*ರಾತ್ರಿ ನೂಡಲ್ಸ್ ತಿಂದು ಮಲಗಿದ ಕುಟುಂಬ*: *ಬೆಳಗ್ಗೆ ಐವರ ನಿಗೂಢ ಸಾವು!*

ಪ್ರಗತಿವಾಹಿನಿ ಸುದ್ದಿ: ರಾತ್ರಿ ಊಟ ಮಾಡಿ ಮಲಗಿದ್ದ ಒಂದೇ ಕುಟುಂಬದ ಐವರು ಬೆಳಗ್ಗೆ ಹಾಸಿಗೆಯಲ್ಲೇ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ದಂಪತಿ ಹಾಗೂ ಮೂವರು ಮಕ್ಕಳ ದಿಢೀರ್ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ವಿಷಾಹಾರ ಸೇವನೆಯ ಶಂಕೆಯೂ ವ್ಯಕ್ತವಾಗಿದೆ. ಆದರೆ, ಐವರ ಸಾವಿಗೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ವಿಧಿವಿಜ್ಞಾನ ತಜ್ಞರು ಆಹಾರ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಿದ್ದು, ಮರಣೋತ್ತರ ಪರೀಕ್ಷೆಯ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.
ಮೃತರನ್ನು 38 ವರ್ಷದ ಮಹೇಶ್, 36 ವರ್ಷದ ಪತ್ನಿ ಲಲಿತಾ ಹಾಗೂ ದಂಪತಿಯ ಮೂವರು ಮಕ್ಕಳು ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಕುಟುಂಬದ ಸದಸ್ಯರು ಹಿಂದಿನ ರಾತ್ರಿ ನೂಡಲ್ಸ್ ಸೇವಿಸಿ ಮಲಗಿದ್ದರು. ಶನಿವಾರ ಬೆಳಗ್ಗೆ ಮನೆಯೊಳಗೆ ಯಾವುದೇ ಚಟುವಟಿಕೆ ಕಾಣಿಸದಿದ್ದಾಗ ನೆರೆಹೊರೆಯವರಿಗೆ ಅನುಮಾನ ಬಂದಿದೆ. ಒಳಗೆ ಹೋಗಿ ನೋಡಿದಾಗ ಐವರೂ ಹಾಸಿಗೆಯ ಮೇಲೆ ಪ್ರಾಣ ಕಳೆದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ರಬೂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಐವರನ್ನೂ ಎಬ್ಬಿಸಲು ನೆರೆಹೊರೆಯವರು ಪ್ರಯತ್ನಿಸಿದರೂ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿ, ವಿಧಿವಿಜ್ಞಾನ ತಜ್ಞರ ತಂಡವನ್ನು ಕರೆಸಿಕೊಂಡರು. ಬಳಿಕ ಐವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು.
ಮನೆಯ ಅಡುಗೆಮನೆಯಲ್ಲಿ ಪತ್ತೆಯಾದ ಚಹಾ ಪಾತ್ರೆಗಳು, ನೂಡಲ್ಸ್ ಮತ್ತು ಇತರ ಆಹಾರ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಲು ಕ್ರಮ ಕೈಗೊಳ್ಳಲಾಗಿದೆ. ಕುಟುಂಬವು ಕೊನೆಯದಾಗಿ ಚಹಾ ಮತ್ತು ನೂಡಲ್ಸ್ ಸೇವಿಸಿತ್ತು ಎಂಬ ಮಾಹಿತಿ ಲಭ್ಯವಾಗಿದ್ದರೂ, ಇದೇ ಆಹಾರ ಸೇವನೆಯಿಂದ ಸಾವು ಸಂಭವಿಸಿದೆ ಎಂಬುದು ಇನ್ನೂ ದೃಢಪಟ್ಟಿಲ್ಲ.
ಆಹಾರ ವಿಷಪ್ರಾಶನ ಸೇರಿದಂತೆ ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಮತ್ತು ಪ್ರಯೋಗಾಲಯದ ಪರೀಕ್ಷೆಯ ಫಲಿತಾಂಶಗಳು ಬಂದ ಬಳಿಕವೇ ಸಾವಿನ ನಿಖರ ಕಾರಣ ತಿಳಿಯಲಿದೆ. ಒಂದೇ ಕುಟುಂಬದ ಐವರು ಮೃತಪಟ್ಟಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ತನಿಖೆಯ ಮುಂದಿನ ವಿವರಗಳಿಗಾಗಿ ಕಾಯಲಾಗುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




