
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ, ಬಲ ದಂಡೆ, ಎಡ ದಂಡೆ ಹಾಗೂ ಚಿಕ್ಕೋಡಿ ಕಾಲುವೆಗಳಿಗೆ ನೀರು ಬಿಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಇಂದು ಬೆಳಗಾವಿ ಪ್ರಾದೇಶಿಕ ಆಯುಕ್ತರ ಕಚೇರಿ ಮುಂದೆ ಧರಣಿ ನಡೆಸಲಾಯಿತು.
ಹಿಡಕಲ್ ಜಲಾಶಯ ಹಾಗೂ ಘಟಪ್ರಭಾ ನದಿ ವ್ಯಾಪ್ತಿಯಲ್ಲಿರುವ ರೈತರು, ಕೂಲಿಕಾರರು ಜಮೀನುಗಳಲ್ಲಿ ಜನ ಜಾನುವಾರುಗಳನ್ನು ಕಟ್ಟಿಕೊಂಡು ವಾಸಿಸುತ್ತಿದ್ದೇವೆ. ಈಗ ಮಾರ್ಚ್ ತಿಂಗಳ ಮಧ್ಯ ಭಾಗದಲ್ಲಿ ಬಿಸಿಲಿನ ಬೇಗೆ ಅಧಿಕವಾಗಿದೆ. ಹಾಗಾಗಿ, ಘಟಪ್ರಭಾ ನದಿ ಪಾತ್ರ ಮತ್ತು ಸುತ್ತಲಿನ ಹಳ್ಳ-ಕೊಳ್ಳಗಳು, ಬಾವಿ, ಕೊಳವೆ ಬಾವಿ ಹಾಗೂ ಕೆರೆಗಳು ಬತ್ತುವ ಸ್ಥಿತಿ ನಿರ್ಮಾಣ ಆಗುತ್ತಿದೆ. ಆದ್ದರಿಂದ ಜನ, ಜಾನುವಾರುಗಳಿಗೆ ನೀರಿನ ಹಾಹಾಕಾರ ಶುರುವಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ತಕ್ಷಣ ನೀರಾವರಿ ನಿಗಮಗಳ ಸಭೆ ಕರೆದು ಜಲಾಶಯದ ನೀರಿನ ಪ್ರಮಾಣವನ್ನು ಗಣನೆಗೆ ತೆಗೆದುಕೊಂಡು ಲಭ್ಯತೆಗೆ ಅನುಗುಣವಾಗಿ ಘಟಪ್ರಭಾ ನದಿ ಮತ್ತು ಕಾಲುವೆಗಳಿಗೆ ನೀರು ಬಿಡುವ ಅಗತ್ಯತೆಯಿದೆ. ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ ಕರೆದು ತಕ್ಷಣ ನೀರು ಬಿಡುವುದರ ಬಗ್ಗೆ ನಿರ್ಣಯ ಕೈಗೊಳ್ಳುವಂತೆ ಒತ್ತಾಯಿಸಿದರು.
ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಗಣೇಶ ಇಳಿಗೇರ ಮಾತನಾಡಿ, ಬೆಳಗಾವಿ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಉದ್ಭವಿಸಿದೆ. ದಿನದಿಂದ ದಿನಕ್ಕೆ ನೀರಿಗಾಗಿ ಹಾಹಾಕಾರ ಹೆಚ್ಚಾಗಲಿದೆ. ಇಂಥ ಸಂದರ್ಭದಲ್ಲಿ ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ಹಿಡಕಲ್ ಜಲಾಶಯದಿಂದ ನೀರು ಬಿಡಲು ಸರ್ಕಾರ ಮುಂದಾಗಿರುವುದು ಸರಿಯಲ್ಲ. ತಕ್ಷಣವೇ ಜಿಲ್ಲೆಯ ಜನ, ಜಾನುವಾರುಗಳ ಹಿತದೃಷ್ಟಿಯಿಂದ ಘಟಪ್ರಭಾ ನದಿ ಮತ್ತು ಕಾಲುವೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿದರು.
ಮತ್ತೋರ್ವ ರೈತ ಹೋರಾಟಗಾರ ಶಿವಪುತ್ರ ಜಾಕಬಾಳ ಮಾತನಾಡಿ, ಈಗಾಗಲೇ ಬಿಸಿಲಿನ ತಾಪ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದೆ. ಜಿಲ್ಲೆಯ ಪ್ರಮುಖ ನದಿಗಳಾದ ಘಟಪ್ರಭಾ, ಮಲಪ್ರಭಾ, ಹಿರಣ್ಯಕೇಶಿ, ಮಾರ್ಕಂಡೇಯ ಹಾಗೂ ಹಳ್ಳ-ಕೊಳ್ಳ ಬಿಸಿಲಿನ ತಾಪಕ್ಕೆ ಬತ್ತುತ್ತಿವೆ. ಜನ ಜಾನುವಾರುಗಳಿಗೆ ಕುಡಿಯಲು ನೀರು ಇಲ್ಲದಾಗಿದೆ. ಪ್ರಾದೇಶಿಕ ಆಯುಕ್ತರು, ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ ಕರೆದು ಆದಷ್ಟು ಬೇಗ ನೀರು ಬಿಡುವಂತೆ ಆಗ್ರಹಿಸಿದರು.
ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಶಿವನಗೌಡ ಗೌಡರ, ವಿಭಾಗಿಯ ಅಧ್ಯಕ್ಷ ಈರನಗೌಡ ಪಾಟೀಲ, ಗೋಕಾಕ ತಾಲ್ಲೂಕಾ ಅಧ್ಯಕ್ಷ ಬಾಳಪ್ಪ ಪಾಟೀಲ, ಮುಖಂಡರಾದ ಭೀರಪ್ಪ ದೇಶನೂರ, ಪ್ರಕಾಶ ನಾಯಿಕ, ಮಾರುತಿ ಥರಕಾರ ಸೇರಿ ಮತ್ತಿತರರು ಇದ್ದರು.