ಪ್ರಗತಿವಾಹಿನಿ ಸುದ್ದಿ: 2013ರಲ್ಲಿ ಸಾಗರದ ವರದಶ್ರೀ ಲಾಡ್ಜ್ ನಲ್ಲಿ ನಡೆದಿದ್ದ ಮಗನಿಂದಲೇ ತಂದೆಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ಮಗನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಸಾಗರದ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.
ಬೆಂಗಳೂರಿನ ನಾಗಾನಂದ್ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಅಪರಾಧಿ. 2013,ಅ.29 ರಂದು ಸಾಗರದ ವರದಶ್ರೀ ಲಾಡ್ಜಿನಲ್ಲಿ ನಾಗಾನಂದ್ ಹಾಗೂ ತಂದೆ ಕಸ್ತೂರಿ ರಂಗನ್, ತಾಯಿ ರಮಾ ರೂಮ್ ಮಾಡಿಕೊಂಡಿದ್ದರು. ಈ ವೇಳೆ ಮಗ ನಾಗಾನಂದ್ ತಂದೆ ಕಸ್ತೂರಿ ರಂಗನ್ ಅವರು ಮಲಗಿದ್ದ ವೇಳೆ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿ, ತಾಯಿ ರಮಾ ಅವರ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದ.
ವಿಚಾರಣೆ ನಡೆಸಿದ ನ್ಯಾಯಾಲಯವು 2014ರಂದು ಆರೋಪಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿತ್ತು. ತೀರ್ಪು ಪ್ರಶ್ನಿಸಿ ಆರೋಪಿ ನಾಗಾನಂದ್ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದ. ಹೀಕೋರ್ಟ್ ಎರಡು ಸಾಕ್ಷಿಗಳನ್ನು ಹಾಗೂ 313 ಹೇಳಿಕೆ ಪಡೆದು ತೀರ್ಪು ನೀಡಲು ಆದೇಶಿಸಿತ್ತು. ಸಾಕ್ಷಿಗಳ ಹೇಳಿಕೆ ಆಧರಿಸಿ,ಸ್ಥಳದಲ್ಲಿ ಸಿಕ್ಕ ದಾಖಲೆಗಳ ಆಧಾರದ ಮೇಲೆ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಆರೋಪಿ ನಾಗಾನಂದನಿಗೆ ಇದೀಗ ಜೀವಾವಧಿ ಶಿಕ್ಷೆ ಹಾಗೂ ಹತ್ತು ಸಾವಿರ ರೂ.ದಂಡ ವಿಧಿಸಿ ಸಾಗರದ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಪ್ರಭಾವತಿ ಜಿ.ತೀರ್ಪು ನೀಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ