ಪ್ರಗತಿವಾಹಿನಿ ಸುದ್ದಿ; ನವದೆಹಲಿ: ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಕೆಂಪುಕೋಟೆ ಮೇಲೆ ರಾಷ್ಟ್ರ ಧ್ವಜ ಹೊರತಾದ ಧ್ವಜ ಹಾರಿಸಲಾಗಿದ್ದು, ಇಡೀ ರಾಷ್ಟ್ರವೇ ತಲೆತಗ್ಗಿಸುವಂತೆ ಮಾಡಿದ್ದಾರೆ ರೈತರ ಹೆಸರಿನಲ್ಲಿ ಪ್ರತಿಭಟನೆ ನಡೆಸುತ್ತಿರುವ ಗೂಂಡಾಗಳು.
ಕೃಷಿ ಕಾಯ್ದೆ ವಿರೋಧಿಸಿ ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ಟ್ರ್ಯಾಕ್ಟರ್ ರ್ಯಾಲಿ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕೆಂಪುಕೋಟೆಗೆ ನುಗ್ಗಿದ ಪ್ರತಿಭಟನೆಕಾರರು ಧ್ವಜಾರೋಹಣ ಮಾಡಿರುವ ಘಟನೆ ನಡೆದಿದೆ.
ಪ್ರತಿಭಟನಾ ನಿರತರ ಮೇಲೆ ಪೊಲೀಸರು ಲಾಠಿಚಾರ್ಜ್, ಅಶ್ರುವಾಯು ಪ್ರಯೋಗ, ಜಲಫಿರಂಗಿ ಪ್ರಯೋಗ ಮಾಡಿದರೂ ಜಗ್ಗದ ಪ್ರತಿಭಟನೆಕಾರರು ಟ್ರ್ಯಾಕ್ಟರ್, ಕ್ರೇನ್, ಸೇರಿದಂತೆ ವಿವಿಧ ವಾಹನಗಳಲ್ಲಿ ದೆಹಲಿಯ ಹೃದಯ ಭಾಗ ಕೆಂಪುಕೋಟೆಗೆ ನುಗ್ಗಿದ್ದಾರೆ. ರ್ಯಾಲಿ ತಡೆಯಲು ಮುಂದಾದ ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿದ್ದು, ಬಸ್ ಗಳ ಗಾಜುಗಳನ್ನು ಪುಡಿ ಪುಡಿ ಮಾಡಿದ್ದಾರೆ. ರ್ಯಾಲಿ ಹಿಂಸಾಚಾರಕ್ಕೆ ತಿರುಗಿದ್ದರೂ ಜಗ್ಗದ ಸಾವಿರಾರು ಪ್ರತಿಭಟನೆಕಾರರು ಕೆಂಪುಕೋಟೆಗೆ ನುಗ್ಗಿ ರಾಷ್ಟ್ರ ಧ್ವಜಾರೋಹಣ ಮಾಡುವ ಸ್ಥಳಕ್ಕೆ ತೆರಳಿ ಧ್ವಜಸ್ತಂಭವೇರಿ ಪ್ರತ್ಯೇಕ ಧ್ವಜವನ್ನು ಹಾರಿಸಿದ್ದಾರೆ.
ಈ ಧ್ವಜ ಯಾವುದು ಎನ್ನುವ ಕುರಿತು ವಿಭಿನ್ನ ವಾದ ಕೇಳಿ ಬರುತ್ತಿದೆ.
ದೆಹಲಿಯಲ್ಲಿ ಟ್ರ್ಯಾಕ್ಟರ್ ರ್ಯಾಲಿ ಹಿಂಸಾಚಾರಕ್ಕೆ ತಿರುಗುತ್ತಿದ್ದಂತೆ ಮುಂಜಾಗೃತಾ ಕ್ರಮವಾಗಿ 11 ಮೆಟ್ರೋ ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ