Kannada NewsKarnataka NewsLatest

ಮಾಜಿ ಶಾಸಕ ಅರವಿಂದ ಪಾಟೀಲ ಬಿಜೆಪಿಯತ್ತ ಮತ್ತೊಂದು ಹೆಜ್ಜೆ

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಕಳೆದ ಕೆಲ ತಿಂಗಳುಗಳಿಂದ ಭಾರತೀಯ ಜನತಾ ಪಕ್ಷದ ಮುಖಂಡರ ಜೊತೆ ಗುರುತಿಸಿಕೊಂಡಿರುವ ಖಾನಾಪುರದ ಮಾಜಿ ಶಾಸಕ ಅರವಿಂದ ಪಾಟೀಲ ಶನಿವಾರ ಪಟ್ಟಣದ ಹೊರವಲಯದಲ್ಲಿ ತಮ್ಮ ಬೆಂಬಲಿಗರ ಮತ್ತು ಕಾರ್ಯಕರ್ತರ ಸಭೆಯನ್ನು ಏರ್ಪಡಿಸಿ ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಿದರು.

ಕಳೆದ ೨ ದಶಕಗಳಿಂದ ಎಂಇಎಸ್ ಮುಖಂಡರಾಗಿ ತಾಲೂಕಿನಲ್ಲಿ ಗುರುತಿಸಿಕೊಂಡಿದ್ದ ಅವರು ಎಂಇಎಸ್ ಕಾರ್ಯಕರ್ತರ ಬೆಂಬಲದಿಂದಾಗಿ ೨೦೧೩ರಲ್ಲಿ ಬಹುಮತದೊಂದಿಗೆ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು. ೨೦೧೮ರ ಚುನಾವಣೆಯಲ್ಲಿ ಎಂಇಎಸ್‌ನಿಂದ ಟಿಕೆಟ್ ಸಿಗದ ಕಾರಣ ಎಂಇಎಸ್‌ನ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲನ್ನು ಅನುಭವಿಸಿದ್ದರು.

ಚುನಾವಣೆಯ ಬಳಿಕ ತಾಲೂಕಿನ ಮೂಲ ಎಂಇಎಸ್ ಸಂಘಟನೆಯೊಂದಿಗೆ ಅಂತರ ಕಾಯ್ದುಕೊಂಡಿದ್ದ ಅವರು ತಮ್ಮ ಕೆಲ ಬೆಂಬಲಿಗರೊಂದಿಗೆ ಪರ್ಯಾಯ ಎಂಇಎಸ್ ಸಂಘಟನೆಯನ್ನು ಸಂಘಟಿಸಿದ್ದರು. ಇತ್ತೀಚೆಗೆ ನಡೆದ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಜಿಲ್ಲೆಯ ಬಿಜೆಪಿ ಮುಖಂಡರ ಬೆಂಬಲದಿಂದಾಗಿ ಜಯಗಳಿಸಿದ್ದರು.

ನಂತರದಲ್ಲಿ ಅವರು ಬಿಜೆಪಿಯತ್ತ ಮುಖ ಮಾಡಿರುವುದು ಸ್ಪಷ್ಟವಾಗಿತ್ತು. ಮಾಜಿ ಡಿಸಿಎಂ ಲಕ್ಷ್ಮಣ ಸವದಿಯವರ ಕಟ್ಟಾ ಬೆಂಬಲಿಗರಾಗಿರುವ ಅವರು  ಶನಿವಾರ ಅಭಿಮಾನಿಗಳ ಸಭೆ ನಡೆಸಿದರು.

ಸಭೆ ಉದ್ದೇಶಿಸಿ ಮಾತನಾಡಿದ ನಂದಗಡ ಗ್ರಾಪಂ ಸದಸ್ಯ ನಾಗೇಂದ್ರ ಪಾಟೀಲ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ ಪಾಟೀಲ ಅವರಿಗೆ ನಂದಗಡದಿಂದ ನಿರೀಕ್ಷಿತ ಮಟ್ಟದಲ್ಲಿ ಜನಬೆಂಬಲ ಸಿಗಲಿಲ್ಲ. ಈ ಸಲ ಹಾಗಾಗದಂತೆ ಗಮನಹರಿಸಲಾಗುವುದು ಎಂದರು.

ನಂದಗಡ ಗ್ರಾಪಂ ಅಧ್ಯಕ್ಷೆ ವಿದ್ಯಾ ಮಾದಾರ ಮಾತನಾಡಿ, ಸಧ್ಯ ಅರವಿಂದ ಅವರ ಬೆಂಬಲಕ್ಕೆ ಇಡೀ ಗ್ರಾಪಂ ಸದಸ್ಯರ ತಂಡ ನಿಂತಿದ್ದು, ಮುಂದಿನ ದಿನಗಳಲ್ಲಿ ಅರವಿಂದ ಅವರ ರಾಜಕೀಯ ಭವಿಷ್ಯದ ನಿರ್ಧಾರಕ್ಕೆ ತಾವು ಸೇರಿದಂತೆ ಇಡೀ ನಂದಗಡ ಗ್ರಾಪಂ ಸದಸ್ಯರು ಸಂಪೂರ್ಣ ಬೆಂಬಲ ವ್ಯಕ್ತಪಡಿಸುವುದಾಗಿ ತಿಳಿಸಿದರು.
ಸಭೆ ಉದ್ದೇಶಿಸಿ ಮಹಾಬಳೇಶ್ವರ ಪಾಟೀಲ, ಕೃಷ್ಣಾ ಪಾಟೀಲ, ಬಾಬುರಾವ್ ಭರಣಕರ, ಪುಂಡಲೀಕ ಪಾಟೀಲ, ರಾಮಾ ಖಾಂಬಲೆ, ಶಂಕರ ಪಾಟೀಲ, ಜಿ.ಎಲ್ ಹೆಬ್ಬಾಳಕರ, ಯಲ್ಲಪ್ಪ ಮುತಗೇಕರ, ಅರ್ಜುನ ಕಾಂಬಳೆ ಸೇರಿದಂತೆ ತಾಲೂಕಿನ ವಿವಿಧ ಭಾಗಗಳ ಗಣ್ಯರು ಮಾತನಾಡಿ ಅರವಿಂದ ಅವರ ನಿರ್ಧಾರಕ್ಕೆ ಬೆಂಬಲ ಸೂಚಿಸುವುದಾಗಿ ಘೋಷಿಸಿದರು.
ಬಳಿಕ ಮಾತನಾಡಿದ ಅರವಿಂದ ಪಾಟೀಲ, ಓರ್ವ ಸಾಮಾನ್ಯ ನಾಗರಿಕರಾದ ತಮ್ಮನ್ನು ಕ್ಷೇತ್ರದ ಜನರು ೩ ಬಾರಿ ಡಿಸಿಸಿ ಬ್ಯಾಂಕ್ ಮತ್ತು ಒಂದು ಬಾರಿ ವಿಧಾನಸಭೆ ಚುನಾವಣೆಯಲ್ಲಿ ನಿಲ್ಲಿಸಿ ಗೆಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲೂ ತಾವು ಸಕ್ರೀಯ ರಾಜಕಾರಣದಲ್ಲಿ ಮುಂದುವರೆಯಲಿದ್ದು, ಕ್ಷೇತ್ರದ ಜನಾಭಿಪ್ರಾಯ ಸಂಗ್ರಹಿಸಿ ತಮ್ಮ ರಾಜಕೀಯ ಭವಿಷ್ಯವನ್ನು ನಿರ್ಧರಿಸುವುದಾಗಿ ಹೇಳಿದರು.
ಇಲ್ಲಿಯವರೆಗೆ ಮಹಾರಾಷ್ಟ್ರ ಏಕೀಕರಣ ಸಮಿತಿಯ ಸಕ್ರೀಯ ಕಾರ್ಯಕರ್ತರಾಗಿ, ಜನಪ್ರತಿನಿಧಿಯಾಗಿ ಹಾಗೂ ಮುಖಂಡರಾಗಿ ತಾಲೂಕಿನಲ್ಲಿ ರಾಜಕಾರಣ ನಡೆಸುತ್ತ ಬಂದಿದ್ದು, ಈಗ ಬದಲಾದ ರಾಜಕೀಯ ಸನ್ನಿವೇಶದಲ್ಲಿ ತಾವು ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಚಿಂತನೆಯನ್ನು ನಡೆಸುವ ಅಗತ್ಯವಿದೆ. ಹೀಗಾಗಿ ಕ್ಷೇತ್ರದ ತಮ್ಮ ಬೆಂಬಲಿಗರು ಹಾಗೂ ಅನುಯಾಯಿಗಳು ಹಿಂದಿನಂತೆ ಈಗಲೂ ತಮ್ಮ ಬೆಂಬಲಕ್ಕೆ ನಿಲ್ಲಬೇಕು ಮತ್ತು ತಮ್ಮ ರಾಜಕೀಯ ಭವಿಷ್ಯದ ಕುರಿತು ತಾವು ತೆಗೆದುಕೊಳ್ಳುವ ನಿರ್ಣಯಕ್ಕೆ ಸಹಕರಿಸಬೇಕು ಎಂದು ಅವರು ಕರೆ ನೀಡಿದರು.
ಸಭೆಯಲ್ಲಿ ಉದ್ಯಮಿ ಜ್ಯೋತಿಬಾ ಭರಮಪ್ಪನವರ, ಆನಂದ ವಾಜ್ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ಅರವಿಂದ ಪಾಟೀಲ ಬೆಂಬಲಿಗರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

100 ಕ್ಷೇತ್ರಗಳಿಗೆ ಬಿಜೆಪಿ ಹೊಸ ಮುಖ: ಯಾರಿಗೆ ತಪ್ಪಲಿದೆ ಈ ಬಾರಿ ಟಿಕೆಟ್?

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button