*ಫುಟ್ ಪಾತ್ ತೆರವಿಗೆ ಹೋದ ಅಧಿಕಾರಿಗಳ ಮೇಲೆ ಸ್ಥಳೀಯ ಮುಖಂಡರಿಂದ ಹಲ್ಲೆ; ಪೆಪ್ಪರ್ ಸ್ಪ್ರೇ*

ಪ್ರಗತಿವಾಹಿನಿ ಸುದ್ದಿ: ಫುಟ್ ಪಾತ್ ತೆರವು ಕಾರ್ಯಾಚರಣೆಗೆ ಹೋದ ಜಿಬಿಎ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಮೇಲೆ ಸ್ಥಳೀಯ ಮುಖಂಡರು ಪೆಪ್ಪರ್ ಸ್ಫ್ರೇ ಮಾಡಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಶಿವಾಜಿನಗರದಲ್ಲಿ ನಡೆದಿದೆ.
ಬೆಂಗಳೂರಿನ ಶಿವಾಜಿನಗರದಲ್ಲಿ ಜಿಬಿಎ ವತಿಯಿಂದ ನಡೆದ ಫುಟ್ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಸ್ಥಳೀಯ ಸಂಘಟನೆಗಳ ಸದಸ್ಯರು ಪಾಲಿಕೆ ಸಿಬ್ಬಂದಿ ಮತ್ತು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು. ಜೆಸಿಬಿ ಬಳಸಿ ಫುಟ್ಪಾತ್ ಅತಿಕ್ರಮಣಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಸಿಬ್ಬಂದಿ ಮುಂದಾದಾಗ, ಸ್ಥಳೀಯ ಸಂಘಟನೆಗಳ ಕಾರ್ಯಕರ್ತರು ಅಡ್ಡಿಪಡಿಸಿದರು.
ಈ ವೇಳೆ, ಪಾಲಿಕೆಯ ಇಂಜಿನಿಯರ್‌ಗಳು ಮತ್ತು ಜೆಸಿಬಿ ಚಾಲಕನ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪಗಳು ಕೇಳಿಬಂದಿವೆ. ಒಬ್ಬ ಪಾಲಿಕೆ ಸಿಬ್ಬಂದಿಯ ಮೇಲೆ ಹೆಲ್ಮೆಟ್‌ನಿಂದ ಹಲ್ಲೆ ಮಾಡಲು ಪ್ರಯತ್ನಿಸಲಾಯಿತು ಎಂದು ಪಾಲಿಕೆ ಸಿಬ್ಬಂದಿ ತಿಳಿಸಿದ್ದಾರೆ. ಅಲ್ಲದೆ, ಅಧಿಕಾರಿಗಳ ಮೇಲೆ ಪೆಪ್ಪರ್ ಸ್ಪ್ರೇ ಮಾಡಿ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




