Karnataka NewsLatestPolitics

*ರಾಷ್ಟ್ರಪತಿಗಳೇ ಚುನಾವಣಾ ಆಯೋಗ ವಿಸರ್ಜಿಸಿ: SIR ರದ್ದುಗೊಳಿಸಿ: ಸಿಎಂ ಡಿ.ಕೆ.ಶಿವಕುಮಾರ್ ಆಗ್ರಹ*

ಪ್ರಗತಿವಾಹಿನಿ ಸುದ್ದಿ: “ಚುನಾವಣಾ ಆಯೋಗ ಬಿಜೆಪಿಯ ಕೈಗೊಂಬೆಯಾಗಿದೆ. ಬಡ ಹಾಗೂ ಆಡಳಿತ ವ್ಯವಸ್ಥೆ ಟೀಕಿಸುವ ಮತದಾರರ ಹೆಸರನ್ನು ಗುರಿಯಾಗಿಸಲಾಗಿದೆ. ಬಿಜೆಪಿ ಜೊತೆ ಸೇರಿ ಮತಗಳ್ಳತನಕ್ಕೆ ಪಾಲುದಾರರಾಗಿದ್ದಾರೆ” ಎಂದು ಸಿಎಂ ಡಿ ಕೆ ಶಿವಕುಮಾರ್‌ ಅವರು ವಾಗ್ದಾಳಿ ನಡೆಸಿದರು.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆ ಆಗ್ರಹಿಸಿ ಕೆಪಿಸಿಸಿ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಶನಿವಾರ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಸಿಎಂ ಡಿ ಕೆ ಶಿವಕುಮಾರ್ ಅವರು ಮಾತನಾಡಿದರು.

“ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ಚುನಾವಣಾ ಆಯೋಗವನ್ನು ವಿಸರ್ಜಿಸಬೇಕು. ಮುಖ್ಯ ಆಯುಕ್ತರನ್ನು ಬಂಧಿಸಬೇಕು ಹಾಗೂ ಅಕ್ರಮವಾಗಿ ನಡೆದ ಚುನಾವಣೆಗಳನ್ನು ರದ್ದು ಮಾಡಬೇಕು. ಸಂವಿಧಾನದ ಮೂಲಕ ಈ ದೇಶದ ಚುನಾವಣಾ ಆಯೋಗಕ್ಕೆ ಸ್ವಾಯತ್ತತೆ ಅಧಿಕಾರ ನೀಡಲಾಗಿತ್ತು. ಅದನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ. ಇದಕ್ಕೆ ಸೂಕ್ತ ಸಾಕ್ಷಿಗಳೂ ಕಾಣುತ್ತಿವೆ” ಎಂದರು.

“ಜ್ಞಾನೇಶ್‌ ಕುಮಾರ್‌ ಅವರು ಚೀಫ್‌ ಎಲೆಕ್ಷನ್‌ ಕಮಿಷನರ್‌ ಅಲ್ಲ, ಚೀಫ್‌ ಸೆಲೆಕ್ಷನ್‌ ಕಮಿಷನರ್‌ ಆಗಿದ್ದೀರಿ. ಜನ ನಿಮ್ಮ ಅನ್ಯಾಯಗಳ ವಿರುದ್ಧ ದಂಗೆ ಏಳುತ್ತಾರೆ. ಕೇಂದ್ರ ಸರ್ಕಾರ ಅಧಿವೇಶನ ಕರೆದು ಇದರ ಬಗ್ಗೆ ಶೀಘ್ರ ಚರ್ಚೆ ನಡೆಸಬೇಕು. ಅಧಿಕಾರದ ವ್ಯಾಮೋಹ ಜಾಸ್ತಿ ದಿನ ಇರುವುದಿಲ್ಲ. ಹುಟ್ಟಿದ ಸೂರ್ಯ ಮುಳುಗಲೇಬೇಕು. ಈಗ ನಡೆದಿರುವ ಎಸ್‌ ಐಆರ್‌ ರದ್ದುಗೊಳ್ಳಬೇಕು. ಹೊಸದಾಗಿ ಮರುಪರಿಶೀಲನೆ ನಡೆಯಬೇಕು” ಎಂದರು.

ಮೋದಿಯವರ ವಿರುದ್ಧ ಸಿಡಿದೆದ್ದಿರುವುದಕ್ಕೆ ನಿದರ್ಶನ

“ಪ್ರಧಾನಿ ಮೋದಿ ಅವರು ಕೈಗೊಂಬೆಯಂತಿರುವವರನ್ನು ಚುನಾವಣಾ ಆಯೋಗಕ್ಕೆ ನೇಮಕ ಮಾಡಿದರು. ಆದರೆ ಅವರು ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರ ತೀರ್ಪಿನ ವಿರುದ್ಧ ಸಿಡಿದೆದ್ದಿದ್ದಾರೆ. ಇದು ನಿಮ್ಮ ತೀರ್ಪಿನ ವಿರುದ್ಧ ಸಿಡಿದೆದ್ದಿರುವುದಕ್ಕೆ ನಿದರ್ಶನ” ಎಂದು ಕುಹಕವಾಡಿದರು.

“ಕರ್ನಾಟಕದ ಜನಸಂಖ್ಯೆ 7 ಕೋಟಿ. ಇದರಲ್ಲಿ 5.54 ಕೋಟಿ ಮತದಾರರು ಇದ್ದಾರೆ. ಇದನ್ನು ಎಸ್‌ ಐಆರ್‌ ನಡೆಸಿ 4.46 ಕೋಟಿಗೆ ಇಳಿಕೆ ಮಾಡಲಾಗಿದೆ. 30-40 ಲಕ್ಷಕ್ಕೆ ನೋಟಿಸ್‌ ನೀಡಲಾಗಿದೆ. ಇದರ ತೀರ್ಮಾನವನ್ನು ನಾವು ಕಾಯುತ್ತೇವೆ. ಮತದಾನದ ಹಕ್ಕು ಪ್ರತಿಯೊಬ್ಬ ವ್ಯಕ್ತಿಯ ಹಕ್ಕು. ಪ್ರಜಾಪ್ರಭುತ್ವ ವ್ಯವಸ್ಥೆ ಮೂಲಕ ನಮ್ಮ ಸಂವಿಧಾನ ನೀಡಿದ ಅತಿದೊಡ್ಡ ಅವಕಾಶ ಮತದಾನ. ಇದು ಕಳೆದು ಹೋಗಲು ನಾವು ಬಿಡೆವು” ಎಂದರು.

“ಬೆಂಗಳೂರು ಕೇಂದ್ರ ಲೋಕಸಭಾ ಸ್ಥಾನದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮನ್ಸೂರ್‌ ಖಾನ್‌ ಅವರು 31 ಸಾವಿರ ಮತಗಳ ಅಂತರದಿಂದ ಚುನಾವಣ ಆಯೋಗದ ಪ್ರಕಾರ ಸೋತಿದ್ದರು. ಈಗ ಎಸ್‌ ಐಆರ್‌ ನಿಂದ 12 ಲಕ್ಷ ಮತಗಳು ಕಡಿಮೆಯಾಗಿವೆ. ಇದಕ್ಕೆ ಬಿಜೆಪಿ ನಾಯಕರು ಉತ್ತರಿಸಲಿದ್ದಾರೆಯೇ?” ಎಂದರು.

“ಮಹದೇವಪುರದಲ್ಲಿ 3 ಲಕ್ಷ ಮತಗಳು ಕಾಣೆಯಾಗಿವೆ. ಈಗ 12 ಲಕ್ಷ ಮತಗಳನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ. ಬಿಜೆಪಿಯ ದುಷ್ಕೃತ್ಯದಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ನಂಬಿಕೆ ಹೋಗುತ್ತಿದೆ. ಆದ ಕಾರಣ ಕಾಂಗ್ರೆಸ್‌ ಪಕ್ಷ ಹೋರಾಟ ಮಾಡುತ್ತಿದೆ. ಎಸ್‌ ಐಆರ್‌ ಸೇರಿದಂತೆ ಚುನಾವಣಾ ಪ್ರಕ್ರಿಯೆ ಪಾರದರ್ಶಕವಾಗಿರಬೇಕು ಎಂದು ನಾವು ಆಗ್ರಹಿಸುತ್ತಿದ್ದೇವೆ” ಎಂದರು.

ಗ್ರಾಮ ಮಟ್ಟಕ್ಕೆ ಎಸ್‌ ಐಆರ್‌ ವಿರೋಧಿ ಹೋರಾಟ

“ನಾವು ಇದೇ ಮುಂಬರುವ ನವೆಂಬರ್‌, ಡಿಸೆಂಬರ್‌ ವೇಳೆಗೆ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸುತ್ತೇವೆ. ಇದಕ್ಕೆ ಬ್ಯಾಲೆಟ್‌ ಪೇಪರ್‌ ಬಳಸುವ ತೀರ್ಮಾನ ಮಾಡಿದ್ದೇವೆ. ಬಲಿಷ್ಠ ಚುನಾವಣಾ ವ್ಯವಸ್ಥೆಗೆ ನಾವು ಹೋರಾಟ ಮಾಡುತ್ತಿದ್ದೇವೆ. ಪ್ರತಿ ಹಳ್ಳಿಗೂ ಎಸ್‌ ಐಆರ್‌ ವಿರೋಧಿ ಹೋರಾಟ ತಲುಪಿಸಲಾಗುವುದು” ಎಂದರು.

“ಕಾಂಗ್ರೆಸ್‌ ಪಕ್ಷ ಸಂವಿಧಾನದ ಮೂಲಕ ದೇಶದ ಪ್ರಜೆಗಳಿಗೆ ಅತಿದೊಡ್ಡ ಅವಕಾಶ ನೀಡಿದೆ. ರಾಷ್ಟ್ರಧ್ವಜ, ರಾಷ್ಟ್ರಗೀತೆ ಸೇರಿದಂತೆ ಅನೇಕ ಕೊಡುಗೆಗಳನ್ನು ನಾವು ಈ ದೇಶಕ್ಕೆ ನೀಡಿದ್ದೇವೆ. ಇಡೀ ಪ್ರಪಂಚ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ನೋಡಿ ಅನುಕರಿಸಿದೆ. ಆದರೆ ಬಿಜೆಪಿ ಆಡಳಿತಕ್ಕೆ ಬಂದ ದಿನದಿಂದ ನಮ್ಮ ಇಡೀ ಮಾದರಿ ವ್ಯವಸ್ಥೆ ಮೇಲೆ ಅನೇಕ ರಾಷ್ಟ್ರಗಳು ನಂಬಿಕೆ ಕಳೆದುಕೊಳ್ಳುವ ಸ್ಥಿತಿಗೆ ನಾವು ಬಂದಿದ್ದೇವೆ” ಎಂದರು.

”ಮತಗಳ್ಳತನದ ವಿರುದ್ಧ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿ ಅವರು ಇದೇ ನೆಲದಿಂದ ಹೋರಾಟ ಪ್ರಾರಂಭ ಮಾಡಿದ್ದರು. ಪ್ರತಿಯೊಬ್ಬ ಬಿಎಲ್‌ ಎ- 2 ಸೇರಿದಂತೆ ಪಕ್ಷದ ನಾಯಕರು ಹೋರಾಟ ರೂಪಿಸಬೇಕು” ಎಂದು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button