LatestUncategorized

ಮೈ ಶುಗರ್ ನಲ್ಲಿ ಬರುವ ವರ್ಷ ಎಥನಾಲ್ ಘಟಕ ಸ್ಥಾಪನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಪ್ರಗತಿವಾಹಿನಿ ಸುದ್ದಿ; ಮಂಡ್ಯ: ಮೈ ಶುಗರ್ ನಲ್ಲಿ ಬರುವ ವರ್ಷ ಎಥನಾಲ್ ಘಟಕ ಸ್ಥಾಪನೆ ಮಾಡಿ ರೈತರಿಗೆ ವರದಾನವಾಗುವ ರೀತಿಯಲ್ಲಿ ಪರಿವರ್ತಿಸಲಾಗುವುದೆಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಮಂಡ್ಯ ಜಿಲ್ಲೆ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವತಿಯಿಂದ ಗೆಜ್ಜಲಗೆರೆ ಆವರಣದಲ್ಲಿ ಆಯೋಜಿಸಿದ್ದ ಮೆಗಾ ಡೈರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಕರ್ನಾಟಕ ಹಾಲು ಉತ್ಪಾದನೆ ಡೈರಿ ಅಭಿವೃದ್ಧಿ ಮೂಲಕ ಹಸಿರು ಕ್ರಾಂತಿಯ ನಂತರ ಕ್ಷೀರ ಕ್ರಾಂತಿಯಾಗುತ್ತಿದೆ. ಕರ್ನಾಟಕ ಕ್ಷೀರ ಕ್ರಾಂತಿಯಲ್ಲಿ ತನ್ನದೇ ಕೊಡುಗೆ ನೀಡಿದೆ. ಹಗಲಿರುಳು ರೈತ ಬಂಧುಗಳು ಶ್ರಮಿಸುತ್ತಿದ್ದಾರೆ. ಹಾಲು ಉತ್ಪಾದನೆ ಮಾಡುವ ರೈತ ಮಹಿಳೆಯರಿಗೆ ವಿಶೇಷವಾಗಿ ಮುಖ್ಯ ಮಂತ್ರಿಗಳು ಅಭಿನಂದನೆಗಳನ್ನು ಸಲ್ಲಿಸಿದರು.

1 ಲಕ್ಷ ಲೀ. ಹಾಲು ಸಂಸ್ಕರಿಸುವ ಸಾಮರ್ಥ್ಯ
ಸಮಗ್ರ ಕೃಷಿ ಯಲ್ಲಿ ಹೈನುಗಾರಿಕೆ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಅದಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಕರ್ನಾಟಕದಲ್ಲಿ ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕಾಲದಲ್ಲಿ ಪ್ರೋತ್ಸಾಹ ಧನ ನೀಡುವುದು ಪ್ರಾರಂಭವಾಗಿ ಇಂದು 5.00 ರೂ.ಗಳನ್ನು ಪ್ರತಿ ಹಾಲು ಉತ್ಪಾದಕನಿಗೆ ನೀಡಲಾಗುತ್ತಿದೆ. ಈ ಕ್ಷೇತ್ರದಲ್ಲಿ ತನ್ನದೇ ಆದ ಸವಾಲು ಗಳಿದ್ದರೂ ಇಂದು ಅದನ್ನು ಸರಿದೂಗಿಸಿ ಮುನ್ನುಗ್ಗುತ್ತಿದೆ. ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆಯಲ್ಲಿ 1 ಲಕ್ಷ ಲೀ. ಹಾಲು ಸಂಸ್ಕರಣೆ ಮಾಡುವ ಸಾಮರ್ಥ್ಯ ವಿದೆ ಎಂದರು.

ಮೆಗಾ ಡೈರಿಯಲ್ಲಿ ಸ್ವಾವಲಂಬಿ ವ್ಯವಸ್ಥೆ
ರೈತನ ಬದುಕು ಅನಿಶ್ಚಿತತೆಯಿಂದ ಕೂಡಿರುವ ಈ ಸಂದರ್ಭದಲ್ಲಿ ಅವನ ಬದುಕಿಗೆ ನಿಶ್ಚಿತತೆ ತಂದುಕೊಡುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೃಷಿ ಇಲಾಖೆಯಿಂದ ಸಹಕಾರವನ್ನು ಬೇರ್ಪಡಿಸಿ, ಸಹಕಾರ ಇಲಾಖೆ ಸೃಜಿಸಿ ಭಾರತ ದೇಶದಲ್ಲಿ ಸಹಕಾರ ರಂಗಕ್ಕೆ ಶಕ್ತಿ ತುಂಬಿದ್ದು, ಇದರಿಂದ ಒಂದು ಕ್ರಾಂತಿಯಾಗಲಿದೆ. ಹಲವಾರು ಸುಧಾರಣೆಗಳನ್ನು ತರುವ ಪ್ರಯತ್ನ ಗಳನ್ನು ಮಾಡುತ್ತಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರದ್ದು ಬೆಂಗಳೂರಿನ ಪ್ರಥಮ ಮೆಗಾ ಡೈರಿ ಸ್ಥಾಪನೆಯಲ್ಲಿ ಮಹತ್ವದ ಪಾತ್ರವಿದೆ. ಅದನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಲ್ಲಿಂದ ಪ್ರಾರಂಭವಾದ ಮೆಗಾ ಡೈರಿ ಇಂದು ಎಲ್ಲೆಡೆ ಸ್ಥಾಪನೆಯಾಗುತ್ತಿದೆ. ಸ್ವತಂತ್ರವಾಗಿ ಹಾಲು ಉತ್ಪಾದಿಸಿ, ಸಂಸ್ಕರಿಸಿ, ಪ್ಯಾಕ್ ಮಾಡಿ, ವಿವಿಧ ಪದಾರ್ಥಗಳನ್ನು ತಯಾರಿಸಿ ಸ್ವಾವಲಂಬನೆಯ ವ್ಯವಸ್ಥೆ ಮೆಗಾ ಡೈರಿಯಲ್ಲಿ ಆಗುತ್ತಿದೆ. ನಮ್ಮ ಪ್ರಧಾನಮಂತ್ರಿಗಳ ಆತ್ಮ ನಿರ್ಭರ್ ಭಾರತ್ ಕನಸಿಗೆ ಕರ್ನಾಟಕದ ಹಾಲು ಒಕ್ಕೂಟಗಳು ದೊಡ್ಡ ಕೊಡುಗೆಯನ್ನು ಕೊಡುತ್ತಿವೆ ಎಂದರು.

ರೈತರ ಯೋಜನೆಗಳಿಗೆ ಒಂದು ವಾರದೊಳಗೆ ಅನುಮೋದನೆ
ಮಂಡ್ಯ ಜಿಲ್ಲೆ ಒಕ್ಕಲುತನದಿಂದ ಕೂಡಿದೆ. ಸಕ್ಕರೆ ನಾಡು, ಭತ್ತದ ಖನಿಜ. ಮಂಡ್ಯದ ಅಭಿವೃದ್ಧಿಗೆ ಇನ್ನಷ್ಟು ನೀರಾವರಿ ಮತ್ತು ಕೈಗಾರಿಕೆ ಅಗತ್ಯ ವಿದೆ. ಈ ನಿಟ್ಟಿನಲ್ಲಿ ಮೈ ಶುಗರ್ ಸಂಸ್ಥೆಯನ್ನು ಸರ್ಕಾರಿ ವಲಯದ ಮೂಲಕ ಪ್ರಾರಂಭಿಸಿದೆ. ವಿಶ್ವೇಶ್ವರ ನಾಲೆಯ ನೀರಾವರಿಯ ಕೊನೆ ಭಾಗದಲ್ಲಿರುವ ರೈತರಿಗೆ ಯೋಜನೆಗಳನ್ನು ರೂಪಿಸುತ್ತಿದ್ದು, ಒಂದು ವಾರದಲ್ಲಿ ಅವೆಲ್ಲಕ್ಕೂ ಅನುಮೋದನೆ ನೀಡಲಾಗುವುದು ಎಂದರು.

*ಬಿಜೆಪಿ ನಾಯಕರಿಗೆ, ಮುಖ್ಯಮಂತ್ರಿಗಳಿಗೆ ಈ ವಿಚಾರವಾಗಿ ಮಾತನಾಡಲು ಧೈರ್ಯವಿಲ್ಲ; ಡಿ.ಕೆ.ಶಿವಕುಮಾರ್*

https://pragati.taskdun.com/d-k-shivakumarpressmeetveerasoudhabelagavi/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button