Kannada NewsKarnataka NewsLatestPolitics

*ಬಿಜೆಪಿಯ ಕುತಂತ್ರಕ್ಕೆ ಸುಪ್ರೀಂ ಕೋರ್ಟ್‌ ಕಪಾಳಮೋಕ್ಷ*

ಚುನಾವಣಾ ಬಾಂಡ್‌ಗಳು ಅಸಾಂವಿಧಾನಿಕ; ಸುಪ್ರೀಂ ತೀರ್ಪು ಸ್ವಾಗತಾರ್ಹ ಎಂದ ಸಿಎಂ


ಪ್ರಗತಿವಾಹಿನಿ ಸುದ್ದಿ: ಚುನಾವಣಾ ಬಾಂಡ್‌ಗಳು ಅಸಾಂವಿಧಾನಿಕ ಎಂದು ಐವರು ನ್ಯಾಯಮೂರ್ತಿಗಳ ಸುಪ್ರೀಂ ಕೋರ್ಟ್‌ ಪೀಠ ಇಂದು ನೀಡಿರುವ ತೀರ್ಪು ಪ್ರಜಾತಂತ್ರದಲ್ಲಿ ಪಾರದರ್ಶಕತೆಯನ್ನು ಮರುಸ್ಥಾಪಿಸುವ ನಿಟ್ಟಿನಿಂದ ಐತಿಹಾಸಿಕವಾಗಿದೆ.
ಕ್ರೋನಿ ಬಂಡವಾಳಿಗರಿಂದ ಚುನಾವಣೆಗಾಗಿ ದೇಣಿಗೆ ಸಂಗ್ರಹಿಸುವ ದುರುದ್ದೇಶದಿಂದಲೇ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದಿದ್ದ ಈ ಚುನಾವಣಾ ಬಾಂಡ್ ಗಳು ಅಸಾಂವಿಧಾನಿಕವಾದುದು ಮಾತ್ರವಲ್ಲ ಇದರಿಂದ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾಹಿತಿ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಅತ್ಯಂತ ಸ್ವಾಗತಾರ್ಹವಾದುದು ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಚುನಾವಣಾ ವ್ಯವಸ್ಥೆಯ ಸುಧಾರಣೆಯಲ್ಲಿ ಇದೊಂದು ದಿಟ್ಟ ಕ್ರಮವಾಗಿದೆ. ಕೇಂದ್ರದ ಬಿಜೆಪಿ ಸರ್ಕಾರ 2019ರ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಜಾರಿಗೆ ತಂದಿದ್ದ ಈ ಚುನಾವಣಾ ಬಾಂಡ್ ಗಳು ಲಂಚದ ಮತ್ತೊಂದು ರೂಪವಾಗಿತ್ತು. ವಿತ್ತೀಯ ಕಾಯಿದೆಯ ಸ್ವರೂಪದಲ್ಲಿ ಚುನಾವಣಾ ಬಾಂಡ್‌ಗಳನ್ನು ತಂದಿದ್ದು ಹಾಗೂ ಇದಕ್ಕಾಗಿ ಸುಮಾರು ಐದು ಕಾಯಿದೆಗಳನ್ನು ತಿದ್ದುಪಡಿ ಮಾಡಲಾಗಿತ್ತು. ಇದೀಗ ಇದೆಲ್ಲವೂ ರದ್ದುಗೊಂಡಿದೆ. ಚುನಾವಣಾ ಬಾಂಡ್‌ಗಳನ್ನು ಜಾರಿಗೆ ತಂದಿದ್ದರ ಹಿಂದೆ ದುರುದ್ದೇಶವಿರುವುದನ್ನು ಕಾಂಗ್ರೆಸ್‌ ಪಕ್ಷ ಆರಂಭದಿಂದಲೂ ಸ್ಪಷ್ಟವಾಗಿ ಹೇಳಿತ್ತು. ಇದೀಗ ಸುಪ್ರೀಂಕೋರ್ಟ್ ಈ ವಿರೋಧಕ್ಕೆ ಮಾನ್ಯತೆ ನೀಡಿದೆ ಎಂದರು.

ಇದು ಬಂಡವಾಳಶಾಹಿ ಶಕ್ತಿಗಳು ಹಾಗೂ ಆಡಳಿತಾರೂಢ ಸರ್ಕಾರದ ನಡುವಿನ ಕೊಡುಕೊಳ್ಳುವಿಕೆಗೆ ಕಾರಣವಾಗುತ್ತದೆ. ಚುನಾವಣಾ ಬಾಂಡ್‌ ಯೋಜನೆಯಡಿ ರಾಜಕೀಯ ಪಕ್ಷಗಳಿಗೆ ಅನಾಮಧೇಯವಾಗಿ ಯಾವುದೇ ಮಿತಿ ಇಲ್ಲದೆ ದೇಣಿಗೆ ನೀಡಬಹುದಾಗಿದ್ದರಿಂದ ಬಂಡವಾಳಶಾಹಿ ಶಕ್ತಿಗಳು ಹಾಗೂ ಆಡಳಿತಾರೂಢ ಸರ್ಕಾರದ ನಡುವೆ ಕೊಡುಕೊಳ್ಳುವಿಕೆಯ ಸಂಬಂಧವೇರ್ಪಡುತ್ತದೆ ಎನ್ನುವ ಆತಂಕವನ್ನು ನಮ್ಮ ಪಕ್ಷ ಹಾಗೂ ಪ್ರಜ್ಞಾವಂತ ನಾಗರಿಕರು, ವಿವಿಧ ಸಂಘಟನೆಗಳು ಎತ್ತಿದ್ದವು.

ಸುಪ್ರೀಂ ಕೋರ್ಟ್‌ ಸಹ ತನ್ನ ಇಂದಿನ ತೀರ್ಪಿನಲ್ಲಿ ಇಂತಹ ಸಾಧ್ಯತೆಯನ್ನು ಅಲ್ಲಗಳೆಯಲಾಗದು ಎಂದಿದೆ. ಇದು ಕೊಡುಕೊಳ್ಳುವಿಕೆಗೆ ಕಾರಣವಾಗಬಹುದಾದ ಹಿತಾಸಕ್ತಿಗಳನ್ನು ಕಾಯುವ ಸಾಧ್ಯತೆಯ ಆತಂಕದತ್ತ ಬೆರಳು ಮಾಡಿದೆ. ಇದೇ ವೇಳೆ, ಯೋಜನೆಯು ಮಾಹಿತಿ ಹಕ್ಕು ಹಾಗೂ ಮತದಾರರ ಹಕ್ಕಿನ ಉಲ್ಲಂಘನೆ ಎನ್ನುವುದನ್ನು ಸ್ಪಷ್ಟಗೊಳಿಸಿದೆ. ಸುಪ್ರೀಂ ಕೋರ್ಟ್‌ ತೀರ್ಪು ಕೇಂದ್ರ ಸರ್ಕಾರದ ಕರಾಳ ಸಂಚಿಗೆ ಹಿಡಿದ ಕನ್ನಡಿಯಾಗಿದ್ದು ಕೇಂದ್ರದ ಗುಪ್ತ ಕಾರ್ಯಸೂಚಿಯ ಮೇಲೆ ಮಾಡಿರುವ ಗದಾಪ್ರಹಾರವಾಗಿದೆ.

ಈಗಾಗಲೇ ಚುನಾವಣಾ ಬಾಂಡ್ ಗಳನ್ನು ಖರೀದಿಸಿದವರ ಸಂಪೂರ್ಣ ವಿವರವನ್ನು ಹದಿನೈದು ದಿನಗಳೊಳಗೆ ಭಾರತೀಯ ಸ್ಟೇಟ್ ಬ್ಯಾಂಕ್ ಬಹಿರಂಗ ಪಡಿಸಬೇಕೆಂದು ಹೇಳಿದೆ. ಇದರಿಂದ ಬಿಜೆಪಿಯ ಕಪಾಟಿನ ಒಳಗಿರುವ ಹಲವಾರು ಅಸ್ಥಿಪಂಜರಗಳು ಹೊರಬೀಳಲಿವೆ. ಸುಪ್ರೀಂಕೋರ್ಟ್ ಸರಿಯಾಗಿ ಗುರುತಿಸಿರುವಂತೆ ಇದು ಕ್ರೋನಿ ಬಂಡವಾಳಿಗರು ಮತ್ತು ಬಿಜೆಪಿಯಂತ ರಾಜಕೀಯ ಪಕ್ಷಗಳ ನಡುವಿನ ಒಂದು ಅಪವಿತ್ರ ಮೈತ್ರಿ ಆಗಿತ್ತು. ತಾನು ಅಧಿಕಾರಕ್ಕೆ ಬಂದ ನಂತರ ನೆರವಾಗುವ ಭರವಸೆ ನೀಡಿಯೇ ಉದ್ಯಮಿಗಳಿಂದ ಚುನಾವಣಾ ಬಾಂಡ್ ಗಳ ಮೂಲಕ ಹಣ ಸಂಗ್ರಹಿಸಲಾಗುತ್ತಿತ್ತು.

ಚುನಾವಣಾ ಬಾಂಡ್ ಮೂಲಕ ಬಂದ ದೇಣಿಗೆಯ ಶೇಕಡಾ 90ರಷ್ಟು ಭಾಗ ಭಾರತೀಯ ಜನತಾ ಪಕ್ಷಕ್ಕೆ ಸಂದಾಯವಾಗುತ್ತಿದ್ದ ಕಾರಣ ಇದು ಯಾರ ನೆರವಿಗಾಗಿ ತಂದ ಯೋಜನೆ ಎನ್ನುವುದು ಸ್ಪಷ್ಟವಾಗಿತ್ತು. ಸಾಂವಿಧಾನಿಕ ಸಂಸ್ಥೆಗಳು ತಮ್ಮ ಸ್ವಾಯತ್ತತೆಯನ್ನು ಕಳೆದುಕೊಳ್ಳುತ್ತಿದೆ ಎಂಬ ಆತಂಕದ ನಡುವೆಯೇ ಸುಪ್ರೀಂ ಕೋರ್ಟ್ ಇಂತಹದ್ದೊಂದು ತೀರ್ಪು ನೀಡಿರುವುದು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲೆ ಭರವಸೆ ಮೂಡಿಸಿದೆ.

ಕಪ್ಪು ಹಣ ನಿಯಂತ್ರಿಸಲು ಚುನಾವಣಾ ಬಾಂಡ್‌ ಯೋಜನೆಯಿಂದ ಸಾಧ್ಯ ಎನ್ನುವ ಕೇಂದ್ರ ಸರ್ಕಾರದ ವಾದವನ್ನು ಸುಪ್ರೀಂ ಕೋರ್ಟ್ ಸಾರಾಸಗಟಾಗಿ‌ ತಿರಸ್ಕರಿಸಿದ್ದು, ಕಪ್ಪು ಹಣ ನಿಯಂತ್ರಣಕ್ಕೆ ಅದಕ್ಕಿಂತ ಉತ್ತಮ ವಿಧಾನಗಳಿವೆ ಎಂದು ಹೇಳಿರುವುದು ಕೇಂದ್ರದ ಪೊಳ್ಳು ವಾದಗಳಿಗೆ ಮಾಡಿರುವ ತಕ್ಕ ಶಾಸ್ತಿಯಾಗಿದೆ. ಅಲ್ಲದೆ, ಇದು ಆರ್ಥಿಕ ಅಸಮಾನತೆಯಿಂದ ಅಸಮ ರಾಜಕೀಯ ಮೇಲಾಟಗಳಿಗೆ ಕಾರಣವಾಗುತ್ತದೆ ಎಂದು ನ್ಯಾಯಾಲಯವು ಹೇಳಿರುವುದು ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಎಂತಹ ಚುನಾವಣಾ ರಾಜಕಾರಣದ ವ್ಯವಸ್ಥೆಯನ್ನು ಸೃಷ್ಟಿಸಲು ಮುಂದಾಗಿತ್ತು ಎನ್ನುವುದನ್ನು ಸ್ಪಷ್ಟಪಡಿಸಿದೆ. ವಿಪಕ್ಷಗಳನ್ನು ಒಂದಿಲ್ಲೊಂದು ರೀತಿಯಲ್ಲಿ ದಮನಿಸಿ, ತನಗೆ ಅನುಕೂಲವಾಗುವ ರೀತಿಯಲ್ಲಿ ವ್ಯವಸ್ಥೆಯನ್ನು ರೂಪಿಸಿಕೊಳ್ಳುವ ಬಿಜೆಪಿಯ ಕುತಂತ್ರಕ್ಕೆ ಸುಪ್ರೀಂ ಕೋರ್ಟ್‌ ಕಪಾಳಮೋಕ್ಷ ಮಾಡಿದೆ ಎಂದಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button