Kannada NewsKarnataka News

ಆಕಸ್ಮಿಕ ನಿಧನರಾದ ಯೋಧನ ಅಂತ್ಯಕ್ರಿಯೆ: ಬಿಕ್ಕಿ ಬಿಕ್ಕಿ ಅತ್ತ ಕುಟುಂಬಸ್ಥರು

ಪ್ರಗತಿವಾಹಿನಿ ಸುದ್ದಿ, ಅಥಣಿ : ಭಾರತೀಯ ಭೂಸೇನೆಯ ಸಿಕ್ಕಿಂ ನ ಗ್ಯಾಂಗಟೊಕನ ರೆಜಿಮೆಂಟ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಅಥಣಿ ತಾಲೂಕಿನ ಯಲಿಹಡಗಲಿ ಗ್ರಾಮದ ಹುಸೇನ್ ಅಪ್ಪಾಸಾಬ ಮಧಬಾವಿ (36) ಮಾರ್ಗ ಮಧ್ಯದಲ್ಲಿ ರೈಲ್ವೆ ಬೋಗಿಯಲ್ಲಿ ಆಕಸ್ಮಿಕವಾಗಿ ಮೃತಪಟ್ಟಿದ್ದಾರೆ.
ಮೃತ ಯೋಧನ ಪಾರ್ಥಿವ ಶರೀರವನ್ನು ಶುಕ್ರವಾರದಂದು ಸ್ವಗ್ರಾಮಕ್ಕೆ ತರಲಾಯಿತು. ಸ್ವಗ್ರಾಮವಾದ ಯಲಿಹಡಗಲಿಯಲ್ಲಿ ಸಕಲ ಸರಕಾರಿ ಗೌರವದೊಂದಿಗೆ ಮುಸ್ಲಿಂ ಧರ್ಮದ ಸಂಪ್ರದಾಯದಂತೆ  ಸಮುದಾಯದ ರುದ್ರ ಭೂಮಿಯಲ್ಲಿ ಅಂತ್ಯ ಸಂಸ್ಕಾರ ಜರುಗಿತು.
  ಹುಸೇನ್ ಅಪ್ಪಾಸಾಬ ಮಧಬಾವಿ ಅವರು ಸಿಕ್ಕಿಂ ನ ಗ್ಯಾಂಗಟೋಕನ್  6  ಇಂಜಿನಿಯರ್ ರೆಜಿಮೆಂಟ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ವಾರದ ಹಿಂದೆ  ಸ್ವಗ್ರಾಮಕ್ಕೆ ರಜೆ ಮೇಲೆ ಬಂದಿದ್ದರು. ಕಳೆದ ಭಾನುವಾರ ರಜೆ ಮುಗಿಸಿ ಗ್ರಾಮದಿಂದ ಮರಳಿ ಸೇನಾ ಸೇವೆಗೆ ಹಾಜರಾಗಲು ಹೊರಟಿದ್ದ ವೀರಯೋಧ ಗುರುವಾರ ಮಾರ್ಗ ಮಧ್ಯೆ ರೈಲ್ವೆ ಭೋಗಿಯಲ್ಲಿಯೇ ಮೃತಪಟ್ಟಿದ್ದಾರೆ.
   ಪ್ರಾರ್ಥಿವ ಶರೀರವನ್ನು ಸೈನಿಕರ ರಕ್ಷಣೆಯಲ್ಲಿ ಮಧ್ಯಾಹ್ನ 1 ಗಂಟೆಗೆ ಸೇನಾ ವಾಹನದಲ್ಲಿ ಗ್ರಾಮಕ್ಕೆ ತರಲಾಯಿತು.  ವಾಹನವನ್ನು ಗ್ರಾಮಸ್ಥರು ಸಕಲ ಗೌರವಗಳೊಂದಿಗೆ ಸ್ವಾಗತಿಸಿದರು. ಅಂತಿಮ ದರ್ಶನ ಪಡೆಯಲು ಸುತ್ತ  ಮುತ್ತಲಿನ ಹಳ್ಳಿಗಳಿಂದ ಸಾವಿರಾರು ಜನರು ಸೇರಿದ್ದರು. ಬೋಲೊ ಭಾರತ ಮಾತಾಕಿ ಜೈ ವಂದೆ ಮಾತರಂ ಹುಸೇನ್ ಸಾಬ ಅಮರ ರಹೇ ಎಂಬ ಜಯಘೋಷ ಮುಗಿಲು ಮುಟ್ಟಿತು.
 ಅಲಂಕರಿಸಿದ ಸೇನಾ ವಾಹನದಲ್ಲಿ ಪಾರ್ಥಿವ ಶರೀರವನ್ನು ಇಟ್ಟು ಗ್ರಾಮದ ಹೊರವಲಯದಿಂದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆವರಗೆ ಭವ್ಯ ಮೆರವಣಿಗೆ ನಡೆಯಿತು. ರಸ್ತೆಯ ಎರಡು ಬದಿಯ ಮೇಲೆ ನಿಂತ ಜನರು ಹೂ ಹಾಕಿ ಶ್ರದ್ಧಾಂಜಲಿ ಸಲ್ಲಿಸಿದರು. ಮೃತ ಯೋಧನ ಪಾರ್ಥಿವ ಶರೀರವನ್ನು ಸರಕಾರಿ ಶಾಲೆಯ ಆವರಣದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿತ್ತು.
 ಮುಗಿಲು ಮುಟ್ಟಿದ ಅಕ್ರಂದನ : ವೀರಯೋಧ ಮಗನನ್ನು ಕಳೆದುಕೊಂಡ ತಂದೆ ಅಪ್ಪಾಸಾಬ, ತಾಯಿ ಮಾಸಮ್ಮಾ ಹಾಗೂ ಪತಿಯನ್ನು ಕಳೆದುಕೊಂಡ ಮಡದಿ ಆಶಾಮಾ, ಮೃತ ಯೋಧನ ಒಂದು ವರ್ಷದ ಮಗಳು, ಸಹೋದರ  ಪಾರ್ಥಿವ ಶರೀರದ ಮುಂದೆ ಬಿದ್ದು  ಬಿದ್ದು ಅಳುತ್ತಿರುವ ದೃಶ್ಯ ಮನ ಕಲಕುವಂತಿತ್ತು. ಮೃತ ಹುಸೇನ್ ನ ಬಂಧುಗಳ ರೋಧನ  ಮುಗಿಲು ಮುಟ್ಟಿತು.
ಹುಸೇನ್ ಮಧಬಾವಿ ಮೃತ ದೇಹ ಹೊತ್ತ ಸೇನಾ  ವಾಹನ ಗ್ರಾಮದಲ್ಲಿ ಬರುತ್ತಿದ್ದಂತೆ ಅಪಾರ ಸಂಖ್ಯೆಯಲ್ಲಿ ಸೇರಿದ ಜನರು ಭಾವುಕರಾಗಿ ದರ್ಶನ ಪಡೆದುಕೊಂಡರು. ಅಥಣಿ ತಾಲೂಕಾ ಮಾಜಿ ಸೈನಿಕರ ಸಂಘದ ಸದಸ್ಯರು, ಪಿಡಿಓ ಎಸ್. ಎನ್. ನಿಡೋಣಿ,  ಎ,ಎಸ್,ಐ, ಎಸ್,ಪಿ, ಸವದಿ ಸೇರಿದಂತೆ ಅನೇಕ ಗ್ರಾಮದ ಮುಖಂಡರು ಮಹಿಳೆಯರು ಅಂತಿಮ ಧರ್ಶನ ಪಡೆದರು. ನಂತರ ಇಸ್ಲಾಂ ಧರ್ಮದ  ಸಂಪ್ರದಾಯದಂತೆ ಸಮುದಾಯದ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ಮಾಡಲಾಯಿತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button