ಬೆಳಗಾವಿ ಜಿಲ್ಲೆಯಲ್ಲಿ 5ಕ್ಕೇರಲಿದೆಯೇ ಸಚಿವರ ಸಂಖ್ಯೆ?
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಭಾನುವಾರ ಮಧ್ಯರಾತ್ರಿ ಹೊತ್ತಿಗೆ ಸಚಿವಸಂಪುಟ ವಿಸ್ತರಣೆಯ ಪಕ್ಕಾ ಸುದ್ದಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೊರಹಾಕಿದ್ದಾರೆ. ( ಜ.13ರಂದು 7 ನೂತನ ಸಚಿವರ ಪ್ರಮಾಣ ವಚನ – ಯಡಿಯೂರಪ್ಪ ಹೇಳಿಕೆ)
ಬುಧವಾರ ಸಂಜೆ ಅಥವಾ ಗುರುವಾರ 7 ಜನರನ್ನು ಸಚಿವಸಂಪುಟಕ್ಕೆ ಸೇರಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಇದರಿಂದಾಗಿ ಬಹುದಿನದಿಂದ ಕಾಯುತ್ತಿದ್ದವರಿಗೆ ಆಸೆ ಚಿಗುರಿದೆ.
ಬಿಜೆಪಿ ಸರಕಾರ ಅಸ್ಥಿತ್ವಕ್ಕ ಬರುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಎಂಟಿಬಿ ನಾಗರಾಜ, ಮುನಿರತ್ನ ಮತ್ತು ಆರ್.ಶಂಕರ ಸಂಪುಟ ಸೇರ್ಪಡೆ ಖಚಿತ. ಇವರ ಜೊತೆಗೆ ಉಮೇಶ ಕತ್ತಿ ಮತ್ತು ಯೋಗೇಶ್ವರ ಅವರಿಗೂ ಸಚಿವಸ್ಥಾನ ನೀಡುವ ಭರವಸೆಯನ್ನು ಯಡಿಯೂರಪ್ಪ ಈಗಾಗಲೆ ನೀಡಿದ್ದಾರೆ. ಅಲ್ಲಿಗೆ ಐದು ಸ್ಥಾನ ಭರ್ತಿಯಾಗಲಿದೆ.
ಇನ್ನುಳಿದ 2 ಸ್ಥಾನ ಯಾರಿಗೆ ಎನ್ನುವ ಕುತೂಹಲದ ಜೊತೆಗೆ ಸುಮಾರು 15ಕ್ಕೂ ಹೆಚ್ಚು ಆಕಾಂಕ್ಷಿಗಳ ಹೆಸರು ಕೇಳಿಬರುತ್ತಿದೆ. ಅರವಿಂದ ಲಿಂಬಾವಳಿ, ಹಾಲಪ್ಪ ಆಚಾರ್ಯ, ಕೆ.ಜಿ.ಬೋಪಯ್ಯ, ಎಸ್.ಎ.ರಾಮದಾಸ್, ಅಂಗಾರ, ಮುರುಗೇಶ ನಿರಾಣಿ, ಸುನೀಲ್ ಕುಮಾರ, ರೇಣುಕಾಚಾರ್ಯ ಮೊದಲಾದವರ ಹೆಸರು ಮುಂಚೂಣಿಯಲ್ಲಿದೆ.
ಈ ಬಾರಿ ಸಚಿವಸಂಪುಟ ವಿಸ್ತರಣೆಯೋ, ಪುನಾರಚನೆಯೋ ಎನ್ನುವುದನ್ನೂ ಇನ್ನೂ ಸಿಎಂ ಸ್ಪಷ್ಟಪಡಿಸಿಲ್ಲ. ಒಂದಿಬ್ಬರು ಸಚಿವರನ್ನು ಕೈಬಿಡುವ ಪ್ರಸ್ತಾಪವನ್ನು ಯಡಿಯೂರಪ್ಪ ಹೈಕಮಾಂಡ್ ಮುಂದಿಟ್ಟಿದ್ದರು. ಆದರೆ ಹೈಕಮಾಂಡ್ ಇದಕ್ಕೆ ಒಪ್ಪಿದೆಯೇ ಎನ್ನುವುದು ಖಚಿತವಾಗಿಲ್ಲ.
ಬೆಳಗಾವಿ ಜಿಲ್ಲೆಯಲ್ಲಿ ಈಗಾಗಲೆ ನಾಲ್ವರು ಸಚಿವರಿದ್ದಾರೆ. ಉಮೇಶ ಕತ್ತಿ ಸೇರ್ಪಡೆಯಾದರೆ ಜಿಲ್ಲೆಯ ಸಚಿವರ ಸಂಖ್ಯೆ 5ಕ್ಕೇರಲಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಕರ್ನಾಟಕ ಉಸ್ತುವಾರಿ ಅರುಣ ಸಿಂಗ್ ಅವರು ಸಚಿವಸಂಪುಟ ವಿಸ್ತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಅವರ ಸಮಯಾವಕಾಶ ನೋಡಿಕೊಂಡು ದಿನ ಮತ್ತು ಸಮಯ ನಿಗದಿಮಾಡುವುದಾಗಿ ಯಡಿಯೂರಪ್ಪ ತಿಳಿಸಿದ್ದಾರೆ.
ಜ.13ರಂದು 7 ನೂತನ ಸಚಿವರ ಪ್ರಮಾಣ ವಚನ – ಯಡಿಯೂರಪ್ಪ ಹೇಳಿಕೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ