
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಿನ್ನೆ ತಡ ರಾತ್ರಿವರೆಗೂ ನಡೆದ ಗಣೇಶನ ವಿಸರ್ಜನಾ ಮೇರವಣಿಗೆ ವೇಳೆ ಯುವಕರು ಕುಣಿಯುವ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದಾರೆ. ಬಳಿಕ ಜಗಳವಾಗಿ, ಮೂವರ ಯುವಕರ ಮೇಲೆ ಚಾಕು ಇರಿತವಾಗಿರುವ ಘಟನೆ ನಡೆದಿದೆ.
ಬೆಳಗಾವಿಯ ಚನ್ನಮ್ಮ ವೃತ್ತದ ಬಳಿ ಘಟನೆ ನಡೆದಿದೆ. ಗಣಪತಿ ವಿಸರ್ಜನಾ ಮೆರವಣಿಯಲ್ಲಿ ಪಾಲ್ಗೊಂಡಿದ್ದ ಮೂವರು ಯುವಕರು, ಡಿಜೆಗೆ ಕುಣಿದು ಕುಪ್ಪಳಿಸುವ ವೇಳೆ ಮೇಲೆ ಏಕಾಏಕಿ ದಾಳಿ ನಡೆದಿದೆ. ಘಟನೆಯಲ್ಲಿ ದರ್ಶನ್ ಪಾಟೀಲ, ಸತೀಶ ಪೂಜಾರಿ, ಪ್ರವೀಣ್ ಗುಂಡ್ಯಾಗೋಳಗೆ ಗಂಭೀರ ಗಾಯವಾಗಿದ್ದು, ಮೂವರು ಯುವಕರ ಹೊಟ್ಟೆ ಭಾಗಕ್ಕೆ ಚೂರಿ ಇರಿದು ಆರೋಪಿಗಳು ಪರಾರಿಯಾಗಿದ್ದಾರೆ. ತೀವ್ರ ಅಸ್ವಸ್ಥರಾಗಿದ್ದ ಮೂವರು ಯುವಕರನ್ನು ಬಿಮ್ಸ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಳಗಾವಿ ಜಿಲ್ಲಾಸ್ಪತ್ರೆಗೆ ಎಪಿಎಂಸಿ ಠಾಣೆ ಪೊಲೀಸರು ಭೇಟಿ ನೀಡಿ, ಘಟನೆ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.
ಇನ್ನೂ ಬೆಳಗಾವಿ ಚೆನ್ನಮ್ಮ ವೃತ್ತದಲ್ಲಿ ಮೂವರಿಗೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್ ಪ್ರತಿಕ್ರಿಯಿಸಿದ್ದು, ಮೆರವಣಿಗೆಯಲ್ಲಿ ಚಾಕು ಇರಿತ ಆಗಿಲ್ಲ, ಚೆನ್ನಮ್ಮ ಸರ್ಕಲ್ ಕಡೆ ಆಗಿರೋದು, ಮೆರವಣಿಗೆಯಲ್ಲಿ ಜಗಳ ಆಗಿತ್ತು, ನಮ್ಮ ಪೊಲೀಸರು ಜಗಳ ಬಿಡಿಸಿ ಕಳುಹಿಸಿದ್ದಾರೆ, ಮಾಹಿತಿ ಪ್ರಕಾರ ಎರಡು ಟೀಂನವರಿಗೆ ಮುಂಚೆ ಹಳೇ ದ್ವೇಷ ಇತ್ತು. ಗ್ಯಾಂಗ್ ಇರಲಿಲ್ಲ, ಎಲ್ಲರೂ ಡ್ಯಾನ್ಸ್ ಮಾಡುವಾಗ ಒಬ್ಬರಿಗೊಬ್ಬರಿಗೆ ಕೈತಾಗಿ ಜಗಳ ಆಗಿದೆ. ಮೂವರಿಗೂ ಮೈನರ್ ಗಾಯಗಳಾಗಿವೆ. ಚಾಕು ಇರಿದವರನ್ನು ಅರೆಸ್ಟ್ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ