Latest

ವಿಶೇಷ ಸಂದರ್ಭ ಎಂದು ಪರಿಗಣಿಸಿ ಶಿಕ್ಷಕಿಯರ ಮಾತೃತ್ವ ರಜೆ ವಿಸ್ತರಿಸಿ

ಪ್ರಗತಿವಾಹಿನಿ ಸುದ್ದಿ, ಧಾರವಾಡ – ಈ ವರ್ಷ ಕೊರೋನಾ ಅಟ್ಟಹಾಸ ಮೆರೆಯುತ್ತಿರುವುದರಿಂದ ವಿಶೇಷ ಸಂದರ್ಭವೆಂದು ಪರಿಗಣಿಸಿ ಶಿಕ್ಷಕಿಯರ ಮಾತೃತ್ವ ರಜೆಯನ್ನು 10 ತಿಂಗಳಿಗೆ ವಿಸ್ತರಿಸಬೇಕು ಎಂದು ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಆಗ್ರಹಿಸಿದೆ.

ಸಂಘದ ರಾಜ್ಯಧ್ಯಕ್ಷೆ ಸಾವಿತ್ರಿ ಮಳ್ಳೂರು ಹಾಗೂ ಪ್ರಧಾನ ಕಾರ್ಯದರ್ಶಿ ಸುಮತಿ ಎಸ್ ಈ ಕುರಿತು ಶಿಕ್ಷಣ ಸಚಿವ ಎಸ್.ಸುರೇಶ ಕುಮಾರ ಅವರಿಗೆ ಮನವಿ ಸಲ್ಲಿಸಿದ್ದಾರೆ. ಕೊರೋನಾ ಹಿನ್ನೆಲೆಯಲ್ಲಿ ಚಿಕ್ಕ ಶಿಶುಗಳನ್ನು ಮನೆಯಲ್ಲೂ ಬಿಟ್ಟು ಬರಲಾಗದೆ, ಶಾಲೆಗೂ ಕರೆತರಲಾಗದ ಸ್ಥಿತಿಯಲ್ಲಿ ಶಿಕ್ಷಕಿಯರಿದ್ದಾರೆ. ಹಾಗಾಗಿ ಈ ಎರಡು ವರ್ಷವನ್ನು ವಿಶೇಷ ಸಂದರ್ಭ ಎಂದು ಪರಿಗಣಿಸಿ ಮಾತೃತ್ವ ರಜೆ ವಿಸ್ತರಿಸಿ ಎಂದು ಕೋರಿದ್ದಾರೆ.

ಈಗಾಗಲೆ ಸೋಮವಾರದಿಂದಲೇ ಶಾಲೆಗಳು ಆರಂಭವಾಗಿದ್ದು, ರಾಜ್ಯಾದ್ಯಂತ ಶಿಕ್ಷಕಿಯರು ಹಾಜರಾಗಿದ್ದಾರೆ. ಆದರೆ ಚಿಕ್ಕ ಮಕ್ಕಳಿರುವ ಶಿಕ್ಷಕಿಯರು ಇಂತಹ ಸಂದಿಗ್ಧಪರಿಸ್ಥಿತಿಯಲ್ಲಿ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಎಷ್ಟೋ ಕಡೆ ಶಿಕ್ಷಕಿಯರು ಬಸ್ ಮುಂತಾದ ಸಾರ್ವಜನಿಕ ವಾಹನಗಳಲ್ಲಿ ಸಂಚರಿಸಬೇಕಾಗಿದೆ. ಕೊರೋನಾ ಆತಂಕದಿಂದಾಗಿ ಶಾಲೆಗಳಲ್ಲಿ ಮಗುವನ್ನು ಇಟ್ಟುಕೊಳ್ಳುವುದು, ಹಾಲುಣಿಸುವುದು ಸಮಸ್ಯೆಯಾಗುತ್ತದೆ. ಹಾಗಾಗಿ ಮಾತೃತ್ವ ರಜೆಯನ್ನು ಒಂದು ವರ್ಷ ಇಲ್ಲವೆ, 10 ತಿಂಗಳಿಗೆ ವಿಸ್ತರಿಸಿ ಎಂದು ಕೋರಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button