*ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ: ಮಗನಿಂದಲೇ ಕೊಲೆಗೆ ಸುಪಾರಿ; 8 ಆರೋಪಿಗಳ ಬಂಧನ*
ಪ್ರಗತಿವಾಹಿನಿ ಸುದ್ದಿ: ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಮಗ ಸೇರಿ 8 ಆರೋಪಿಗಳನ್ನು ಬಂಧಿಸಿದ್ದಾರೆ.
ಎರಡು ದಿನಗಳ ಹಿಂದೆ ಗದಗ ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಪುತ್ರ ಕಾರ್ತಿಕ್ ಸೇರಿದಂತೆ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ಘಟನೆ ನಡೆದ 48 ಗಂಟೆಗಳಲ್ಲಿ ಪೊಲೀಸರು 8 ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೇ ಮನೆ ಮಗನೇ ಕೊಲೆಗೆ ಸುಪಾರಿ ನೀಡಿದ್ದ ಎಂಬುದನ್ನು ಬಯಲು ಮಾಡಿದ್ದಾರೆ.
ಪ್ರಮುಖ ಆರೋಪಿ ವಿನಾಯಕ್ ಬಾಕಳೆ, ಫೈರೋಜ್ ಖಾಜಿ, ಸಾಹಿಲ್, ಸೋಹೆಲ್, ಸುಲ್ತಾನ್ ಶೇಖರ್, ಜಿಶಾನ್ ಖಾಜಿ, ಮಹೇಶ್ ಸಾಳೊಂಕೆ, ವಾಹಿದ್ ಬೆಪಾರಿ ಸೇರಿದಂತೆ ಒಟ್ಟು 8 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸುನಂದಾ ಬಾಕಳೆ ಪತಿ ಪ್ರಕಾಶ್ ಬಾಕಳೆಯ ಮೊದಲ ಪತ್ನಿಯ ಮಗ ವಿನಾಯಕ್ ಬಾಕಳೆ ತನ್ನ ಸಹೋದರನ ಹತ್ಯೆಗೆ ಸುಪಾರಿ ನೀಡಿ ಕೊಲೆ ಮಾಡಿಸಿದ್ದಾನೆ. ಪ್ರಕಾಶ್ ಬಾಕಳೆ ಮೊದಲ ಪತ್ನಿ ಸಾವಿನ ಬಳಿಕ ಸುನಂದಾರನ್ನು ವಿವಾಹವಾಗಿದ್ದರು. ವಿನಾಯಕ್ ಬಾಕಳೆ ಹೆಸರಲ್ಲಿ ಹಲವು ಆಸ್ತಿಗಳಿದ್ದವು. ವಿನಾಯಕ್, ಪ್ರಕಾಶ್ ಬಾಕಳೆಗೆ ಹೇಳದೇ ಕೆಲ ಆಸ್ತಿ ಮಾರಾಟ ಮಾಡಿದ್ದ. ವಿಷಯ ತಿಳಿಯುತ್ತಿದ್ದಂತೆ ಪ್ರಕಾಶ್ ಬಾಕಳೆ ಮಗ ವಿನಾಯಕ್ ನನ್ನು ಪ್ರಶ್ನಿಸಿದ್ದಾರೆ. ಇಬ್ಬರ ನಡುವೆ ಜಗಳವಾಗಿದೆ. ವಿನಾಯಕ್ ವರ್ತನೆಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದರಂತೆ. ಇದೇ ಕಾರಣಕ್ಕೆ ವಿನಾಯಕ್ ಬಾಕಳೆ ಕಾರ್ತಿಕ್ ಬಾಕಳೆಯನ್ನು ಕೊಲೆ ಮಾಡುವ ಪ್ಲಾನ್ ಮಾಡಿ ಮೀರಜ್ ಮೂಲದವರಿಗೆ ಸುಪಾರಿ ನೀಡಿದ್ದ.
60 ಲಕ್ಷಕ್ಕೆ ಸುಪಾರಿ ನೀಡಿ 2 ಲಕ್ಷ ಮುಂಗಡ ಪಾವತಿ ಮಾಡಿದ್ದ. ಕಾರ್ತಿಕ್ ಮದುವೆ ನಿಶ್ಚಿತಾರ್ಥವಾಗುತ್ತಿದ್ದಂತೆ ಮನೆಯಲ್ಲಿಯೇ ಹಂತಕರು ಕಾರ್ತಿಕ್ ಸೇರಿ ನಾಲ್ವರನ್ನು ಕೊಲೆಗೈದಿದ್ದರು. ಆಸ್ತಿ ವಿಚಾರವಾಗಿಯೇ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ