
ಪ್ರಗತಿವಾಹಿನಿ ಸುದ್ದಿ: ಜೆಡಿಎಸ್ ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೆ ಸಾಬೀತಾಗಿದೆ. ಜೆಡಿಎಸ್ ಹಿರಿಯ ನಾಯಕ, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ವಿರುದ್ಧ ವಾಗ್ದಾಳಿ ನಡೆಸಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ನಮ್ಮೊಂದಿಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ಜಿ.ಟಿ.ದೇವೇಗೌಡರ ಹೆಸರನ್ನು ಪ್ರಸ್ತಾಪ ಮಾಡಬೇಡಿ. ಅವರು ನಮ್ಮೊಂದಿಗಿಲ್ಲ. ಅವರು ಬೇರೆ ಮಹಾನ್ ನಾಯಕರ ಜೊತೆಯಲ್ಲಿದ್ದಾರೆ. ಪಕ್ಷದ ಬಗ್ಗೆ ನಿಯತ್ತು, ನಿಷ್ಠೆ ಇಲ್ಲದವರನ್ನು ಜೊತೆಯಲ್ಲಿಟ್ಟುಕೊಳ್ಳಬೇಕಾ? ಎಂದು ಕಿಡಿಕಾರಿದ್ದಾರೆ.
ನನ್ನ ಮನಸ್ಸಿಗೆ ಬಹಳ ನೋವಾಗುವ ಘಟನೆ ನಡೆದಿದೆ. ನಾನು ರಾಜೀನಾಮೆ ಕೊಡುವ ತಪ್ಪನ್ನು ಏನು ಮಾಡಿದ್ದೆ? ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬಹಳಷ್ಟು ಜನ ಅಭ್ಯರ್ಥಿಗಳು ಇದ್ದಾರೆ. ಬಹಳಷ್ಟು ಜನರನ್ನು ಬೆಳೆಸಿದ್ದೇವೆ, ಮೆರೆಸಿದ್ದೇವೆ ಎಂದು ಹೇಳಿಕೊಳ್ತಾರೆ. ಯಾವಾಗ ಯಾರನ್ನು ಮೆರೆಸುತ್ತಾರೋ ಯಾರಿಗೆ ಗೊತ್ತು. ಈಗ ಯಾರೋ ಒಬ್ಬರನ್ನು ಮೆರೆಸಲು ಜಿಟಿಡಿ ಹೊರಟಿದ್ದಾರೆ ಎಂದು ಗುಡುಗಿದರು.
ಜಿ.ಟಿ.ದೇವೇಗೌಡರಿಗೆ ನಿಯತ್ತು ಇಲ್ಲ.ಚಾಮುಂಡೇಶ್ವರಿ ಕ್ಷೇತ್ರಕ್ಕೂ ನನಗೂ ಭಾವನಾತ್ಮಕ ಸಂಬಂಧ ಇದೆ. ಮುಂಡೇಶ್ವರಿ ಕ್ಷೇತ್ರದಲ್ಲಿ ಯಾರನ್ನೇ ಅಭ್ಯರ್ಥಿ ಮಾಡಿದರೂ ಗೆಲ್ತಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.


