ನೆರೆ ಬಾಧಿತ ಪ್ರದೇಶಗಳಲ್ಲಿ ಆದ್ಯತೆ ಮೇರೆಗೆ ಕ್ರಮ ಕೈಗೊಳ್ಳಿ; ಅಧಿಕಾರಿಗಳಿಗೆ ಶಾಸಕಿ ಅಂಜಲಿ ನಿಂಬಾಳ್ಕರ ಸೂಚನೆ
ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಅವ್ಯಾಹತ ಮಳೆಗೆ ತಾಲೂಕಿನ ಹಲವು ಗ್ರಾಮಗಳು ನೆರೆಯಿಂದ ಬಾಧಿತವಾಗಿದ್ದು ಹೆಚ್ಚು ಅಪಾಯವಿರುವ ಪ್ರದೇಶಗಳಲ್ಲಿ ಆದ್ಯತೆ ಮೇರೆಗೆ ಕ್ರಮ ವಹಿಸಲು ಶಾಸಕಿ ಅಂಜಲಿ ನಿಂಬಾಳ್ಕರ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನಲ್ಲಿ ನೆರೆ ನಿರ್ವಹಣೆ ಕುರಿತು ಸೋಮವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಖಾನಾಪುರ ತಾಲೂಕು ಅತಿ ಹೆಚ್ಚು ಮಳೆಯಾಗುವ ಪ್ರದೇಶವಾದ್ದರಿಂದ ಈ ಭಾಗದ ನದಿಗಳು, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಅನೇಕ ಗ್ರಾಮಗಳು ಜಲಾವೃತವಾಗಿದ್ದು ಸಂಪರ್ಕ ಕಳೆದುಕೊಂಡಿವೆ. ಇಂಥ ಪ್ರದೇಶಗಳಲ್ಲಿ ಜನ, ಜಾನುವಾರುಗಳಿಗೆ, ಆಸ್ತಿಪಾಸ್ತಿಗಳಿಗೆ ಹಾನಿಯಾಗದಂತೆ ಆದ್ಯತೆ ಮೇರೆಗೆ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚಿಸಿದರು.
ಅನೇಕ ಕಡೆ ಮನೆಗಳು ಕುಸಿತಕ್ಕೊಳಗಾಗಿದ್ದು ಅಂಥವರಿಗೆ ಸೂಕ್ತ ಪರಿಹಾರಕ್ಕೆ ಹಾಗೂ ತುರ್ತು ಆಶ್ರಯಕ್ಕೆ ಕ್ರಮ ವಹಿಸಬೇಕು ಎಂದು ಸೂಚಿಸಿದರು.
ತಾಲೂಕಿನಲ್ಲಿ ಮಳೆಗೆ ಸಂಭವಿಸಿದ ಶಾಲೆಗಳ ಸರಣಿ ಕುಸಿತದ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ವರದಿ ನೀಡುವಂತೆ ತಿಳಿಸಿದರು.
ಕಳೆದ ಬಾರಿ ಹಲವು ಪ್ರದೇಶಗಳಲ್ಲಿ ನೆರೆಯಿಂದ ನಷ್ಟಕ್ಕೊಳಗಾದ ಹಲವರಿಗೆ ಇನ್ನೂ ಪರಿಹಾರ ಸಿಗದಿರುವ ಬಗ್ಗೆ ಮಾಹಿತಿ ಪಡೆದರು. ಅನೇಕ ಜನ ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡದಿರುವುದರಿಂದ ವಿಳಂಬವಾಗಿದ್ದು ಈ ಬಗ್ಗೆ ಕ್ರಮ ವಹಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಸಭೆಯಲ್ಲಿ ಖಾನಾಪುರ ತಹಸೀಲ್ದಾರ್ ಹಾಗೂ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಯುವತಿಯಿಂದ ಯುವಕನಿಗೆ ಬ್ಲ್ಯಾಕ್ ಮೇಲ್; 5 ಲಕ್ಷ ರೂಪಾಯಿ ದೋಚಿದ ಗ್ಯಾಂಗ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ