LatestPolitics

*ವಿನಯ್‌ ಕುಲಕರ್ಣಿ ವಿರುದ್ಧ ಎಫ್‌ಐಆರ್ ದಾಖಲು*

ಪ್ರಗತಿವಾಹಿನಿ ಸುದ್ದಿ: ತನ್ನ ಮೇಲೆ ಅತ್ಯಾಚಾರ ಎಸಗಿ, ಕಿರುಕುಳ ನೀಡಿದ್ದಾರೆಂದು ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ಧಾರವಾಡದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಬೆಂಗಳೂರಿನ ಸಂಜಯ್‌ ನಗರ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಎಫ್‌ಐಆರ್ ದಾಖಲಾಗಿದೆ.

ಮಹಿಳೆಯ ದೂರಿನ ಆಧಾರದ ಮೇಲೆ ಪೊಲೀಸರು ವಿನಯ್ ಕುಲಕರ್ಣಿ ಅವರನ್ನು ಆರೋಪಿ 1 (A1) ಮತ್ತು ಅವರ ಆಪ್ತ ಸಹಾಯಕ ಅರ್ಜುನ್ ಅನ್ನು ಆರೋಪಿ 2 (A2) ಎಂದು ಹೆಸರಿಸಿ ಎಫ್‌ಐಆರ್ ದಾಖಲಿಸಿದ್ದಾರೆ.

2022ರಲ್ಲಿ ಶಾಸಕರನ್ನು ಭೇಟಿ ಮಾಡಿದ್ದೆ. ಬಳಿಕ ರೈತರೊಬ್ಬರಿಂದ ನನ್ನ ಫೋನ್ ನಂಬರ್ ಪಡೆದಿದ್ದ ಶಾಸಕರು, ರಾತ್ರಿ ವೇಳೆಯೂ ನನಗೆ ಕರೆ ಮಾಡಲು ಪ್ರಾರಂಭಿಸಿದ್ದರು. ಕೆಲವು ತಿಂಗಳ ನಂತರ, ಬೆತ್ತಲೆಯಾಗಿದ್ದಾಗ ವೀಡಿಯೊ ಕರೆ ಮಾಡುವಂತೆ, ಹೆಬ್ಬಾಳದಲ್ಲಿರುವ ತಮ್ಮ ಮನೆಗೆ ಬರುವಂತೆ ಒತ್ತಾಯಿಸಿದ್ದರು. ಇದಕ್ಕೆ ನಿರಾಕರಿಸಿದಾಗ ಶಾಸಕರ ಮನೆಗೆ ಹೋಗದಿದ್ದಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ರೌಡಿಗಳ ತಂಡವೊಂದು ಬೆದರಿಕೆ ಹಾಕಿತು.

ಏಪ್ರಿಲ್‌ನಲ್ಲಿ, ಶಾಸಕರು ನನ್ನನ್ನು ಬೆಳಗಾವಿಗೆ ಕರೆದರು, ಅಲ್ಲಿ ನನ್ನನ್ನು ತಬ್ಬಿಕೊಂಡು ಲೈಂಗಿಕ ಕಿರುಕುಳ ನೀಡಲು ಪ್ರಯತ್ನಿಸಿದರು. ಆದರೆ, ಕೆಲವರು ಶಾಸಕರನ್ನು ಭೇಟಿಯಾಗಲು ಬಂದಾಗ ನಾನು ತಪ್ಪಿಸಿಕೊಂಡಿದ್ದೆ.

Home add -Advt

ಆಗಸ್ಟ್ 24 ರಂದು ಕೆಲಸದ ನಿಮಿತ್ತ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭೇಟಿಗೆ ಬೆಂಗಳೂರಿಗೆ ಬಂದಿದ್ದೆ. ಆಗ ಕರೆ ಮಾಡಿ ಹೆಬ್ಬಾಳದ ಮನೆಗೆ ಬರುವಂತೆ ಸೂಚಿಸಿದ್ದರು. ಕಾರಿನಲ್ಲಿ ಒಬ್ಬರೇ ಬಂದು ವಿಮಾನ ನಿಲ್ದಾಣ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕಾರಿನಲ್ಲಿ ಅತ್ಯಾಚಾರ ನಡೆಸಿ ರಾಜಕೀಯದಲ್ಲಿ ದೊಡ್ಡಮಟ್ಟದಲ್ಲಿ ಬೆಳೆಸುತ್ತೇನೆ ಎಂದು ಆಮಿಷವೊಡ್ಡಿದ್ದರು ಎಂದು ಎಫ್ ಐಆರ್ ನಲ್ಲಿ ಉಲ್ಲೇಖಿಸಲಾಗಿದೆ. 

ದೂರಿನ ಬೆನ್ನಲ್ಲೇ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 506, 504, 201, 366, 376, 323, 354 ಮತ್ತು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button