*ಉಪವಾಸ ಮಾಡಿದ್ರೆ ಕ್ಯಾನ್ಸರ್ ಮಾಯ: ಚರ್ಚೆಗೆ ಕಾರಣವಾದ ಅಣ್ಣಮಲೈ ಹೇಳಿಕೆ*

ಪ್ರಗತಿವಾಹಿನಿ ಸುದ್ದಿ: ಷಷ್ಠಿ ಅಥವಾ ಷಷ್ಠಿ ವ್ರತ ಉಪವಾಸವು ಕ್ಯಾನ್ಸರ್ ರೋಗವನ್ನು ಸಂಪೂರ್ಣವಾಗಿ ತೊಡೆದುಹಾಕಬಹುದು ಎಂದು ಅಣ್ಣಾಮಲೈ ಹೇಳಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ.
ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ ಕೆ ಅಣ್ಣಾಮಲೈ ಅವರು ಉಪವಾಸ ಮಾಡಿದರೆ ಕ್ಯಾನ್ಸರ್ ಕೋಶಗಳನ್ನು ನಾಶ ಮಾಡಬಹುದು ಎಂದಿರುವ ಬೆನ್ನಲ್ಲೇ ವೈದ್ಯಕೀಯ ಸಮುದಾಯ ಅಣ್ಣಾಮಲೈ ವಿರುದ್ಧ ಆಕ್ರೋಶ ಹೊರಹಾಕಿದೆ.
‘ಇತ್ತೀಚಿನ ದಿನಗಳಲ್ಲಿ, ನಾವು ಎಲ್ಲಿಗೆ ಹೋದರೂ, ಜನರು ಎಲ್ಲರಿಗೂ ಕ್ಯಾನ್ಸರ್ ಇದೆ ಎಂದು ಹೇಳುತ್ತಾರೆ, ಕ್ಯಾನ್ಸರ್‌ನ ಹೆಸರುಗಳು ಮಾತ್ರ ಭಿನ್ನವಾಗಿರುತ್ತವೆ. ಕ್ಯಾನ್ಸರ್ ಕೋಶಗಳಿಗೆ ಸಾಮಾನ್ಯ ಕೋಶಗಳಿಗಿಂತ ಸುಮಾರು ಏಳು ಪಟ್ಟು ಹೆಚ್ಚಿನ ಶಕ್ತಿಯ ಅಗತ್ಯವಿರುತ್ತದೆ ಎಂದು ಸಂಶೋಧನೆ ಹೇಳುತ್ತದೆ. ಹಾಗಿದ್ದಲ್ಲಿ, ನಾವು ಕ್ಯಾನ್ಸರ್ ಕೋಶಗಳಿಗೆ ಶಕ್ತಿಯ ಪೂರೈಕೆಯನ್ನು ನಿಲ್ಲಿಸಿದರೆ, ಅವು ತಾನೇ ತಾನಾಗಿ ಸಾಯುವುದಿಲ್ಲವೇ?’ ದೀರ್ಘಕಾಲದ ಉಪವಾಸವು ದೇಹವನ್ನು ಶುದ್ಧಗೊಳಿಸುತ್ತದೆ’ ಎಂದಿದ್ದಾರೆ.
‘ಭಾರತದಲ್ಲಿ ಸಾವಿರಾರು ವರ್ಷಗಳಿಂದ ಅಸ್ತಿತ್ವದಲ್ಲಿರುವ ಕಠಿಣ ಉಪವಾಸದ ಮೂಲಕ ಕ್ಯಾನ್ಸರ್ ಕೋಶಗಳನು ನಿಶ್ಯಕ್ತಗೊಳಿಸಬಹುದು. ಹೀಗೆ ಮಾಡಿದರೆ ರೋಗಿಗಳು ವರ್ಷಕ್ಕೊಮ್ಮೆ ತಮ್ಮ ದೇಹಗಳಿಂದ ಕ್ಯಾನ್ಸರ್ ಕೋಶಗಳನ್ನು ಸಂಪೂರ್ಣವಾಗಿ ಶುದ್ದೀಕರಿಸಬಹುದು’ ಎಂದಿದ್ದಾರೆ ಅಣ್ಣಾಮಲೈ.
ನಾವು 24 ಗಂಟೆಗಳ ಕಾಲ ಉಪವಾಸ ಮಾಡಿದರೆ, ನಮ್ಮ ದೇಹದಲ್ಲಿನ ಕ್ಯಾನ್ಸರ್ ಕೋಶಗಳಿಗೆ ಶಕ್ತಿಯ ಪೂರೈಕೆ ನಿಂತು ಅವು ನಾಶವಾಗುತ್ತವೆ. ನಮ್ಮೆಲ್ಲರಲ್ಲೂ ಕ್ಯಾನ್ಸರ್ ಕೋಶಗಳಿವೆ. ಸಣ್ಣ ಸಂಖ್ಯೆಯ ಕ್ಯಾನ್ಸರ್ ಕೋಶಗಳು ದೇಹದಲ್ಲಿ ಇಲ್ಲಿ ಅಲ್ಲಿ ಇರುತ್ತವೆ. ಅವು ಬೆಳೆದಾಗ ಮಾತ್ರ ಕ್ಯಾನ್ಸರ್ ಆಗುತ್ತದೆ. ಆಗ ಹಂತ 1. ಹಂತ 2, ಹಂತ 3 ಮತ್ತು ಹಂತ 4 ಕ್ಯಾನ್ಸರ್ ಕಾಣಿಸುತ್ತವೆ’ ಎಂದಿದ್ದಾರೆ.
ನಾವು ಯುಗ ಯುಗಗಳಿಂದ ಮಂಗಳವಾರ ಉಪವಾಸ ಆಚರಿಸುತ್ತಿದ್ದೇವೆ. ಆ ಮೂಲಕ ಕ್ಯಾನ್ಸರ್ ಕೋಶಗಳು ಶಕ್ತಿಯನ್ನು ಕಳೆದುಕೊಂಡು ನಾಶವಾದವು. ನಾವು ಶನಿವಾರ ಉಪವಾಸ ಮಾಡಿದ್ದೇವೆ. ಆಗಲೂ ಕ್ಯಾನ್ಸರ್ ಕೋಶಗಳು ನಾಶವಾದವು. ನೀವು ವರ್ಷಕ್ಕೊಮ್ಮೆ ನಿಮ್ಮ ದೇಹವನ್ನು ಸಂಪೂರ್ಣವಾಗಿ ಶುದ್ದೀಕರಿಸಲು ಬಯಸಿದರೆ, ಏಳು ದಿನಗಳ ಕಾಲ ಉಪವಾಸ ಮಾಡಿ, ಎಲ್ಲಾ ಕ್ಯಾನ್ಸರ್ ಕೋಶಗಳು ನಿವಾರಣೆಯಾಗುತ್ತವೆ’ ಎಂದು ಹೇಳಿದ್ದಾರೆ.
‘ನಮ್ಮ ಪೂರ್ವಜರಿಗೆ ಎಂದಿಗೂ ಕ್ಯಾನ್ಸರ್ ಇರಲಿಲ್ಲ. ನಮ್ಮ ಪೀಳಿಗೆ ಮಾತ್ರ ಅದರಿಂದ ಬಳಲುತ್ತಿದೆ. ಯಾಕೆಂದರೆ ನಾವು ಉಪವಾಸವನ್ನು ಮರೆತು ಫಾಸ್ಟ್ ಫುಡ್ ಸೇವಿಸಲು ಪ್ರಾರಂಭಿಸಿದ್ದೇವೆ. ನಾವು ಕೆಎಫ್‌ಸಿಯಂತಾ ಅನಾರೋಗ್ಯಕರ ಆಹಾರವನ್ನು ತಿನ್ನುತ್ತೇವೆ. ಹೆಚ್ಚುವರಿ ಶಕ್ತಿ ದೇಹವನ್ನು ಪ್ರವೇಶಿಸಿದಾಗ, ಕ್ಯಾನ್ಸರ್ ಕೋಶಗಳು ಹೆಚ್ಚಾಗುತ್ತವೆ’ ಎಂದಿದ್ದಾರೆ.
‘ಸ್ವಾಮಿ ವಿವೇಕಾನಂದರು ಇದನ್ನೇ ಒತ್ತಿ ಹೇಳಿದರು. ಆರೋಗ್ಯವಾಗಿರಿ, ಯೋಗವನ್ನು ಅನುಸರಿಸಿ, ಫಿಟ್ ಆಗಿರಿ ಮತ್ತು ಯಾವುದಾದರೂ ಒಂದು ಕ್ರೀಡೆಯನ್ನು ಆಡಿ. ಆದರೆ ಇಂದು, ನಾವು ಸಂಪೂರ್ಣವಾಗಿ ಮೊಬೈಲ್ ಫೋನ್‌ಗಳ ಕಡೆಗೆ ತಿರುಗಿದ್ದೇವೆ. ನಾವು ದೈಹಿಕ ಆರೋಗ್ಯ ಮಾನಸಿಕ ಆರೋಗ್ಯ ಅಥವಾ ರಾಷ್ಟ್ರದ ಹಿತಾಸಕ್ತಿಗಾಗಿ ಸಮಯವನ್ನು ಕಳೆಯಲು ಸಾಧ್ಯವಾಗುತ್ತಿಲ್ಲ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅಣ್ಣಾಮಲೈ ಅವರ ಹೇಳಿಕೆಯನ್ನು ವೈದ್ಯಕೀಯ ಸಮುದಾಯ ತೀವ್ರವಾಗಿ ಅಲ್ಲಗಳೆದಿದೆ.



