ಪತ್ನಿಗೆ ಸುಳ್ಳುಹೇಳಿ ಪ್ರಿಯತಮೆ ಭೇಟಿಗೆ ಮಾಲ್ಡೀವ್ಸ್ ಗೆ ತೆರಳಿದ್ದ ಎಂಜಿನಿಯರ್ ಜೈಲುಪಾಲು; ಕಳ್ಳಾಟ ಮುಚ್ಚಿಡಲು ಪಾಸ್ ಪೋರ್ಟ್ ಪುಟಗಳನ್ನೇ ಹರಿದುಹಾಕಿದ !
ಪ್ರಗತಿವಾಹಿನಿ ಸುದ್ದಿ, ಮುಂಬೈ: ಪತ್ನಿಗೆ ಹೇಳದೇ ಪ್ರಿಯತಮೆ ಭೇಟಿ ಮಾಡಲು ಮಾಲ್ಡೀವ್ಸ್ ಗೆ ತೆರಳಿದ್ದ ಬಹುರಾಷ್ಟ್ರೀಯ ಕಂಪನಿಯ ಎಂಜಿನಿಯರ್ ಒಬ್ಬ ಜೈಲುಪಾಲಾಗಿದ್ದಾನೆ.
31 ವರ್ಷದ ಎಂಜಿನಿಯರ್ ಮುಂಬೈಯಲ್ಲಿರುವ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು ಮಾಲ್ಡೀವ್ಸ್ ಗೆ ಕಂಪನಿ ಕೆಲಸಕ್ಕಾಗಿ ಅಧಿಕೃತ ಪ್ರವಾಸಕ್ಕೆ ತೆರಳುತ್ತಿರುವುದಾಗಿ ಹೇಳಿ ಹೋಗಿದ್ದ.
ಗೆಳತಿಯೊಂದಿಗೆ ಮಾಲ್ಡೀವ್ಸ್ ನ ನೀಲಿ ನೀರಿನ ಕಡಲಿನಲ್ಲಿ ವಿಹರಿಸಿ ಎಂಜಾಯ್ ಮಾಡುವ ಮೂಡ್ ನಲ್ಲಿದ್ದ ಎಂಜಿನಿಯರ್ ಗೆ ಇತ್ತ ಮುಂಬಯಿಯಿಂದ ಪತ್ನಿ ಪದೇ ಪದೇ ಕರೆ ಮಾಡಿದರೂ ಕರೆ ಸ್ವೀಕರಿಸದಿರುವುದರಿಂದ ಸಂದೇಹ ಉಂಟಾಗಿದೆ. ಇದಕ್ಕಾಗಿ ಆಕೆ ವಾಟ್ಸಾಪ್ ಮೂಲಕ ಹಲವು ಬಾರಿ ಸಂದೇಶಗಳನ್ನು ಕಳಿಸಿದಾಗ ಪ್ರಿಯತಮೆಯೊಂದಿಗೆ ವಿಹರಿಸುತ್ತಿದ್ದ ಎಂಜಿನಿಯರ್ ವಿಚಲಿತನಾಗಿದ್ದಾನೆ.
ತನ್ನ ವಿವಾಹೇತರ ಸಂಬಂಧದ ಬಗ್ಗೆ ಪತ್ನಿಗೆ ತಿಳಿದರೆ ಅವಾಂತರವಾದೀತೆಂಬ ಭೀತಿಯಿಂದ ಮಾಲ್ಡೀವ್ಸ್ ನಿಂದ ಪ್ರವಾಸ ಮೊಟಕುಗೊಳಿಸಿ ಮರಳುವಾಗ ಪಾಸ್ ಪೋರ್ಟ್ ನ 3-6 ಹಾಗೂ 31-34ನೇ ಪುಟಗಳನ್ನೇ ಹರಿದುಹಾಕಿದ್ದಾನೆ.
ಈತ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದು ಇಳಿಯುತ್ತಿದ್ದಂತೆ ಪಾಸ್ ಪೋರ್ಟ್ ನ ಕೆಲ ಪುಟಗಳು ಮಾಯವಾಗಿರುವುದನ್ನು ಕಂಡು ನಿಲ್ದಾಣದ ವಲಸೆ ಅಧಿಕಾರಿಗಳು ಈತನನ್ನು ಬಂಧಿಸಿ ಶಹರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ಪಾಸ್ ಪೋರ್ಟ್ ನ ಪುಟಗಳನ್ನು ಹರಿಯುವುದು ಅಪರಾಧವೆಂಬುದೇ ಗೊತ್ತಿರಲಿಲ್ಲ ಎಂದು ಎಂಜಿನಿಯರ್ ಹೇಳಿಕೊಂಡಿದ್ದರೂ ಈತನ ಮೇಲೆ ಐಪಿಸಿ ಕಲಂ ಅಡಿ ಮೋಸದ ಪ್ರಕರಣ ದಾಖಲಿಸಲಾಗಿದೆ. ಒಮ್ಮೆ ಪಾಸ್ ಪೋರ್ಟ್ ನೀಡಿದ ನಂತರ ಅದನ್ನು ಸರಕಾರದ ಆಸ್ತಿ ಎಂದು ಪರಿಗಣಿಸಲಾಗುತ್ತಿದ್ದು ಅದಕ್ಕೆ ಆಗುವ ಯಾವುದೇ ಹಾನಿಯನ್ನು ಅಪರಾಧ ಎಂದೇ ಪರಿಗಣಿಸಲಾಗುತ್ತದೆ ಎಂದು ಏರ್ ಪೋರ್ಟ್ ಅಧಿಕಾರಿಗಳು ತಿಳಿಸಿದ್ದಾರೆ.
ಗೋಕಾಕ ಫಾಲ್ಸ್ ನಲ್ಲಿ ಯುವಕರ ಹುಚ್ಚಾಟಕ್ಕೆ ಖಾಕಿ ಕಡಿವಾಣ; ನೀರಿಗಿಳಿಯದಂತೆ ತಾತ್ಕಾಲಿಕವಾಗಿ ಬ್ಯಾರಿಕೇಡ್ ಅಳವಡಿಕೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ