Karnataka NewsLatestPolitics

*ವಿದ್ಯುತ್‌ ಖಾಸಗೀಕರಣಕ್ಕೆ ಮಾಜಿ ಸಚಿವೆ ಡಾ. ಉಮಾಶ್ರೀ ತೀವ್ರ ವಿರೋಧ*

ರೈತರು, ನೇಕಾರರು, ಬಡವರಿಗೆ ಮಾರಕವಾದ ವಿದ್ಯುತ್ ಖಾಸಗೀಕರಣ ಬೇಡ

ಪ್ರಗತಿವಾಹಿನಿ ಸುದ್ದಿ: ಬಾಗಲಕೋಟೆ: ಜಿಲ್ಲೆಯ ರಬಕವಿ–ಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ಹೆಸ್ಕಾಂ ಕಚೇರಿ ಬಳಿ ವಿದ್ಯುತ್ ಖಾಸಗೀಕರಣ ವಿರೋಧಿಸಿ ರೈತರು ಮತ್ತು ನೇಕಾರರು ನಡೆಸುತ್ತಿದ್ದ ಪ್ರತಿಭಟನೆ ಸಂದರ್ಭದಲ್ಲಿ ಬಿಜೆಪಿ ಮುಖಂಡರು ನಡೆದುಕೊಂಡ ರೀತಿ ಅತ್ಯಂತ ಅಮಾನುಷ. ನೇಕಾರರ ಹೋರಾಟಗಾರ ಶಿವಲಿಂಗ ಟಿರ್ಕಿ ಮೇಲೆ ನಡೆದ ಹಲ್ಲೆಯನ್ನು ಮಾಜಿ ಸಚಿವೆ, ವಿಧಾನ ಪರಿಷತ್ ಸದಸ್ಯೆ ಡಾ. ಉಮಾಶ್ರೀ ತೀವ್ರವಾಗಿ ಖಂಡಿಸಿದ್ದಾರೆ.

Home add -Advt

ರಾಜ್ಯದಲ್ಲಿ ವಿದ್ಯುತ್ ಪ್ರಸಾರದ ವ್ಯವಸ್ಥೆಗಳು ಈಗಾಗಲೇ ನಮ್ಮಲ್ಲಿ ಬೆಸ್ಕಾಂ, ಜೆಸ್ಕಾಂ, ಹೆಸ್ಕಾಂನಂತಹ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿರುವುದು ಇರುವುದು ಎಲ್ಲರಿಗೂ ತಿಳಿದ ವಿಚಾರವಾಗಿದೆ. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ವಿದ್ಯುತ್‌ ವಿತರಣೆ ಮಾಡಲು ಟಾಟಾ ಪವರ್‌ ಸೇರಿದಂತೆ ಯಾವುದೇ ಖಾಸಗಿ ಕಂಪನಿಗೆ ಅನುಮತಿ ನೀಡಬಾರದು ಎಂದು ಅವರು ಮನವಿ ಮಾಡಿದ್ದಾರೆ.

ಪ್ರಸ್ತಾವ ತಿರಸ್ಕರಿಸುವಂತೆ ಮನವಿ

ಕೇಂದ್ರ ಸರ್ಕಾರವು ವಿದ್ಯುತ್ ತಿದ್ದುಪಡಿ ಮಸೂದೆಯನ್ವಯ, ಒಂದೇ ಪ್ರದೇಶದಲ್ಲಿ ಸರ್ಕಾರಿ ಮತ್ತು ಖಾಸಗಿ ಕಂಪನಿಗೆ ವಿದ್ಯುತ್ ವಿತರಣಾ ಪರವಾಣಿಗೆ ಕೊಡುವ ಪ್ರಸ್ತಾವ ಇದೆ. ಅದರ ಭಾಗವಾಗಿ ಟಾಟಾ ಪವರ್ ಕಂಪನಿಯು ಕೆಇಆರ್‌ಸಿಗೆ ಅರ್ಜಿ ಹಾಕಿ, ಬೆಸ್ಕಾಂ, ಹೆಸ್ಕಾಂ, ಮೆಸ್ಕಾಂ, ಸೆಸ್ಕಾಂ ವ್ಯಾಪ್ತಿಯ 19 ಜಿಲ್ಲೆಗಳಲ್ಲಿ ಪ್ಯಾರಲಲ್ ವಿತರಣೆಗಾಗಿ ಲೈಸನ್ಸ್ ಕೇಳಿದೆ. ಇದನ್ನು ಅನುಮೋದಿಸುವುದು ಕೆಇಆರ್‌ಸಿ, ಆದರೂ, ಮೂಲಭೂತವಾಗಿ ಕಾನೂನು ಚೌಕಟ್ಟು ಬಲ ನೀಡಿರುವುದು ಕೇಂದ್ರ ಸರ್ಕಾರ ಎಂದು ಹೇಳಿದ್ದಾರೆ. ನೇಕಾರರು, ಬಡವರು, ಜನಸಾಮಾನ್ಯರಿಗೆ ಮಾರಕವಾದ ವಿದ್ಯುತ್ ಖಾಸಗೀಕರಣ ಬೇಡ ಎಂದು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಬಡಕುಟುಂಬಗಳ ಮೇಲೆ ವಕ್ರದೃಷ್ಟಿ

ಕೇಂದ್ರ ಸರ್ಕಾರ ದೂರವಾಣಿ ಸಂಪರ್ಕ ವ್ಯವಸ್ಥೆಯಲ್ಲಿ ಖಾಸಗೀಕರಣ ಅವಕಾಶ ನೀಡಿದ ಪರಿಣಾಮ ಬಿಎಸ್‌ಎನ್‌ಎಲ್‌ನಲ್ಲಿ ದುಡಿಯುವವರ ಸ್ಥಿತಿ ಏನಾಗಿದೆ ಎಂಬ ಉತ್ತಮ ಉದಾಹರಣೆ ಎಲ್ಲರ ಕಣ್ಣು ಮುಂದಿದೆ. ಸ್ಪರ್ಧಾತ್ಮಕ ದರ ನಿಗದಿ, ಕೆಲವೊಂದು ಕೊಡುಗೆಗಳು, ಗ್ರಾಹಕರನ್ನು ಆಕರ್ಷಿಸುತ್ತ ಸಾಗಿದೆ. ಆದರೆ, ವಿದ್ಯುತ್ ವಲಯ ಹಾಗಲ್ಲ. ಕರ್ನಾಟಕದಲ್ಲಿ ರೈತರು, ನೇಕಾರರು, ಬಡ ಕುಟುಂಬಗಳು, ಜನಸಾಮಾನ್ಯರು, ಸಣ್ಣ ಕೈಗಾರಿಕೆಗಳು ಈ ಖಾಸಗೀಕರಣದಿಂದ ಬಡವರ ಉದ್ಯೋಗ, ಜೀವನ ನಿರ್ವಹಣೆಯ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ.

ಜನವಿರೋಧಿ ಕೇಂದ್ರದ ಮಸೂದೆ

ವಿದ್ಯುತ್ ಖಾಸಗೀಕರಣದ ಪರಿಣಾಮ ಮುಂದೊಂದು ದಿನ ನಮ್ಮಲ್ಲಿನ ವಿದ್ಯುತ್ ನಿಗಮಗಳು ಶಕ್ತಿಹೀನವಾಗಿ ಮುಚ್ಚುವ ಸ್ಥಿತಿ ಬರಬಹುದು. ಇಲ್ಲಿನ ದುಡಿಯುವ ವರ್ಗದ ಬದುಕು ದುಸ್ಥರವಾಗಲಿದೆ. ಹೀಗಾಗಿ ಮುಂಜಾಗ್ರತೆಯಿಂದ ಇದನ್ನು ತಡೆಯಲು ಸಾರ್ವಜನಕರು ವಿರೋಧಿಸುವುದು ಅನಿವಾರ್ಯ. ಇಂತಹ ಪರಿಸ್ಥಿತಿಯನ್ನು ಅರ್ಥ ಮಾಡಿಸಿಕೊಳ್ಳದ ಬಿಜೆಪಿ ಜನಪ್ರತಿನಿಧಿಗಳು ಮತ್ತು ಅವರ ಹಿಂಬಾಲಕರ ಪ್ರತಿಭಟನಾನಿರತರ ಮೇಲೆ ದಬ್ಬಾಳಿಕೆ ಮಾಡಿ, ಹಲ್ಲೆ ನಡೆಸಿರುವುದು ವಿಷಾದನೀಯ. ಇವರ ನಡೆ ಜನವಿರೋಧಿ ನಡೆ. ಇದನ್ನು ತೀವ್ರವಾಗಿ ಖಂಡಿಸುವುದರೊಂದಿಗೆ, ಪಕ್ಷಾತೀತವಾಗಿ ಇದನ್ನು ಎಲ್ಲರೂ ಖಂಡಿಸುವುದು ಅಗತ್ಯವಿದೆ ಎಂದು ಮಾಜಿ ಸಚಿವರು ತಿಳಿಸಿದ್ದಾರೆ.

Related Articles

Back to top button