ಮೈಸೂರು: ಖ್ಯಾತ ವ್ಯಂಗ್ಯಚಿತ್ರಕಾರ ಅಜಿತ್ ನಿನನ್ (68) ಶುಕ್ರವಾರ ಹೃದಯಾಘಾತದಿಂದ ನಿಧನರಾದರು.
ಶುಕ್ರವಾರ ಬೆಳಗಿನ ಜಾವ ಅಜಿತ್ ನಿನನ್ ಅವರು ಹೃದಯಾಘಾತಕ್ಕೆ ಒಳಗಾಗಿದ್ದರು. ತಕ್ಷಣ ಚಿಕಿತ್ಸೆಗೆ ವ್ಯವಸ್ಥೆ ಏರ್ಪಡಿಸುವಷ್ಟರಲ್ಲಿ ಅವರು ಇಹಲೋಕ ತ್ಯಜಿಸಿದರು.
ಈ ಮೊದಲು ದಿಲ್ಲಿಯಲ್ಲಿ ವಾಸವಾಗಿದ್ದ ಅವರು, ಎರಡು ವರ್ಷಗಳ ಹಿಂದೆ ಮೈಸೂರಿನ ಕೆಆರ್ ಎಸ್ ರಸ್ತೆಯ ಅಪಾರ್ಟ್ ಮೆಂಟ್ ವೊಂದರ ಫ್ಲಾಟ್ ನಲ್ಲಿ ವಾಸವಾಗಿದ್ದರು. ಅವರ ಅಂತ್ಯಕ್ರಿಯೆ ನಗರದ ಚಾಮುಂಡಿ ಬೆಟ್ಟದ ತಪ್ಪಲಿನ ಚಿತಾಗಾರದಲ್ಲಿ ಭಾನುವಾರ (ಸೆ10) ಮಧ್ಯಾಹ್ನ ಒಂದು ಗಂಟೆಗೆ ನೆರವೇರಲಿದೆ. ಅಜಿತ್ ನಿನನ್ ಅವರಿಗೆ ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ.
ತಮ್ಮದೇ ಆದ ವಿಶಿಷ್ಟ ಕಾರ್ಟೂನಿಂಗ್ ಶೈಲಿ ಹೊಂದಿದ್ದ ಅಜಿತ್, ಕ್ಯಾರಿಕೇಚರಿಂಗ್ ನಲ್ಲೂ ಸಿದ್ಧಹಸ್ತರಾಗಿದ್ದರು. ಅವರ ರಾಜಕೀಯ ವ್ಯಂಗ್ಯಚಿತ್ರಗಳು ದೇಶ, ಹೊರದೇಶಗಳಲ್ಲೂ ಖ್ಯಾತಿ ತಂದುಕೊಟ್ಟಿದ್ದವು. ತಮ್ಮ ಮೊನಚಾದ ವ್ಯಂಗ್ಯಚಿತ್ರಗಳ ಮೂಲಕ ದೇಶದ ಸಾಮಾಜಿಕ, ರಾಜಕೀಯ ಸೇರಿದಂತೆ ಎಲ್ಲ ವಲಯದ ವಿಡಂಬನೆಗಳನ್ನು ರೇಖೆಗಳ ಮೂಲಕ ಅಭಿವ್ಯಕ್ತಗೊಳಿಸುವ ಮೂಲಕ ಸಮಾಜದ ಸ್ಥಿತಿಗತಿಗಳಿಗೆ ಅವರ ಕಾರ್ಟೂನ್ ಗಳು ಕನ್ನಡಿಯಾಗಿವು. ಈ ಕಾರಣಕ್ಕೇ ಕೆಲವೊಮ್ಮೆ ರಾಜಕೀಯ ನಾಯಕರ ಕೆಂಗಣ್ಣಿಗೂ ಗುರಿಯಾಗಿದ್ದಿದೆ.
ಇಂಡಿಯಾ ಟುಡೆ, ಔಟ್ ಲುಕ್, ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಗಳಿಗೆ ವ್ಯಂಗ್ಯಚಿತ್ರಕಾರರಾಗಿದ್ದ ಅವರು, ಇಂಡಿಯಾ ಟುಡೆ ಪತ್ರಿಕೆ ಬಳಗದ ‘ಟಾರ್ಗೆಟ್’ ಎಂಬ ಮಕ್ಕಳ ಪತ್ರಿಕೆಗೆ ‘ಡಿಟೆಕ್ಟಿವ್ ಮೂಚ್ ವಾಲಾ’ ಎಂಬ ಸರಣಿ ವ್ಯಂಗ್ಯಚಿತ್ರಗಳನ್ನು ಪ್ರಕಟಿಸಿದ್ದರು. ಬಳಿಕ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಕಾರ್ಟೂನಿಸ್ಟ್ ಆಗಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ