ಅಶೋಕ ಚಂದರಗಿಗೆ ನಾಳೆ ವಿಧಾನಮಂಡಳದಿಂದ ಸನ್ಮಾನ: ಅಭಿನಂದಿಸಿ, ಬೀಳ್ಕೊಟ್ಟ ಹುಕ್ಕೇರಿ ಶ್ರೀಗಳು
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕರ್ನಾಟಕ ವಿಧಾನ ಮಂಡಲದ ವತಿಯಿಂದ ಇದೇ ಸೋಮವಾರ ನವೆಂಬರ 1 ರಂದು ಬೆಂಗಳೂರಿನ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಚರಿಸಲಾಗುವ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿಯವರನ್ನು ಸನ್ಮಾನಿಸಲಾಗುವುದು.
ಅಭಿನಂದಿಸಿ ಬೀಳ್ಕೊಟ್ಟ ಹುಕ್ಕೇರಿ ಶ್ರೀಗಳು
ಭಾನುವಾರ ನಗರದ ಹುಕ್ಕೇರಿ ಹಿರೇಮಠದ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಬೆಂಗಳೂರಿನಲ್ಲಿ ಸೋಮವಾರ ನಡೆಯಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ಪದಾಧಿಕಾರಿಗಳೊಂದಿಗೆ ಹೊರಟ ಅಶೋಕ ಚಂದರಗಿ ಹಾಗೂ ಅವರ ತಂಡವನ್ನು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯಮಹಾಸ್ವಾಮಿಗಳು ಅಭಿನಂದಿಸಿ ಬೀಳ್ಕೊಟ್ಟರು.
ಚಂದರಗಿಯವರು ಕಳೆದ ಮೂವತ್ತು ವರ್ಷಗಳಿಂದ ಗಡಿ ಸಮಸ್ಯೆ, ಮಹಾಜನ ವರದಿ, ಜಲ ವಿವಾದ, ಕಿತ್ತೂರು ಕರ್ನಾಟಕ ಹೋರಾಟ ಹಾಗೂ ಕನ್ನಡ ಅನುಷ್ಠಾನದ ವಿಷಯಗಳ ಬಗ್ಗೆ ಆಳವಾದ ಅಧ್ಯಯನಾತ್ಮಕ ದೃಷ್ಟಿಕೋನದಿಂದ ಹೋರಾಟಗಳನ್ನು ಮುನ್ನಡೆಸಿದ್ದಾರೆ. ಬೆಳಗಾವಿ ನೆಲದ ಗಡಿಭಾಗದ ಕನ್ನಡ ಶಾಲೆಗಳ ಸುಧಾರಣೆಗಾಗಿ ಸರ್ಕಾರಕ್ಕೆ ’ಚಂದರಗಿ ವರದಿ’ ಸಲ್ಲಿಸುವ ಮೂಲಕ ಸರ್ಕಾರಿ ಶಾಲೆಗಳ ಸುಧಾರಣೆಗೆ ಕಾರಣರಾಗಿದ್ದಾರೆ. ಕನ್ನಡ ನಾಡು-ನುಡಿಗೆ ಧಕ್ಕೆ ಬಂದರೆ ಯಾವುದೇ ಮುಲಾಜಿಲ್ಲದೆ ಎಂಥವರನ್ನೂ ಎದುರು ಹಾಕಿಕೊಳ್ಳಬಲ್ಲ ಎದೆಗಾರಿಕೆ ಹೊಂದಿರುವ ಅವರು ಕನ್ನಡ ಚಳುವಳಿಯ ರಥವನ್ನು ಯಾವ ದಿಕ್ಕಿನಲ್ಲಿ ಎಳೆದೊಯ್ಯಬೇಕೆಂದು ಇಂದಿನ ಪೀಳಿಗೆಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಕನ್ನಡ ಕಾಯಕದಲ್ಲಿ ಅವರು ಇನ್ನೂ ಹೆಚ್ಚಿನ ಸಾಧನೆ ಸಲ್ಲಿಸುವಂತಾಗಲಿ” ಎಂದು ಶ್ರೀಗಳು ಹೇಳಿದರು.
ಬೆಂಗಳೂರಿಗೆ ಹೊರಟ ಕ್ರಿಯಾ ಸಮಿತಿ ತಂಡದಲ್ಲಿ ಶಿವಪ್ಪ ಶಮರಂತ, ಮೈನುದ್ದಿನ್ ಮಕಾನದಾರ, ಶಂಕರ ಬಾಗೇವಾಡಿ, ವೀರೇಂದ್ರ ಗೋಬರಿ, ಮಂಜುನಾಥ ಹಾಗೂ ಡಿ.ಕೆ. ಪಾಟೀಲ ಇದ್ದರು.
66 ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ