
ಪ್ರಗತಿವಾಹಿನಿ ಸುದ್ದಿ; ಹರಿಹರ: ಹಿಂದುಳಿದ ವರ್ಗದವರ ಹಿತ ಕಾಪಾಡಲು ಈಗಿರುವ ಮೀಸಲಾತಿ ಪ್ರಮಾಣವನ್ನು ಶೇ.50 ಕ್ಕಿಂತ ಹೆಚ್ಚು ಮಾಡುವುದು ಅಗತ್ಯ. ಹೀಗಾಗಿ ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದು, ಈ ಸಂಬಂಧ ಸುಪ್ರೀಂಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಶಾಖಾಮಠ ಬೆಳ್ಳೊಡಿಯಲ್ಲಿ ನಿರ್ಮಿಸಲಾಗಿರುವ ನೂತನ ವಿದ್ಯಾರ್ಥಿನಿಲಯ, ಸಮುದಾಯ ಭವನ ಮತ್ತು ಮುಖ್ಯ ಮಹಾದ್ವಾರ ಉದ್ಘಾಟನೆ ಹಾಗೂ ಶಾಖಾಮಠದ 5 ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಹಾಲುಮತ ಸಮುದಾಯವನ್ನು ಎಸ್ಟಿಗೆ ಸೇರಿಸಬೇಕಾದರೆ ಮೀಸಲಾತಿ ಪ್ರಮಾಣವನ್ನು ಶೇಕಡಾ 7.5 ಕ್ಕೆ ಹೆಚ್ಚಿಸಬೇಕು. ಅದೇ ರೀತಿ ಬೇರೆ ಸಮಾಜದವರು ಮೀಸಲಾತಿಗೆ ಅರ್ಜಿ ಸಲ್ಲಿಸಿದ್ದಾರೆ. ಹಿಂದುಳಿದ ವರ್ಗಗಳ ಎಲ್ಲ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸಬೇಕಾದರೆ ಈಗಿರುವ ಶೇಕಡ 50 ದಷ್ಟು ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೀಸಲಾತಿಯನ್ನು ಹೆಚ್ಚಿಸಲು ತೀರ್ಮಾನಿಸಿದೆ ಎಂದು ಮೊದಲಬಾರಿಗೆ ಅಧಿಕೃತವಾಗಿ ಪ್ರಕಟಿಸಿದರು.
ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ. ಈ ಕುರಿತು ಸುಪ್ರೀಂಕೋರ್ಟಿಗೆ ಪ್ರಮಾಣಪತ್ರವನ್ನು ಸಲ್ಲಿಸಲಾಗಿದೆ. ಸುಪ್ರೀಂಕೋರ್ಟ್ ನಿಂದ ಒಳ್ಳೆಯ ತೀರ್ಮಾನದ ನಿರೀಕ್ಷೆ ಯಲ್ಲಿ ಇದ್ದೇವೆ ಎಂದು ಅವರು ತಿಳಿಸಿದರು.
ಮೀಸಲಾತಿ ಹೆಚ್ಚಿಸುವುದು ನಿಜಕ್ಕೂ ಸವಾಲು. ಮೀಸಲಾತಿ ಎಲ್ಲ ಸಮುದಾಯಗಳಿಗೆ ಕಾನೂನಾತ್ಮಕವಾಗಿ, ಸಂವಿಧಾನದ ಚೌಕಟ್ಟಿನಲ್ಲಿ, ಸೈದ್ಧಾಂತಿಕವಾಗಿ ನಿಗದಿ ಆಗಬೇಕು. ಮುಂದಿನ ದಿನಗಳಲ್ಲಿ ಯಾರೂ ಕೂಡ ಈ ನಿರ್ಧಾರವನ್ನು ಪ್ರಶ್ನೆ ಮಾಡಬಾರದೆಂಬ ಸದುದ್ದೇಶದಿಂದ ನಿವೃತ್ತ ನ್ಯಾಯಾಧೀಶ ರ ನೇತೃತ್ವದಲ್ಲಿ ತಜ್ಞ ರ ಸಮೀತಿ ರಚಿಸಲಾಗಿದೆ. ಕುರುಬ ಸಮುದಾಯವನ್ನು ಎಸ್ ಟಿಗೆ ಸೇರಿಸಬೇಕೆಂಬ ಬೇಡಿಕೆ ಇದೆ. ಈ ಸಂಬಂಧ ಕುಲಶಾಸ್ತ್ರ ಅಧ್ಯಯನ ನಡೆಯುತ್ತದೆ. ಪಂಚಮಸಾಲಿ ಸಮಾಜದವರು ೨ಎ ಬೇಡಿಕೆ ಇಟ್ಟಿದ್ದಾರೆ. ಅದೇ ರೀತಿ ಹಲವು ಸಣ್ಣ ಸಮುದಾಯದ ಜನ ಮೀಸಲಾತಿ ಬೇಡಿಕೆ ಇಟ್ಟಿದ್ದಾರೆ. ಇವರ ಬೇಡಿಕೆ ಈಡೇರಿಸಲು ಸರ್ಕಾರ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕೆಂಬ ನಿರ್ಧಾರ ಮಾಡಿದೆ ಎಂದು ಬೊಮ್ಮಾಯಿ ತಿಳಿಸಿದರು.
ಕನಕಗುರು ಪೀಠಕ್ಕೆ ಯಡಿಯೂರಪ್ಪ ನೇತೃತ್ವದ ಸರ್ಕಾರ ಎಲ್ಲ ರೀತಿಯ ನೆರವು ನೀಡಿದೆ. ಮೈಲಾರ ಮಠದ ಅಭಿವೃದ್ಧಿ ಗಾಗಿ 10 ಕೋಟಿ ಮಂಜೂರು ಮಾಡಲಾಗಿದೆ. ಆ ಪೈಕಿ 2.5 ಕೋಟಿ ಹಣವನ್ನು ಯಡಿಯೂರಪ್ಪ ಅವರು ಬಿಡುಗಡೆ ಮಾಡಿದ್ದಾರೆ. ಹೀಗಾಗಿ ಸರ್ಕಾರ ಮತ್ತು ಯಡಿಯೂರಪ್ಪ ಅವರ ಪ್ರೀತಿ ಸಮಾಜದ ಮೇಲಿದೆ. ಈ ಸಮಾಜದವರ ಪ್ರೀತಿ ಸರ್ಕಾರ ಮತ್ತು ಯಡಿಯೂರಪ್ಪ ಹಾಗೂ ಇತರೆ ನಾಯಕರ ಮೇಲಿದೆ ಎಂದು ಬೊಮ್ಮಾಯಿ ಹೇಳಿದರು.
ಕನಕದಾಸರಂತವರು ಅಪರೂಪಕ್ಕೆ, ಯುಗಕ್ಕೆ ಒಮ್ಮೆ ಹುಟ್ಟುತ್ತಾರೆ. ಅಂಥ ದಾರ್ಶನಿಕರು ಹುಟ್ಟಿದ ಊರು ಬಾಡ ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಇರುವುದು ನನಗೆ ಹೆಮ್ಮೆಯ ವಿಷಯ ಎಂದುರು. ಕನಕದಾಸರು ದಾಯಾದಿಗಳಿಂದಲೇ ಆಕ್ರಮಣ ಎದುರಿಸಿದರು. ಅದರಲ್ಲಿ ಅವರು ಸೋತರು. ಆ ಸೋಲಿನಲ್ಲಿ ನಾನು ಹಲವಾರು ಗೆಲುವು ಕಂಡೆ ಎಂದು ಕನಕದಾಸರೇ ಹೇಳುತ್ತಾರೆ. ಆ ಸೋಲಿನಲ್ಲಿ ನನ್ನನ್ನೇ ನಾನು ಗೆದ್ದುಕೊಂಡೆ ಎಂದು ಕನಕದಾಸರು ಹೇಳಿಕೊಂಡಿದ್ದಾರೆ ಎಂದು ಸ್ಮರಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಡಳಿತ ವನ್ನು ಸೂಕ್ಷ್ಮ ವಾಗಿ ಗಮನಿಸಿದರೆ ಅವರಿಗೆ ಯಾವುದೇ ಜಾತಿ ಧರ್ಮ ಇಲ್ಲ. ಕನಕದಾಸರ ರೀತಿ ಎಲ್ಲಾ ಧರ್ಮಗಳಿಗೆ ಒಳಿತು ಮಾಡಬೇಕೆಂಬ ಮನೋಧರ್ಮ ಯಡಿಯೂರಪ್ಪ ಅವರದು. ಹೀಗಾಗಿ ಸರ್ವಧರ್ಮ ಗಳಿಗೆ ಅವರು ಸಕಲ ನೆರವು ನೀಡಿದ್ದಾರೆ ಎಂದು ಬೊಮ್ಮಾಯಿ ಮೆಚ್ವುಗೆ ವ್ಯಕ್ತಪಡಿಸಿದರು.
ನಾಲಾಯಕ್ ಹೇಳಿಕೆಗೆ ಯತ್ನಾಳ್ ತಿರುಗೇಟು