ಪ್ರಗತಿವಾಹಿನಿಸುದ್ದಿ, ಬೆಂಗಳೂರು: ಕಾವೇರಿ ನದಿಯಿಂದ ನೀರೆತ್ತುವ ಯೋಜನೆಗೆ ಮುಖ್ಯಮಂತ್ರಿಗಳು ಬಟನ್ ಒತ್ತಿದರೂ ಚಾಲೂ ಆಗದೆ ಮುಜುಗರ ತಂದ ಪ್ರಸಂಗದ ಹಿನ್ನೆಲೆಯಲ್ಲಿ ಚೆಸ್ಕಾಂ ಎಂಡಿ, ಕೆಎಎಸ್ ಅಧಿಕಾರಿ ಸಿ.ಎನ್.ಶ್ರೀಧರ ಅವರನ್ನು ಅಮಾನತುಗೊಳಿಸಲಾಗಿದೆ.
ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಮುತ್ತಿನಮುಳುಸೋಗೆ ಗ್ರಾಮದ ಹತ್ತಿರ ಕಾವೇರಿ ನದಿಯಿಂದ ನೀರೆತ್ತಿ 79 ಗ್ರಾಮಗಳಲ್ಲಿ ಬರುವ 150 ಕೆರೆಗಳು ಹಾಗು ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಯ ಉದ್ಘಾಟನೆಗೆ ಮುಖ್ಯಮಂತ್ರಿರವರು ಆಗಮಿಸಿ, ಉದ್ಘಾಟನೆ ಕಾರ್ಯ ನೆರವೇರಿಸಿರುತ್ತಾರೆ. ಕಾರ್ಯಕ್ರಮಕ್ಕೆ ‘ಬಟನ್’ ಒತ್ತುವ ಮೂಲಕ ಚಾಲನೆ ನೀಡಿದ್ದು ಅದು ಚಾಲನೆಯಾಗಿರುವುದಿಲ್ಲ.
ಬೃಹತ್ ಕಾರ್ಯಕ್ರಮದ ಮತ್ತು ಸಾರ್ವಜನಿಕ ಕಾರ್ಯಕ್ರಮವನ್ನು ಲೋಕಾರ್ಪಣೆಗಾಗಿ ವಿದ್ಯುಕ್ತವಾಗಿ ಚಾಲನೆ ನೀಡುವ ಸಂದರ್ಭದಲ್ಲಿ ಅದು ಚಾಲನೆಯಾಗದೇ ಮುಖ್ಯಮಂತ್ರಿಗಳನ್ನು ತೀವು ಮುಜುಗರಕ್ಕೆ ಸಿಲುಕಿಸಿರುತ್ತಾರೆ. ಮುಖ್ಯಮಂತ್ರಿಗಳು ಭಾಗವಹಿಸುವ ಕಾರ್ಯಕ್ರಮದ ಸ್ಥಳಗಳಲ್ಲಿ ಸಮರ್ಪಕ ವಿದ್ಯುತ್ ವ್ಯವಸ್ಥೆಯ ಮುನ್ನೆಚ್ಚರಿಕಾ ಕ್ರಮಗಳನ್ನು ನಿರ್ವಹಿಸಲು ಸಿ.ಎನ್ ಶ್ರೀಧರ್, ಕೆ.ಎ.ಎಸ್ (ಸೂವರ್ ಟೈಂ ಸೈಲ್) ಅಧಿಕಾರಿ, ವ್ಯವಸ್ಥಾಪಕ ನಿರ್ದೇಶಕರು, ಮೈಸೂರು ನಗರ ಮತ್ತು ಗ್ರಾಮಾಂತರ, ಚೆಸ್ಕಾಂ ಮೈಸೂರು ರವರಿಗೆ ಜಿಲ್ಲಾಧಿಕಾರಿಗಳು, ಮೈಸೂರು ಇವರ ಕಚೇರಿಯ ದಿನಾಂಕ: 23.01.2023ರ ಅಧಿಕೃತ ಜ್ಞಾಪನದ ಆದೇಶದಲ್ಲಿ ಸೂಚನೆ ನೀಡಲಾಗಿರುತ್ತದೆ.
ಹೀಗಿದ್ದರೂ, ವ್ಯವಸ್ಥಾಪಕ ನಿರ್ದೇಶಕರು, ಮೈಸೂರು ನಗರ ಮತ್ತು ಗ್ರಾಮಾಂತರ, ಚೆಸ್ಕಾಂ ಮೈಸೂರು ರವರು ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಖುದು ಹಾಜರಿದ್ದು ಯಾವುದೇ ಲೋಪ ಉಂಟಾಗದಂತೆ ವ್ಯವಸ್ಥಿತವಾಗಿ ಕರ್ತವ್ಯ ನಿರ್ವಹಿಸಬೇಕಿರುತ್ತದೆ. ಆದಾಗ್ಯೂ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿರುವುದಿಲ್ಲ. ಮುಖ್ಯಮಂತ್ರಿಗಳು ಚಾಲನೆ ನೀಡಿದಾಕ್ಷಣ ಚಾಲನೆಗೊಳ್ಳದೇ ಸ್ಥಳದಲ್ಲಿ ಹಾಜರಿದ್ದ ಮಾಧ್ಯಮ, ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿರುತ್ತದೆ.
ಮುಖ್ಯಮಂತ್ರಿರವರು ಭಾಗವಹಿಸುವ ಕಾರ್ಯಕ್ರಮದ ಸ್ಥಳದಲ್ಲಿ ಹಾಜರಿದ್ದು ವ್ಯವಸ್ಥಿತವಾಗಿ ಕಾರ್ಯಕ್ರಮಗಳು ಯಶಸ್ವಿಗೊಳಿಸಲು ಸಹಕಾರಿಯಾಗದೇ, ಅವರ ಕರ್ತವ್ಯದಲ್ಲಿ ಅಸಡ್ಡೆ ಮತ್ತು ನಿರ್ಲಕ್ಷತೆಯಿಂದಾಗಿ ಸರ್ಕಾರವನ್ನು ಮುಜುಗರಕ್ಕೆ ಒಳಪಡುವ ಸನ್ನಿವೇಶವನ್ನು ಸೃಷ್ಟಿಸಲು ಸಿ.ಎನ್ ಶ್ರೀಧರ್, ಕೆ.ಎ.ಎಸ್ (ಸೂಪರ್ ಟೈಂ ಸೈಲ್) ಅಧಿಕಾರಿ, ವ್ಯವಸ್ಥಾಪಕ ನಿರ್ದೇಶಕರು, ಮೈಸೂರು ನಗರ ಮತ್ತು ಗ್ರಾಮಾಂತರ, ಚೆಸ್ಕಾಂ ಮೈಸೂರು ರವರು ನೇರ ಕಾರಣಕರ್ತರಾಗಿರುತ್ತಾರೆ. ಇದರಿಂದ ಅವರ ಕಾರ್ಯವೈಖರಿ, ಕರ್ತವ್ಯ ನಿಷ್ಠೆ, ಶಿಷ್ಟಾಚಾರ ಮತ್ತು ಸಮಯಪ್ರಜ್ಞೆಗೆ ಕನ್ನಡಿ ಹಿಡಿದಂತಿದೆ.
ಆದುದರಿಂದ ಸಿ.ಎನ್ ಶ್ರೀಧರ್, ಕೆ.ಎ.ಎಸ್ (ಸೂಪರ್ ಟೈಂ ಸೈಲ್) ಅಧಿಕಾರಿ, ವ್ಯವಸ್ಥಾಪಕ ನಿರ್ದೇಶಕರು, ಮೈಸೂರು ನಗರ ಮತ್ತು ಗ್ರಾಮಾಂತರ, ಚೆಸ್ಕಾಂ ಮೈಸೂರು ರವರು ಸ್ಥಳದಲ್ಲಿ ಹಾಜರಿಲ್ಲದೇ ಕರ್ತವ್ಯಲೋಪವೆಸಗಿರುವ ಸಂಬಂಧ ಮತ್ತು ಶಿಷ್ಟಾಚಾರ ಉಲ್ಲಂಘಿಸಿರುವ ಹಿನ್ನಲೆಯಲ್ಲಿ ಸದರಿಯವರ ವಿರುದ್ಧ ತತಕ್ಷಣವೇ ಸೂಕ್ತ ಕ್ರಮಕೈಗೊಳ್ಳುವಂತೆ ಕೋರಲಾದ ಪ್ರಸ್ತಾವನೆಯನ್ನು ಪರಿಶೀಲಿಸಲಾಯಿತು. ಮುಖ್ಯ ಮಂತ್ರಿಗಳ ಕಾರ್ಯಕ್ರಮಕ್ಕೆ ಹಾಜರಾಗಿ ಸದರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸದೇ ತೀವು ಮುಜುಗರ ಉಂಟುಮಾಡುವ ಹಾಗೂ ಸರ್ಕಾರಿ ನೌಕರರಿಗೆ ತರವಲ್ಲದ ರೀತಿಯಲ್ಲಿ ವರ್ತಿಸಿರುವುದು ಜಿಲ್ಲಾಧಿಕಾರಿಯವರ ವರದಿಯಂತೆ ಸ್ಪಷ್ಟವಾಗಿ ಕಂಡುಬರುತ್ತದೆ. ಅಧಿಕಾರಿಯವರ ವಿರುದ್ಧ ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ ಅಮಾನತ್ತುಪಡಿಸಲು ತೀರ್ಮಾನಿಸಿ ಈ ಕೆಳಗಿನಂತೆ ಆದೇಶಿಸಿದೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ ಶ್ರೀ ಸಿ.ಎನ್ ಶ್ರೀಧರ್, ಕೆ.ಎ.ಎಸ್. (ಸೂಪರ್ ಟೈಂ ಸ್ನೇಲ್) ಅಧಿಕಾರಿ, ವ್ಯವಸ್ಥಾಪಕ ನಿರ್ದೇಶಕರು, ಚೆಸ್ಕಾಂ, ಮೈಸೂರು ಇವರನ್ನು ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಅವರ ವಿರುದ್ಧದ ಪ್ರಕರಣಕ್ಕೆ ಸಂಬಂದಿಸಿದಂತೆ ಇಲಾಖಾ ವಿಚಾರಣೆಯನ್ನು ಬಾಕಿ ಇಟ್ಟು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸರ್ಕಾರಿ ಸೇವೆಯಿಂದ ಅಮಾನತ್ತಿನಲ್ಲಿರಿಸಿ ಆದೇಶಿಸಿದೆ.
ಅಧಿಕಾರಿಯ ಅಮಾನತ್ತಿನ ಅವಧಿಯಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 98 ರಂತೆ ಜೀವನಾಧಾರ ಭತ್ಯೆಯನ್ನು ಪಡೆಯಲು ಅರ್ಹರಿರುತ್ತಾರೆ. ಅಧಿಕಾರಿಯ ಅಮಾನತ್ತಿನ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆಯದೇ ಕೆಂದ್ರ ಸ್ಥಾನವನ್ನು ಬಿಡತಕ್ಕದ್ದಲ್ಲ ಎಂದು ಸರಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ಆದೇಶ ಪ್ರತಿ –
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ