ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ಬೆಳಗಾವಿ ಜಿಲ್ಲೆಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರರೂ, ಗಾಂಧೀವಾದಿಗಳೂ ಆಗಿದ್ದ ಸೋಮಲಿಂಗಪ್ಪ ಅಪ್ಪಣ್ಣಾ ಮಳಗಲಿ ಅವರು ನಿಧನರಾಗಿದ್ದಾರೆ. ಅವರಿಗೆ ೯೭ ವರ್ಷ ವಯಸ್ಸಾಗಿತ್ತು.
ದೇಶದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಅತ್ಯಂತ ಮಹತ್ವದ ಸ್ಥಾನ ಹೊಂದಿರುವ ಹುದಲಿಯಲ್ಲಿ ಜನಿಸಿದ ಸೋಮಲಿಂಗಪ್ಪನವರು ಕರ್ನಾಟಕ ಸಿಂಹ ಗಂಗಾಧರರಾಯರಿಂದ ಸ್ಫೂರ್ತಿ ಪಡೆದು ತಮ್ಮ ಹದಿನೇಳನೇ ವಯಸ್ಸಿನಲ್ಲೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿದರಲ್ಲದೆ ೧೯೪೨ ರ ಕ್ವಿಟ್ ಇಂಡಿಯಾ ಚಳವಳಿ ಯಲ್ಲೂ ಭಾಗವಹಿಸಿ ಜೇಲುವಾಸ ಅನುಭವಿಸಿದವರಾಗಿದ್ದರು.
ಗಾಂಧೀಜಿಯವರ ಸಹಿತ ಹಲವು ರಾಷ್ಟ್ರೀಯ ನಾಯಕರು ಭೆಟ್ಟಿಕೊಟ್ಟ ಹುದಲಿಯಲ್ಲಿ ಅವರ ಸಹವಾಸ ಪಡೆದ ಮಳಗಲಿಯವರು ತಮ್ಮ ಪೂರ್ತಿ ಆಯುಷ್ಯವನ್ನೇ ಖಾದಿ ಮತ್ತು ದೇಶಭಕ್ತಿಯ ಗಾಂಧೀವಿಚಾರ ಧಾರೆಗೆ ಅರ್ಪಿಸಿಕೊಂಡವರಾಗಿದ್ದರು.
ಬೆಳಗಾವಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟದ ಇತಿಹಾಸದ ವಿಷಯದಲ್ಲಂತೂ ಅವರು ತಾವೇ ಜೀವಂತ ವಿಶ್ವಕೋಶವಾಗಿದ್ದರು. ಅಷ್ಟೇ ಅಲ್ಲ, ಸ್ವಾತಂತ್ರ್ಯ ಸಂಗ್ರಾಮದ ಶತಮಾನೋತ್ಸವ ಸಂಘವನ್ನು ಸ್ಥಾಪಿಸಿ ಬೆಳಗಾವಿಯಲ್ಲಿ ಬಹಳ ಅದ್ದೂರಿಯಾಗಿ ಶತಮಾನೋತ್ಸವವನ್ನು ಆಚರಿಸಿದ್ದರು.
ಆ ಸಂದರ್ಭದಲ್ಲಿ ಅವರು ರಮಗನಾಥ ವಡವಿಯವರ ಜೊತೆ ಸೇರಿ ಸಚಿತ್ರ ಭಾರತ – ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸ ಮತ್ತು ಗಾಂಧಿಜಿ ಎಂಬ ಅತ್ಯಮೂಲ್ಯ ಬೃಹತ್ ಗ್ರಂಥವನ್ನು ಹೊರತಂದರು. ಅದನ್ನು ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಸಹ ಹೊರತರುವ ಸಾಹಸವನ್ನು ಅವರು ಮಾಡಿದರು.
ಜಿಲ್ಲಾ ಆಡಳಿತ ಮತ್ತು ವಿವಿಧ ಸಂಘಸಂಸ್ಥೆಗಳಿಂದ ಗೌರವ ಸನ್ಮಾನಗಳನ್ನು ಪಡೆದಿದ್ದ ಮಳಗಲಿಯವರು ಜಿಲ್ಲೆಯ ಖಾದಿ ಮತ್ತು ಗ್ರಾಮೋದ್ಯೋಗ ಕ್ಷೇತ್ರದ ಬೆಳವಣಿಗೆಗೆ ಅಪಾರವಾಗಿ ಶ್ರಮಿಸಿದವರಾಗಿದ್ದಾರೆ. ನಿಸರ್ಗ ಚಿಕಿತ್ಸೆ ಮತ್ತು ಆಯುರ್ವೇದಗಳಲ್ಲೂ ಅವರಿಗೆ ಪರಿಣಿತಿಯಿತ್ತು.
ಸೋಮಲಿಂಗಪ್ಪ ಮಳಗಲಿಯವರು ಪತ್ನಿ ಗಂಗಮ್ಮ ಮತ್ತು ಒಬ್ಬ ಪುತ್ರ ಶಿವಶಂಕರ ಮತ್ತು ಏಳು ಪುತ್ರಿಯರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಶುಕ್ರವಾರ ತವರೂರಾದ ಹುದಲಿ ಗ್ರಾಮದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ