗೊಂಡಿದ್ದೇವೆ. ಇನ್ನು ಖಾನಾಪುರದಲ್ಲಿ ಯಾರು ಅಭ್ಯರ್ಥಿ ಆಗುತ್ತಾರೆ ಅಂತಾ ಗೊತ್ತಿಲ್ಲ ಎಂದು ಚನ್ನರಾಜ ಹಟ್ಟಿಹೊಳಿ ಹೇಳಿದರು.