ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ವಿಧಾನ ಪರಿಷತ್ ಮಾಜಿ ಸಚೇತಕ, ಕೆಎಲ್ಇ ಸಂಸ್ಥೆಯ ನಿರ್ದೇಶಕ ಮಹಾಂತೇಶ ಕವಟಗಿಮಠ ಅವರು ತಮ್ಮದೇ ಹೆಸರಿನಲ್ಲಿ ಫೌಂಡೇಶನ್ ಒಂದನ್ನು ಸ್ಥಾಪಿಸಿದ್ದಾರೆ. ಜನೆವರಿ 16ರಂದು ಅವರ ಜನ್ಮ ದಿನದಂದು ಫೌಂಡೇಶನ್ ಉದ್ಘಾಟನೆಯಾಗಲಿದೆ.
ಸ್ವಾಮಿ ವಿವೇಕಾನಂದರ ಜನ್ಮದಿನವಾದ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಕವಟಗಿಮಠ ಮಾಹಿತಿ ನೀಡಿದರು. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ಸಿದ್ದಗಂಗಾಮಠದ ಸಿದ್ದಲಿಂಗ ಮಹಾಸ್ವಾಮಿಗಳು, ತೋಂಟದಾರ್ಯಮಠದ ಡಾ.ತೋಂಟದ ಸಿದ್ದರಾಮಯ ಮಹಾಸ್ವಾಮಿಗಳು ಸೇರಿದಂತೆ ಸುಮಾರು 75ಕ್ಕೂ ಹಚ್ಚು ಮಠಾಧೀಶರ ಉಪಸ್ಥಿತಿಯಲ್ಲಿ ಫೌಂಡೇಶನ್ ಉದ್ಘಾಟನೆಯಾಗಲಿದೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ವೇಳೆ ಗ್ರಂಥ ಲೋಕಾರ್ಪಣೆ ಮಾಡಲಿದ್ದು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅಧ್ಯಕ್ಷತೆ ವಹಿಸಲಿದ್ದಾರೆ.
ಸವದತ್ತಿ ನನ್ನ ಜನ್ಮಭೂಮಿ, ತಾಯಿಯವರ ತವರೂರು. ಹಾಗಾಗಿ ಸವದತ್ತಿಯಲ್ಲಿ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ. ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ, ಸಂಸ್ಕೃತಿ ಮತ್ತು ಸಂಸ್ಕಾರ ಉಳಿಸುವುದು ಹಾಗೂ ಸಹಕಾರ ಕ್ಷೇತ್ರಗಳಲ್ಲಿ ಫೌಂಡೇಶನ್ ಕೆಲಸ ಮಾಡಲಿದೆ. ಶಿಕ್ಷಣ ವಂಚಿತರಿಗೆ, ಆರ್ಥಿಕ ದುರ್ಬಲರಿಗೆ ಓದಲು ನೆರವಾಗಲಾಗುವುದು, ಆರೋಗ್ಯ ಶಿಬಿರಗಳ ಮೂಲಕ ಮನೆ ಬಾಗಿಲಿಗೆ ಆರೋಗ್ಯ ಸೇವೆ ಕೊಂಡೊಯ್ಯಲಾಗುವುದು, ಇಡೀ ರಾಜ್ಯ ವ್ಯಾಪ್ತಿಯನ್ನಿಟ್ಟುಕೊಂಡು ಫೌಂಡೇಶನ್ ಕೆಲಸ ಮಾಡಲಿದೆ ಎಂದು ಮಹಾಂತೇಶ ಕವಟಗಿಮಠ ವಿವರಿಸಿದರು.
ರಾಜಕೀಯ ಉದ್ದೇಶವನ್ನಿಟ್ಟುಕೊಂಡು ಅಥವಾ ಬರಲಿರುವ ಲೋಕಸಭಾ ಚುನಾವಣೆಯ ಉದ್ದೇಶದಿಂದ ಫೌಂಡೇಶನ್ ಆರಂಭಿಸುತ್ತಿಲ್ಲ. ನಾನು ಚುನಾವಣೆಯಲ್ಲಿ ಸೋಲಲಿ, ಗೆಲ್ಲಲಿ ಸದಾ ಜನರ ಮಧ್ಯದಲ್ಲಿರುವವನು. ಎಂದೂ ಹಮ್ಮು ಬಿಮ್ಮಿನಿಂದ ಕೆಲಸ ಮಾಡಿದವನಲ್ಲ. ಕಳೆದ ಚುನಾವಣೆಯಲ್ಲಿ ಚುನಾವಣೆಯಲ್ಲಿ ಸೋತ ನಂತರವೂ ನಿರಂತರವಾಗಿ ಜನ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ನಮ್ಮ ಕುಟುಂಬ ಹಲವು ದಶಕಗಳಿಂದ ಸಮಾಜ ಸೇವೆಯಲ್ಲಿದೆ. ಆದರೆ ಕಳೆದ ಚುನಾವಣೆಯಲ್ಲಿನ ನನ್ನ ಸೋಲು ಜನರ ಮನಸ್ಸಿನಲ್ಲಿದೆ. ನನಗೆ ಅನ್ಯಾಯವಾಗಿದೆ ಎನ್ನುವ ನೋವು ಅವರಲ್ಲಿದೆ. ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಅವಕಾಶ ಸಿಕ್ಕಿದರೆ ಖಂಡಿತ ಸ್ಪರ್ಧೆಗೆ ಸಿದ್ದನಿದ್ದೇನೆ ಎಂದು ಮಹಾಂತೇಶ ಕವಟಗಿಮಠ ತಿಳಿಸಿದರು.
ಸಮಾಜಮುಖಿ ಕುಟುಂಬ :
ಕಳೆದೊಂದು ಶತಮಾನದಿಂದ ಕವಟಗಿಮಠ ಕುಟುಂಬದವರು ಕೃಷಿ, ಸಹಕಾರಿ, ವ್ಯಾಪಾರ, ಸರಾಫಿವೃತ್ತಿ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಮಹತ್ತರವಾದ ಕೊಡುಗೆಯನ್ನು ಸಲ್ಲಿಸುತ್ತಾ ಬಂದಿದೆ. ನನ್ನ ಅಜ್ಜನವರಾದ ಕಲ್ಲಯ್ಯಸ್ವಾಮಿಯವರು ಚಿಕ್ಕೋಡಿ ಭಾಗದಲ್ಲಿ ಸಹಕಾರಿ ತತ್ವವನ್ನು ಅನುಷ್ಠಾನಗೊಳ್ಳುವಲ್ಲಿ ಅಹರ್ನಿಶಿ ಶ್ರಮಿಸಿದರು. ರೈತರ ಕಣ್ಮಣಿಯಾಗಿ, ಶಿಕ್ಷಣಪ್ರೇಮಿಗಳಾಗಿ ಸಮಾಜಮುಖಿಯಾಗಿ ಬದುಕಿದರು. ಅವರ ಆದರ್ಶಪಥದಲ್ಲಿಯೇ ಮುನ್ನಡೆದ ಲಿಂ.ಮಲ್ಲಯ್ಯಸ್ವಾಮಿಯವರು ಸಹಕಾರಿ-ಶಿಕ್ಷಣ ರಂಗದಲ್ಲಿ ಕೈಗೊಂಡ ಅನನ್ಯಸೇವೆಗಳಿಂದ ಜನಮಾನಸದಲ್ಲಿ ಇಂದಿಗೂ ಹಸಿರಾಗಿ ಉಳಿದಿದ್ದಾರೆ.
ಮಹಾಂತೇಶ ಕವಟಗಿಮಠ ಅವರು ಕೆಎಲ್‌ಇ ಸಂಸ್ಥೆ, ಬೆಳಗಾವಿ ಬಿಡಿಸಿಸಿ ಬ್ಯಾಂಕಿನ ನಿರ್ದೇಶಕರಾಗಿ, ಸತತ ಎರಡು ಸಲ ವಿಧಾನ ಪರಿಷತ್ತಿನ ಸದಸ್ಯರಾಗಿ, ಸರ್ಕಾರದ ಮುಖ್ಯ ಸಚೇತಕರಾಗಿ ಹಳ್ಳಿಗಳ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿದ್ದಾರೆ. ಗ್ರಾಮ ಪಂಚಾಯತ್‌ಗಳ ದಶಕಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ನೀಡಿದ್ದಾರೆ. ನೀರಾವರಿ ಯೋಜನೆಗಳನ್ನು ಸಕಾಲಕ್ಕೆ ಜಾರಿಗೆ ತಂದಿದ್ದಾರೆ. ರೈತರ ಧ್ವನಿಯಾಗಿ ಗ್ರಾಮಪಂಚಾಯತ್‌ಗಳನ್ನು ತಳಮಟ್ಟದಲ್ಲಿ ಸಂಘಟಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಇದೆಲ್ಲದರೊಂದಿಗೆ ಶ್ರೀ ಮಹಾಂತೇಶ ಕವಟಗಿಮಠ ಅವರು ಕಳೆದ 22 ವರ್ಷಗಳಿಂದ ಅಬಾಧಿತವಾಗಿ ಶೈಕ್ಷಣಿಕ ಸೇವೆಗೂ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ಅವರ ಸಹೋದರ ಜಗದೀಶ ಕವಟಗಿಮಠ ಕೂಡ 20 ವರ್ಷಗಳಿಂದ ಕರ್ನಾಟಕ ಸಹಕಾರಿ ಮಂಡಳಿಗಳ ನಿಕಟಪೂರ್ವ ಉಪಾಧ್ಯಕ್ಷರಾಗಿ ಸೇವಾನಿರತರಾಗಿದ್ದಾರೆ. ಅವರ ಮಗ ಶರತಚಂದ್ರ ಕವಟಗಿಮಠ ‘ಶ್ರೀ ಮಹಾಂತೇಶ ಕವಟಗಿಮಠ ಸೌಹಾರ್ದ ಸಹಕಾರಿ ಸಂಘ ನಿಯಮಿತ’ದ ಅಧ್ಯಕ್ಷರಾಗಿ ಸಹಕಾರಿರಂಗಕ್ಕೆ ದಾಪುಗಾಲಿಟ್ಟಿದ್ದಾರೆ.
ಕವಟಗಿಮಠ ಮನೆತನವು ಗಡಿಭಾಗದಲ್ಲಿ ಕಳೆದ ನಾಲ್ಕು ತಲೆಮಾರುಗಳಿಂದ ಸಾಮಾಜಿಕ ಸೇವೆಯನ್ನು ಒಂದು ವ್ರತದಂತೆ ಸ್ವೀಕರಿಸಿದೆ. ಕಾಯಾ-ವಾಚಾ-ಮನಸಾ ತ್ರಿಕರಣಪೂರ್ವಕವಾಗಿ ದಾಸೋಹಂಭಾವದಿಂದ ಸೇವೆಗೆ ಅರ್ಪಿಸಿದ ಹೆಮ್ಮೆಯಭಾವ ನಮ್ಮದು. ಸಹಾಯಬೇಡಿ ಬಂದ – ಅಸಂಖ್ಯ ಬಡ ವಿದ್ಯಾರ್ಥಿಗಳಿಗೆ ಪ್ರತಿವರ್ಷ ಶೈಕ್ಷಣಿಕ ಫೀಜುಗಳನ್ನು ಕೊಡುವುದು, ಬಡ ರೋಗಿಗಳು ಆಸ್ಪತ್ರೆಗೆ ದಾಖಲಾದಾಗ ಅವರ ವೈದ್ಯಕೀಯ ವೆಚ್ಚವನ್ನು ಭರಿಸುವುದು, ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮಗಳನ್ನು ಆಯೋಜಿಸುವುದು, ಉಪಯುಕ್ತವಾದ ಉಪನ್ಯಾಸಗಳನ್ನು ಸಂಘಟಿಸುವುದು, ಕ್ರೀಡಾಕೂಟಗಳು, ಕನ್ನಡಪರ ಸಮಾರಂಭಗಳು, ರಾಜ್ಯೋತ್ಸವದಂತಹ ರಚನಾತ್ಮಕ ಚಟುವಟಿಕೆಗಳಿಗೆ ಸಹಾಯಹಸ್ತ ನೀಡುತ್ತಾ ಬಂದಿದ್ದೇವೆ. ಈ ಸೇವೆಯಲ್ಲಿ ಯಾವುದೇ ಜಾತಿ-ಪಂಥ-ಧರ್ಮ-ಭಾಷೆಗಳ ಗೋಡೆ ಹಾಕಿಕೊಳ್ಳದೇ ಹೃದಯಾರೆ ಸಮಾಜದ ಋಣಕ್ಕೆ ಅಣಿಯಾಗಿದ್ದೇವೆ ಎಂದು ಕವಟಗಿಮಠ ವಿವರಿಸಿದರು.
ಈ ದಿಸೆಯಲ್ಲಿ ಮಾತೋಶ್ರೀ ಶರಣೆ ಶಾಂತಾದೇವಿ ಮಲ್ಲಯ್ಯಸ್ವಾಮಿ ಕವಟಗಿಮಠ ಅವರ ಸದಿಚ್ಛೆಯಂತೆ ಕವಟಗಿಮಠ ಅವರ ಕುಟುಂಬವು ಈ ಪವಿತ್ರ ಸಾಮಾಜಿಕ ಸೇವೆಯು ಅನುಚಾನವಾಗಿ ಮುಂದುವರೆಯಬೇಕೆಂಬ ಸದ್ದುದ್ದೇಶದಿಂದ ‘ ಶ್ರೀ ಮಹಾಂತೇಶ ಕವಟಗಿಮಠ ಚಾರಿಟೇಬಲ್ ಟ್ರಸ್ಟ್’ನ್ನು ನಿರ್ಮಿಸುವ ಸಂಕಲ್ಪವನ್ನು ಮಾಡಿದೆ. ಅವರ ಹುಟ್ಟುಹಬ್ಬ ದಿನದಂದೆ, ಅಂದರೆ ಜನವರಿ 16, 2024 ರಂದು ಈ ಚಾರಿಟೇಬಲ್ ಟ್ರಸ್ಟ್ನ್ನು ಉದ್ಘಾಟಿಸಬೇಕೆಂಬುದು ಮಾತೋಶ್ರೀಯವರ ಹೆಬ್ಬಯಕೆಯೂ ಆಗಿತ್ತು. ಅದು ಸವದತ್ತಿ ತಾಯಿಯವರ ತವರು ಮನೆ, ಮಹಾಂತೇಶ ಅವರು ಹುಟ್ಟಿದ ಊರು, ಶಕ್ತಿದೇವತೆ ಯಲ್ಲಮದೇವಿಯ ಪವಿತ್ರವಾದ ಪುಣ್ಯಕ್ಷೇತ್ರ ಅಂತೆಯೆ ಈ ಟ್ರಸ್ಟ್ ಪೂಜ್ಯರ ಗಣ್ಯರ ಸಮ್ಮುಖದಲ್ಲಿ ಉದ್ಘಾಟನೆಗೊಳ್ಳುತ್ತಿದೆ.
‘ಶ್ರೀ ಮಹಾಂತೇಶ ಕವಟಗಿಮಠ ಚಾರಿಟೇಬಲ್ ಟ್ರಸ್ಟ್’ನ ಧ್ಯೇಯೋದ್ದೇಶಗಳು :
ಶಿಕ್ಷಣ : ಶಿಕ್ಷಣವೇ ಶಕ್ತಿ. ಶಿಕ್ಷಣ ಮಾತ್ರ ಸಮಾಜವನ್ನು ದೇಶವನ್ನು ಮುನ್ನಡೆಸಬಲ್ಲದು. ಯಾವ ದೇಶ ಶಿಕ್ಷಣದಲ್ಲಿ ಅಗಾಧವಾದುದನ್ನು ಸಾಧಿಸುತ್ತದೆಯೋ ಆ ದೇಶ ಅಪ್ರತಿಮವಾಗಿ ಬೆಳೆದುನಿಲ್ಲುತ್ತದೆ. ಅಂತಹ ಶಿಕ್ಷಣವನ್ನು ಪಡೆಯುವುದು ಭಾರತದ ಗ್ರಾಮೀಣ ಪ್ರದೇಶದ ಪ್ರತಿಭಾವಂತ ಮಕ್ಕಳಿಗೆ ಗಗನ ಕುಸುಮವಾಗಿತ್ತು. ಅದರಲ್ಲಿಯೂ ಉತ್ತರ ಕರ್ನಾಟಕದ ಮಕ್ಕಳು ಶಿಕ್ಷಣವನ್ನು ಪಡೆಯುವ ಗೋಸ್ಕರ ದೂರದ ಪಟ್ಟಣ ಪ್ರದೇಶಗಳನ್ನು ಅರಸಿ ಮಹಾರಾಷ್ಟçಕ್ಕೆ ಹೋಗಬೇಕಾಗಿದ್ದ ಸಂದರ್ಭವಾಗಿತ್ತು. ಬಡಮಕ್ಕಳಿಗೆ ಅದು ಅಸಾಧ್ಯವಾಗಿದ್ದ ಕಾಲ. ಕೆಎಲ್‌ಇ ಸಂಸ್ಥೆಯAತಹ ಹಲವು ಸಂಸ್ಥೆಗಳು ಮಕ್ಕಳ ಶೈಕ್ಷಣಿಕ ಹಸಿವನ್ನು ನೀಗಿಸಿದವು. ಆದರೆ ಇಂದಿಗೂ ಶಿಕ್ಷಣವನ್ನು ಪಡೆಯುವ ಅಸಂಖ್ಯ ಬಡಮಕ್ಕಳು ನಮ್ಮ ಮಧ್ಯೆ ಇದ್ದಾರೆ. ಅವರಿಗೆ ಪ್ರಾಥಮಿಕ ಶಿಕ್ಷಣದಿಂದ ಸ್ನಾತಕೋತ್ತರ ಶಿಕ್ಷಣದ ವರೆಗೆ ಧನ ಸಹಾಯವನ್ನು ಮಾಡುವುದು ಟ್ರಸ್ಟ್ನ ಉದ್ದೇಶವಾಗಿದೆ.
ಆರೋಗ್ಯ: ಆರೋಗ್ಯವೇ ಭಾಗ್ಯ. ಆದರೆ ಅನಾರೋಗ್ಯ ಪೀಡಿತರಾಗಿ ಬದುಕಿನಲ್ಲಿ ಸಾಕಷ್ಟು ಜೀವನ್ಮರಣದ ನಡುವೆ ಹೋರಾಡಬೇಕಾಗುತ್ತದೆ. ಇಂದು ಬಡವರಿಗೆ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುವುದು ಬಹುದುಬಾರಿ ಎನಿಸಿದೆ. ಸರಿಯಾದ ಸಮಯಕ್ಕೆ ಚಿಕಿತ್ಸೆಯನ್ನು ಪಡೆಯದೇ ಜೀವನವನ್ನು ಸವಾಲಿಗೆ ಒಡ್ಡಬೇಕಾದ ಸನ್ನಿವೇಶ ನಿರ್ಮಾಣವಾಗುತ್ತಿದೆ. ಅಂತಹ ಬಡರೋಗಿಗಳಿಗೆ ವೈದ್ಯಕೀಯ ಎಲ್ಲ ರೀತಿಯ ಚಿಕಿತ್ಸೆಯಾಗಿರಬಹುದು, ಗ್ರಾಮೀಣ ಪ್ರದೇಶಗಳಲ್ಲಿ ಉಚಿತ ಆರೋಗ್ಯ ತಪಾಸಣೆಯಂತಹ ಶಿಬಿರಗಳನ್ನು ನಡೆಸುವುದು, ರಕ್ತದಾನ ಶಿಬಿರಗಳನ್ನು ಆಯೋಜಿಸುವುದು ಹೀಗೆ ಟ್ರಸ್ಟ್ ಈ ಕೆಲಸಗಳನ್ನು ನೆರವೇರಿಸಲಿದೆ.
ಪರಿಸರ: ಸುಂದರವಾದ ಪರಿಸರ ಮಾತ್ರ ನಮ್ಮ ಬದುಕನ್ನು ಸುಂದರವನ್ನಾಗಿ ಮಾಡಲು ಸಾಧ್ಯ. ಆದರೆ ಕಳೆದ ಐದು ದಶಕಗಳಿಂದ ಪರಿಸರವನ್ನು ನಾವು ಸಾಕಷ್ಟು ವಿರೂಪಗೊಳಿಸಿದ್ದೇವೆ. ಪರಿಸರ ಮಾಲಿನ್ಯ ಹೇಳಲು ಪದಗಳಿಲ್ಲ. ಪರಿಸರ ಪ್ರಜ್ಞೆ ಇಂದಿನ ಅಗತ್ಯತೆಗಳಲ್ಲಿ ಒಂದು. ಸಸಿಗಳನ್ನು ನೆಡುವುದು, ವನ ಮಹೋತ್ಸವಗಳನ್ನು ಕಾಲಕಾಲಕ್ಕೆ ಆಚರಿಸುವುದು, ಫ್ಲಾಸ್ಟಿಕ್‌ದಂತಹ ತ್ಯಾಜ್ಯಗಳನ್ನು ನಿವಾರಿಸುವುದು ಟ್ರಸ್ಟ್ನ ಮಹತ್ವದ ಉದ್ದೇಶವೆನಿಸಿಕೊಂಡಿದೆ.
ಸಂಸ್ಕೃತಿ ಮತ್ತು ಸಂಸ್ಕಾರ : ನಮ್ಮ ಯುವಜನಾಂಗ ಸನಾತನ ಪರಂಪರೆ ಹಾಗೂ ಸಂಸ್ಕೃತಿಯ ವಾಹಕರಾಗದೆ ಪಾಶ್ಚಾತ್ಯರ ಅನುಕರಣೆಯಲ್ಲಿ ಸಾಗಿರುವುದು ದುರಂತ. ದಿನದಿಂದ ದಿನಕ್ಕೆ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಮತ್ತೊಂದು ವಿಪರ್ಯಾಸದ ಸಂಗತಿ. ಅಂತೆಯೆ ಯುವಜನಾಂಗದಲ್ಲಿ ನೈತಿಕ ಶಿಕ್ಷಣವನ್ನು ತರುವುದು ಇಂದಿನ ಅಗತ್ಯ. ಟ್ರಸ್ಟ್ವು ಅನೇಕ ರಚನಾತ್ಮಕ ಹಾಗೂ ಸೃಜನಾಶೀಲವಾದ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ನೈತಿಕ ಶಿಕ್ಷಣಕ್ಕೆ ಆದ್ಯತೆ ನೀಡಲಿದೆ.
ಸಹಕಾರ : ಇಂದು ಸಹಕಾರಿ ಕ್ಷೇತ್ರ ಸಾಕಷ್ಟು ವಿಸ್ತರಿಸಿದೆ. ಇದರ ಮುಖ್ಯ ಉದ್ದೇಶವೇ ರೈತರ ಹಿತರಕ್ಷಣೆ ಕಾಪಾಡುವುದಾಗಿದೆ. ರೈತರ ಬದುಕು ಹಸನಾದರೆ ದೇಶ ಸುಭಿಕ್ಷೆಯ ತಾಣವಾಗುವುದು. ಅಂತಹ ರೈತರಿಗೆ ಕಾಲಕಾಲಕ್ಕೆ ಮಾರ್ಗದರ್ಶಿಸುವುದು, ಸಹಕಾರಿ ಪತ್ತಿನ ಸಂಘದ ಮೂಲಕ ಅವರನ್ನು ಸ್ವಾಭಿಮಾನಿಗಳನ್ನಾಗಿ ರೂಪಿಸುವುದು, ಕೃಷಿ ಮಾರುಕಟ್ಟೆ, ಸಾವಯವ ಕೃಷಿ ಮೊದಲ್ಗೊಂಡು ಅವರ ಜಾಗೃತಿ ಅಭಿಮಾನಗಳನ್ನು ಮೂಡಿಸುವುದು ಈ ಟ್ರಸ್ಟಿನ ಉದ್ದೇಶಗಳಲ್ಲಿ ಒಂದಾಗಿದೆ.
ಕೆ ವಿ ಪಾಟೀಲ, ಶರತಚಂದ್ರ ಕವಟಗಿಮಠ, ಸಿ ಆರ್ ಪಾಟೀಲ, ಪ್ರಮೋದ ಕೋಚರಿ, ಶಿವಯೋಗಿಮಠ, ರಾಜೇಂದ್ರ ಮುತಗೇಕರ, ಪ್ರಶಾಂತ ಹಿರೇಮಠ ಪತ್ರಿಕಾಗೋಷ್ಠಿಯಲ್ಲಿದ್ದರು.
https://pragativahini.com/wp-admin/post.php?post=128493&action=edit
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ