*“ಜೂನ್ 5, ವಿಶ್ವ ಪರಿಸರ ದಿನಾಚರಣೆ”ಯ ಪ್ರಯುಕ್ತ ಜಿಲ್ಲೆಯಲ್ಲಿ ವಿಶೇಷ ಅಭಿಯಾನ : ಜಿಪಂ ಸಿಇಓ ರಾಹುಲ್ ಶಿಂಧೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪ್ರತಿ ವರ್ಷದಂತೆ, ಈ ವರ್ಷವೂ ಸಹ ಜೂನ್ 5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. “ಜಾಗತಿಕವಾಗಿ ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸುವುದು” (Ending Plastic Pollution Globally) ಎಂಬ ಘೋಷ ವಾಕ್ಯದೊಂದಿಗೆ ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸುವ ಮಹತ್ವವನ್ನು ತಿಳಿಸುವ ಉದ್ದೇಶದೊಂದಿಗೆ ದಿನಾಂಕ 22-05-2025ರಂದು ಮಾನ್ಯ ನಿರ್ದೇಶಕರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಬೆಂಗಳೂರು ರವರು ವಿಡಿಯೋ ಸಂವಾದ ಜರುಗಿಸಿ ಮೇ 22, 2025 ರಿಂದ ಜೂನ್ 5, 2025 ರವರೆಗೆ ಪೂರ್ವ ಅಭಿಯಾನವನ್ನು ಹಮ್ಮಿಕೊಳ್ಳುವಂತೆ ಸಭೆಯಲ್ಲಿ ನಿರ್ದೇಶನ ನೀಡಿರುತ್ತಾರೆ.
ಮುಂದುವರದು, ವಿಶ್ವ ಪರಿಸರ ದಿನಾಚರಣೆಯ ಅಭಿಯಾನದ ಅವಧಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯದಿಂದ ಆಗುವ ದುಷ್ಪರಿಣಾಮಗಳು ಹಾಗೂ ಇದರ ನಿರ್ಮೂಲನೆ ಮಾಡುವ ಸಂಬಂಧ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಗ್ರಾಮ ಪಂಚಾಯತಗಳಲ್ಲಿ ಹಮ್ಮಿಕೊಳ್ಳಲಾಗುತ್ತಿದ್ದು, ಈ ಅಭಿಯಾನದಲ್ಲಿ ಚುನಾಯಿತ ಪ್ರತಿನಿಧಿಗಳು, ಯುವಕರು, ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರು, ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರು, ಸ್ವಯಂ ಸೇವಕರು ಮತ್ತು ಗ್ರಾಮದ ಮುಖಂಡರು ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಜಿಪಂ ಸಿಇಒ ರಾಹುಲ್ ಶಿಂಧೆ ರವರು ಕರೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯು ಸ್ವಚ್ಛ ಭಾರತ್ ಮಿಷನ್(ಗ್ರಾಮೀಣ) ಯೋಜನೆಯ ಘನ ತ್ಯಾಜ್ಯ ನಿರ್ವಹಣಾ ಪ್ರಯತ್ನಗಳ ಪ್ರಮುಖ ಭಾಗವಾಗಿದ್ದು, ಈ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಗ್ರಾಮಗಳನ್ನು ಪ್ಲಾಸ್ಟಿಕ್ ಮುಕ್ತ ಗ್ರಾಮಗಳನ್ನಾಗಿ ರೂಪಿಸಲು ಪ್ರತಿ ಗ್ರಾಮ ಪಂಚಾಯತ ಕ್ರಮವಹಿಸಬೇಕಿದೆ ಎಂದು ತಿಳಿಸಿದರು.
ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಜಿಲ್ಲೆಯ ಎಲ್ಲ ತಾಲೂಕು/ಗ್ರಾಮ ಪಂಚಾಯತಿಗಳಲ್ಲಿ ಈ ಕೆಳಗಿನಂತೆ ವಿಶೇಷ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ./ ಏಕ ಬಳಕೆಯ ಪ್ಲಾಸ್ಟಿಕ್ ತ್ಯಜೀಸುವುದು ಮತ್ತು ಅದರ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು. ಪ್ಲಾಸ್ಟಿಕ್ ಕವರಗಳನ್ನು ಗ್ರಾಹಕರಿಗೆ ನೀಡುವ ಅಂಗಡಿ, ಹೋಟೆಲ್, ಬೇಕರಿ, ಇತರೆ ವಾಣಿಜ್ಯ ಕೇಂದ್ರಗಳಿಗೆ ತಪಾಸಣೆ ಜಲ-ಮೂಗಳ ಸ್ವಚ್ಛಗೊಳಿಸುವುದು ಮತ್ತು ಜಲ-ಮೂಲಗಳ ಸುತ್ತ-ಮುತ್ತ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹವಾಗದಂತೆ ಕ್ರಮಕೈಗೊಳ್ಳುವುದು. ಚರಂಡಿಗಳನ್ನು ಸ್ವಚ್ಛಗೊಳಿಸುವುದು ಹಾಗೂ ಚರಂಡಿಗಳಲ್ಲಿ ತ್ಯಾಜ್ಯ ಮತ್ತು ಪ್ಲಾಸ್ಟಿಕ್ ಎಸೆಯದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು.
ಒಟ್ಟಿನಲ್ಲಿ, ವಿಶ್ವ ಪರಿಸರ ದಿನಾಚರಣೆಯನ್ನು ದಿನಾಂಕ 22-05-2025 ರಿಂದ 05-06-2025ರ ವರೆಗೆ ಜಿಲ್ಲಾದ್ಯಂತ ವಿಶೇಷ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮುಖಾಂತರ ಈ ಅಭಿಯಾನವನ್ನು ಯಶಸ್ವಿಗೊಳಿಸುವಂತೆ ಜಿಪಂ ಸಿಇಓ ರಾಹುಲ್ ಶಿಂಧೆ ರವರು ಎಲ್ಲ ತಾಲೂಕು ಮಟ್ಟದ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.