*ಅಬಕಾರಿ ಸಚಿವ ಹಠಾವೋ, ಅಬಕಾರಿ ಖಾತಾ ಬಚಾವೋ ಆಂದೋಲನ: ಸಂಜಯ ಪಾಟೀಲ ಎಚ್ಚರಿಕೆ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸರ್ಕಾರದ ಬೊಕ್ಕಸಕ್ಕೆ ಅತಿ ಹೆಚ್ಚು ರಾಜಸ್ವ (ತೆರೆಗೆ) ನೀಡುತ್ತಿರುವ ಅಬಕಾರಿ ಇಲಾಖೆ, ಇಂದು ಭ್ರಷ್ಟಾಚಾರದ ಸಂಕೋಲೆಯಲ್ಲಿ ಸಿಲುಕಿ ಜನರ ದುಡಿಮೆಯ ದುಡ್ಡು ಅಬಕಾರಿ ಸಚಿವರ ಪಾಲಾಗುತ್ತಿರುವುದರಿಂದ ಅಬಕಾರಿ ಸಚಿವ ಹಠಾವೋ ರಾಜ್ಯ ಅಬಕಾರಿ ಖಾತಾ ಬಚಾವೋ ಮಾಡಬೇಕಾಗಿದೆ ಎಂದು ಮಾಜಿ ಶಾಸಕ ಸಂಜಯ ಪಾಟೀಲ ಹೇಳಿದ್ದಾರೆ.
ಮಂಗಳವಾರ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ ಅವರು, ಅಬಕಾರಿ ಇಲಾಖೆಯಲ್ಲಿ ಕಳೆದ ಮೂರು ವರ್ಷಗಳಿಂದ ವರ್ಗಾವಣೆ, ಮಂಥ್ಲಿ ಮನಿ, ಹಫ್ತಾ ವಸೂಲಿ ದಂಧೆ, ಲೈಸನ್ಸ ನವೀಕರಣಕ್ಕಾಗಿ, ಕಿಕ್ಬ್ಯಾಕ್, ಹೊಸ ಲೈಸೆನ್ಸ್ ಮಂಜೂರಾತಿಗೆ ಲಂಚಗುಳಿತನ ಮತ್ತು ಮಧ್ಯವರ್ತಿಗಳ ಹಾವಳಿಯಿಂದ ನಿರಂತರವಾಗಿ ಲಂಚಾವತಾರ ಸದ್ದು ಮಾಡುತ್ತಿದೆ. ಹಫ್ತಾ ವಸೂಲಿ ಮಾತುಕತೆ ಆಡಿಯೋ ಪ್ರಕರಣದಲ್ಲಿ ಸಚಿವ ಆರ್.ಬಿ. ತಿಮ್ಮಾಪುರ ಮತ್ತು ಅವರ ಪುತ್ರ ವಿನಯ ತಿಮ್ಮಾಪೂರ ಹೆಸರು ಪದೇಪದೇ ಕೇಳಿಬರುತ್ತಿದೆ ಎಂದಿದ್ದಾರೆ.
ಅಂಗಡಿ ತೆರೆಯಲು ಇಲಾಖೆಯ ಕೆಳಹಂತದ ಅಧಿಕಾರಿಗಳಿಂದ ಹಿಡಿದು ದೊಡ್ಡವರವರೆಗೆ ಲಕ್ಷಾಂತರ ರೂ. ಲಂಚ ನೀಡಬೇಕಿದೆ. ಪ್ರತಿ ಅಂಗಡಿಯಿಂದ ಮಂಥ್ಲಿ ವಸೂಲಿ ಮಾಡುತ್ತಿದ್ದ ಆಪಾದನೆ ಇದೆ. ಇದರಿಂದ ಒಟ್ಟು ೧೫ ರಿಂದ ೨೦ ಸಾವಿರ ರೂ. ಮಂಥ್ಲಿ ಮನಿ ಸಂದಾಯವಾಗುತ್ತಿದೆ. ರಾಜ್ಯದ ಒಂದೊಂದು ಜಿಲ್ಲೆಯಿಂದ ವಸೂಲಿ ಮಾಡಿ ರಾಜ್ಯ ಅಬಕಾರಿ ಸಚಿವರಿಗೆ ಹೋಗುತ್ತಿದೆ. ವಿಧಾನಸೌದಲ್ಲಿರುವ ಅಬಕಾರಿ ಸಚಿವರ ಆಪ್ತ ಕಚೇರಿಯಲ್ಲೆ ವರ್ಗಾವಣೆ ದಂಧೆ ಕುರಿತು ಸಚಿವ, ಸಚಿವರ ಪುತ್ರ, ಆಪ್ತ ಕಾರ್ಯದರ್ಶಿ ಹಾಗೂ ಆಪ್ತ ಸಹಾಯಕರ ವಿರುದ್ಧ ರಾಜ್ಯಪಾಲರಿಗೆ ದೂರು ಸಹ ನೀಡಲಾಗಿತ್ತು. ಫೆಡರೇಷನ್ ಆಫ್ ವೈನ್ ಮಚೆಂಟ್ಸ್ ಅಸೋಸಿಯೇಷನ್, ಸರ್ಕಾರಕ್ಕೆ ಪತ್ರ ಬರೆದು ಅಬಕಾರಿ ಸಚಿವರನ್ನ ಬದಲಿಸುವಂತೆ ವಿನಂತಿಸಿತ್ತು. ಕಳೆದ ವರ್ಷ ಏಪ್ರಿಲ್ನಲ್ಲಿ ಅಬಕಾರಿ ಕಚೇರಿಯಲ್ಲಿ ಜಂಟಿ ಆಯುಕ್ತ (ಐಎಂಎಲ್) ಮತ್ತು ನ್ಯಾಯವಾದಿಯ ನಡುವೆ ದೂರವಾಣಿ ಕರೆಯಲ್ಲಿ ಸಿ.ಎಲ್.೭ ಅನುಮತಿಗೆ ೧೮ ಲಕ್ಷ ರೂಪಾಯಿ ನೀಡಬೇಕು, ಅಬಕಾರಿ ಸಚಿವರು ಅಥವಾ ಅವರ ಮಗನಿಂದ ಪೊನ್ಮಾಡಿಸಬೇಕು ಎಂಬ ಸಂಭಾಷಣೆ ನಡೆದಿತ್ತು ಎಂದು ಅವರು ಹೇಳಿದ್ದಾರೆ.
ಮಹಾರಾಷ್ಟ್ರದ ವಿಧಾನಸಭಾ ಚುನಾವಣೆ ಪ್ರಚಾರದಲ್ಲಿ ಪ್ರಧಾನಿ ಮೋದಿಜಿಯವರು ಕರ್ನಾಟಕದ ಅಬಕಾರಿ ಸಚಿವ ಹಾಗೂ ಆತನ ಪುತ್ರನಿಂದ ಅಬಕಾರಿ ವಸೂಲಿ ದಂದೆ ಬಗ್ಗೆ ಚಾಟಿ ಬಿಸಿದ್ದು ಇಂದು ಬಾಸೂಂಡೆಯಾಗಿ ಸರ್ಕಾರದ ಮೇಲೆ ಕಾಣಿಸುತ್ತಿದೆ. ಅಬಕಾರಿ ಸಚಿವರಿಗೆ ಪ್ರತಿ ಜಿಲ್ಲೆಯಿಂದ ೫ ಲಕ್ಷ ರೂ. ಲಂಚ ನೀಡಬೇಕೆಂಬ ಬಗ್ಗೆ ಮಹಿಳಾ ಅಧಿಕಾರಿಯೊಬ್ಬರು ಕಿರಿಯ ಅಧಿಕಾರಿಯ ಜತೆ ಮಾತನಾಡಿದ್ದ ಆಡಿಯೋ ವೈರಲ್ ಆಗಿತ್ತು. ಈ ಪ್ರಕರಣ ಸಂಬಂಧ ಮೂವರನ್ನು ಸಸ್ಪೆಂಡ್ ಮಾಡಲಾಗಿತ್ತು. ೨೪ರ ಸೆ.೨೯ ರಂದು ಹೋಟೆಲ್ ಮತ್ತು ವಸತಿ ಗೃಹ (ಸಿಎಲ್-೭) ಪರವಾನಗಿ ಮಂಜೂರಾತಿಗೆ ಲಂಚದ ಬೇಡಿಕೆ ಇಟ್ಟಿರುವ ಪ್ರಕರಣ ಸಂಬಂಧ ಮಂಡ್ಯ ಜಿಲ್ಲೆಯ ಅಬಕಾರಿ ಉಪ ಆಯುಕ್ತ ಎ. ರವಿಶಂಕರ್, ವಲಯ ನಿರೀಕ್ಷಕ ಶಿವಶಂಕರ್ ಅರಾಧ್ಯ ಅಮಾನತ್ತು ಆಗಿದ್ದಾರೆ. ೨೫ ಆ.೨೦ರಂದು ರೇಸ್ ಕೋರ್ಸ್ ರಸ್ತೆಯ ಬೆಂಗಳೂರು ಟರ್ಪ್ ಕ್ಲಬ್ ಆವರಣದಲ್ಲಿ ಸಿಎಲ್-೪ ಸನ್ನದು ಪರಿ?ತ ನೀಲಿ ನಕಾಶೆ ಅನುಮೋದನೆಗೆ ಲಂಚನೀಡಿಲ್ಲ ಎಂದು ಉದ್ದೇಶಪೂರ್ವಕವಾಗಿ ಅನುಮೋದನೆ ವಿಳಂಬಗೊಳಿಸಿ ಕರ್ತವ್ಯಲೋಪವೆಸಗಿದ ಕಾರಣ ಐವರು ಅಬಕಾರಿ ಅಧಿಕಾರಿಗಳನ್ನು ಸಸ್ಪೆಂಡ್ ಗೊಳಿಸಿ ಇಲಾಖೆ ಆದೇಶ ಹೊರಡಿಸಿತ್ತು ಎಂದಿದ್ದಾರೆ.
ಜಡ್ಡುಗಟ್ಟಿರುವ ಇಲಾಖೆಯನ್ನು ಸರಿಪಡಿಸುವಂತೆ ಫೆಡರೇಷನ್ ಆಫ್ ವೈನ್ ಮಚಂಟ್ಸ್, ಸರ್ಕಾರಕ್ಕೆ ಹಿಂದೆಯೇ ಪತ್ರ ಬರೆದಿತ್ತು. ಇಲಾಖೆಯಲ್ಲಿ ಟ್ರ್ಯಾಪ್ ಆಗಿರುವ ಅಧಿಕಾರಿಗಳಿಗೆ ಲಾಭದಾಯಕ ಹುದ್ದೆ ನೀಡದಂತೆ ಮನವಿ ಮಾಡಿಕೊಂಡಿತ್ತು. ಅಲ್ಲದೆ, ಇಲಾಖೆಯಲ್ಲಿ ಖಾಲಿ ಅಥವಾ ಲಭ್ಯವಿರುವ ೫೬೯ ಬಾರ್ ಲೈಸೆನ್ಸ್ ಈ-ಹರಾಜು ಪ್ರಕ್ರಿಯೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಆರೋಪಗಳಿಗೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಕರ್ತವ್ಯ ಲೊಪ, ಭ್ರಷ್ಟಾಚಾರ, ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಸೇರಿ ವಿವಿಧ ಭ್ರಷ್ಟಾಚಾರ ಸಂಬಂಧ ಇಲಾಖೆಯಲ್ಲಿ ಇದುವರೆಗೆ ೪೮ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಕೇಸ್ ದಾಖಲಾಗಿವೆ. ಕೆಲವರು ನಿವೃತ್ತಿ ಕಂಡರೂ ಯಾವುದೆ ಪ್ರಕರಣ ಇತ್ಯರ್ಥವಾಗುವಲ್ಲಿ ಸರ್ಕಾರ ನ್ಯಾಯಾಲಯಕ್ಕೆ ಸ್ಪಂದಿಸದೆ ಬ್ರಷ್ಟರಪರ ನಿಂತಿದ್ದಾರೆ. ಹಿಂದೆಯೂ ಹಲವು ಅಬಕಾರಿ ಇಲಾಖೆಯ ಅಧಿಕಾರಿಗಳು ಲಂಚ ಸ್ವೀಕರಿಸುತ್ತಿದ್ದಾಗ ಸಿಕ್ಕಿ ಬಿದ್ದಿರುವ ನಿದರ್ಶನಗಳಿವೆ ಎಂದು ಸಂಜಯ ಪಾಟೀಲ ಹೇಳಿದ್ದಾರೆ.
ಪ್ರತಿ ವರ್ಷ ಸರಾಸರಿ ಐದಾರು ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಸಂಬಂಧ ದೂರುಗಳು ದಾಖಲಾಗುತ್ತಿವೆ. ಅಲ್ಲದೆ, ೩ ವರ್ಷದಲ್ಲಿ ಉಪ ಅಧೀಕ್ಷಕರು, ನಿರೀಕ್ಷಕರು ಹಾಗೂ ಉಪ ಆಯುಕ್ತರು ಸೇರಿ ಒಟ್ಟು ೯ ಅಧಿಕಾರಿಗಳು ಲಂಚ ಪಡೆಯುವ ವೇಳೆ ಟ್ರ್ಯಾಪ್ ಆಗಿ ಸಿಕ್ಕಿಬಿದ್ದಿದ್ದಾರೆ. ಹೊಸದಾಗಿ ಹೋಟೆಲ್ ಮತ್ತು ವಸತಿಗೃಹ (ಸಿಎಲ್-೭) ಪರವಾನಗಿ ನೀಡುವಾಗ ಮುಂಗಡ ೨೫ ಲಕ್ಷ ರೂಪಾಯಿ ಲಂಚ ಪಡೆಯುವ ವೇಳೆ ಬಿಯುಡಿ-೮ ಅಬಕಾರಿ ಉಪ ಆಯುಕ್ತ ಜಗದೀಶ್ ನಾಯ್ಕ್, ಅಧಿಕ್ಷಕ ಕೆ.ಎಸ್.ತಮ್ಮಣ್ಣ ಪೇದೆ ಲಕ್ಕಪ್ಪ ಲೊಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಇವರೆಲ್ಲರು ಅಬಕಾರಿ ಸಚಿವರ ಹಾಗೂ ಪುತ್ರನ ಜೊತೆ ಹಣಕಾಸಿನ ವ್ಯವಹಾರ ಮಾತನಾಡಿರುವ ಪುರಾವೆಗಳಿದ್ದು ಮುಖ್ಯ ಪೇದೆ ನಿಂಗಪ್ಪ ಸಾವಂತ ಅಬಕಾರಿ ಹಾಗೂ ಇತರ ಇಲಾಖೆಗಳಿಂದ ಹಣ ವಸೂಲಿ ದಂದೆಗೆ ಇಳಿದಿರುವ ಬಗ್ಗೆ ಮಾಹಿತಿ ಇದೆ ಎಂದಿದ್ದಾರೆ.
ಅಬಕಾರಿ ಸಚಿವರನ್ನ ಆ ಇಲಾಖೆಯಿಂದ ವಜಾ ಗೊಳಿಸಬೇಕು. ಆವರ ಪುತ್ರ ಹಾಗೂ ಅಬಕಾರಿ ಇಲಾಖೆಯ ಭ್ರಷ್ಟ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ತೆಗೆದುಕೊಂಡು ಇಲಾಖೆ ರಕ್ಷಿಸಬೇಕು. ಇಲ್ಲದಿದ್ದರೆ ಬಿಜೆಪಿ ಬೀದಿಗಿಳಿದು ಗ್ಯಾರೆಂಟಿ ಹೆಸರಿನಲ್ಲಿ ಕೊಳ್ಳೆ ಹೊಡೆಯುತ್ತಿರುವ ಸಿದ್ದರಾಮಯ್ಯನವರ ಸರ್ಕಾರದ ವಿರುದ್ದ ಜನಾಂದೋಲನ ಹಮ್ಮಿಕೊಳ್ಳುವದಾಗಿ ಅವರು ಹೇಳಿದ್ದಾರೆ.




