Kannada NewsLatest

ಮೂರು ದಿನಗಳ ಆಕರ್ಷಕ ಫಲ-ಪುಷ್ಪ ಪ್ರದರ್ಶನಕ್ಕೆ ಚಾಲನೆ

ಪ್ರಗತಿವಾಹಿನಿ ಸುದ್ದಿ, ಶಿರಸಿ – ಉತ್ತರ ಕನ್ನಡ ಜಿಲ್ಲೆಯ ಶಿರಸಿ ತೋಟಗಾರಿಕಾ ಉಪನಿರ್ದೇಶಕರ ಕಚೇರಿಯ ಆವರಣದಲ್ಲಿ ಮೂರು ದಿನಗಳ ಫಲಪುಷ್ಪ ಪ್ರದರ್ಶನ- ಕಿಸಾನ್ ಮೇಳವನ್ನು ವಿಧಾನ ಸಭಾಧ್ಯಕ್ಷ  ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಉತ್ತರಕನ್ನಡ ಜಿಲ್ಲೆ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವರಾದ  ಶಶಿಕಲಾ ಜೊಲ್ಲೆ ಉದ್ಘಾಟಿಸಿದರು.

ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ, ಆತ್ಮ ಯೋಜನೆ, ತೋಟಗಾರಿಕಾ ಮಹಾವಿದ್ಯಾಲಯ, ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ಸಂಬಂಧಿತ ಇಲಾಖೆಗಳು ಹಾಗೂ ಜಿಲ್ಲಾಪಂಚಾಯಿತಿ ಸಹಯೋಗದಲ್ಲಿ ಪ್ರದರ್ಶನ ಸಂಘಟಿಸಲಾಗಿದೆ.

ಸರ್ವಧರ್ಮ ಸಮನ್ವಯತೆ ಸಾರುವ ಕಮಲ್‌ ಮಹಲ್‌ ಮಾದರಿ, ಹಾಗೇ ಅಡಕೆ, ಅನಾನಸ್‌ ಮಂಟಪ, ಹೂವಿನಲ್ಲಿ ತಯಾರಿಸಲಾಗಿದ್ದ ಜಿಲ್ಲೆಯಲ್ಲಿರುವ ಪಕ್ಷಿ ಸಂಕುಲಗಳು, ಚಂದ್ರಯಾನ-3 ರಾಕೆಟ್‌, ವರ್ಟಿಕಲ್‌ ಗಾರ್ಡನ್‌ ಮಾದರಿಗಳು, ತರಕಾರಿ ಕೆತ್ತನೆ, ಮಾದರಿ ತರಕಾರಿ ಪ್ರಾತ್ಯಕ್ಷಿಕೆಗಳು, ವಿವಿಧ ಉದ್ಯಾನವನ ಮಾದರಿ, ವಿವಿಧ ಜಾತಿ ಹೂವುಗಳ ಜೋಡಣೆ ವಿಶೇಷತೆ ಫಲಪುಷ್ಪ ಪ್ರದರ್ಶನ ಎಲ್ಲವೂ ಕಣ್ಮನ ತಣಿಸಿತು ಎಂದು ಶಶಿಕಲಾ ಜೊಲ್ಲೆ ಹೇಳಿದರು.

ಪ್ರದರ್ಶನ ಪ್ರೇರಣೆ

ಕಳೆದ ಹಲವು ವರ್ಷಗಳಿಂದ ನಡೆಸುತ್ತಾ ಬಂದಿರುವ ಫಲಪುಷ್ಪ  ಪ್ರದರ್ಶನ ವಿವಿಧ ರೀತಿಯ ಪ್ರೇರಣೆಗೆ ಕಾರಣವಾಗಿದ್ದು, ಕೃಷಿಕರು ತಾಂತ್ರಿಕತೆ ಅಳವಡಿಸಿಕೊಳ್ಳುವುದಕ್ಕೆ ಪೂರಕವಾಗಿದೆ.

 

 

ಸ್ಥಳೀಯವಾಗಿಯೇ ಗುಲಾಬಿ, ಸೇವಂತಿಗೆ ಬೆಳೆಯುವುದಕ್ಕೆ ಉತ್ತೇಜನ ದೊರೆತಂತಾಗಿದೆ. ಕೃಷಿ ಉಪಉತ್ಪನ್ನ, ಸಂಸ್ಕರಣೆಗೆ ಉತ್ಸಾಹ ಹೆಚ್ಚುವಂತಾಗಿದೆ. ಮನೆಯಂಗಳಲ್ಲಿ ತರಕಾರಿ ಬೆಳೆಯುವುದಕ್ಕೆ, ವರ್ಟಿಕಲ್‌ ಮಾದರಿಯಲ್ಲಿ ಹೂಗಿಡ ಬೆಳೆಸುವುದಕ್ಕೆ ಸ್ಪೂರ್ತಿ ಪಡೆದು ಕೊಳ್ಳಬಹುದಾಗಿದೆ ಎಂದು ಜೊಲ್ಲೆ ಹೇಳಿದರು.
ಸ್ಥಳೀಯ ಹಲವಾರು ಗಣ್ಯರು, ಜನಪ್ರತಿನಿಧಿಗಳು, ಅಧಿಕಾರಿಗಳು ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button