Latest

ಸತತ ಮೂರು ಬಾರಿ ಗಾಂಧಿ ಗ್ರಾಮ ಪುರಸ್ಕಾರ

     ಕಡತೋಕಾ ಮಂಜು, ಮಂಕಿ ಸತತ ಪರಿಶ್ರಮ… ಕೆಲಸದಲ್ಲಿ ಶೃದ್ಧೆ ಭಕ್ತಿ… ಜನರಿಗೆ ಉಪಕಾರ ಮಾಡಬೇಕೆಂಬ ಮಹದಾಸೆ…. ಸರಕಾರದ ಹಣ ಪೋಲಾಗದಂತೆ ಎಚ್ಚರಿಕೆ…. ಜನರಿಗೆ ಮೂಲಭೂತ ಸೌಕರ್ಯ ಕಲ್ಪಿಸಬೇಕೆಂಬ ಹಂಬಲ ಇವಿಷ್ಟು ಶಾಸಕಾಂಗ ಮತ್ತು ಕಾರ್ಯಾಂಗ ಕೆಲಸ ನಿರ್ವಹಿಸುವವರಿಗೆ ಇದ್ದರೆ ಎಂಥ ಕಠಿಣ ಸ್ಥಿತಿಯಲ್ಲಿಯೂ ನಾವು ಸಾಧನೆ ಮಾಡಬಹುದು ಎಂಬುದಕ್ಕೆ ಇಲ್ಲೊಂದು ಗ್ರಾಮ ಪಂಚಾಯತ್ ನಮ್ಮ ಮುಂದೆ ನಿದರ್ಶನವಾಗಿದೆ. ಹಾಗಿದ್ರೇ ಅದ್ಯಾವ ಗ್ರಾಮ ಪಂಚಾಯತ್ ಅಂತೀರಾ..? ಈ ಸ್ಟೋರಿ ಒಮ್ಮೆ ನೀವು ನೋಡಿ.

ಕೂಸು ಹುಟ್ಟಿ ಈಗಷ್ಟೇ ಐದು ವರ್ಷ ಗತಿಸಿದೆ. ಆದ್ರೆ ಸಾಧನೆ ಮಾತ್ರ ಯಾರು ಮಾಡದೇ ಇರುವಂತದ್ದು. ಸತತ ಮೂರು ಬಾರಿ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿಯನ್ನು ತನ್ನ ಮುಡಿಲೇರಿಸಿಕೊಂಡ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವಂತದ್ದು ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಂಕಿ ಹಳೆಮಠ ಗ್ರಾಮ ಪಂಚಾಯತ್. ಈ ಪಂಚಾಯತ್ ಅತ್ಯಂತ ಕಡಿಮೆ ಅವಧಿಯಲ್ಲಿ ದೊಡ್ಡ ಸಾಧನೆ ಮಾಡುವ ಮೂಲಕ ಸರಕಾರದ ಗಮನಸೆಳೆದಿದೆ. ಗ್ರಾಮದಲ್ಲಿ ರಸ್ತೆ..ಕುಡಿಯುವ ನೀರು ಸೌಲಭ್ಯ.. ಬೀದಿ ದೀಪ.. ಕ್ರೀಡಾಂಗಣ… ಸಮರ್ಪಕ ಘನ ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸಿ ಪ್ರಶಂಸಸೆಗೆ ಪಾತ್ರವಾಗಿದೆ. ಇಷ್ಟೇ ಅಲ್ಲ ತನ್ನ ಬಳಕೆಗೆ ಬೇಕಾದ ವಿದ್ಯುತ್ ನ್ನು ಸೋಲಾರ್ ರೋಪ್ ಟಾಪ್ ಮೂಲಕ ಪಡೆಯುವ ಮೂಲಕ ಸ್ವಾವಲಂಭಿಯಾಗಿದೆ.

           ಒಂದು ಕಾಲದಲ್ಲಿ ಕರ್ನಾಟಕ ರಾಜ್ಯದಲ್ಲಿಯೇ ಎರಡನೇ ದೊಡ್ಡ ಗ್ರಾಮ ಪಂಚಾಯತ್  ಎಂಬ ಹೆಗ್ಗಳಿಕೆಗೆ ಮಂಕಿ ಗ್ರಾಮ ಪಂಚಾಯತ್ ಪಾತ್ರವಾಗಿತ್ತು. ಅತ್ಯಂತ ದೊಡ್ಡ ಗ್ರಾಮ ಪಂಚಾಯತ್ ಆಗಿದ್ದ ಮಂಕಿ ಗ್ರಾಮ ಪಂಚಾಯತನ್ನು 2015ರಲ್ಲಿ ನಾಲ್ಕು ಪಂಚಾಯತ್ ಆಗಿ ವಿಭಜಿಸಿ ಸರಕಾರ ಆದೇಶ ಮಾಡಿತು. ಆಗ ಉದಯವಾದ ಮಂಕಿ ಎ ಹಳೇಮಠ ಗ್ರಾಮ ಪಂಚಾಯತ್ ಮೂರು ಬಾರಿಗೆ ಗಾಂಧೀ ಗ್ರಾಮ ಪುರಸ್ಕಾರ ಪ್ರಶಸ್ತಿಯನ್ನು ಪಡೆಯುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದೆ. 2015ರಲ್ಲಿ ಅಸ್ಥಿತ್ವಕ್ಕೆ ಬಂದ ಮಂಕಿ ಹಳೇಮಠ ಗ್ರಾಮ ಪಂಚಾಯತ್ ಒಂದು ಚಿಕ್ಕ ಅಂಗಡಿ ಮಳಿಗೆಯ ಕಟ್ಟಡದಲ್ಲಿ ಪ್ರಾರಂಭವಾಗಿತ್ತು. ಈಗ ಐದು ವರ್ಷದಲ್ಲಿ ಸ್ವಂತ ಕಟ್ಟಡ ಹೊಂದುವ ಜೊತೆಗೆ ಗ್ರಾಮದಲ್ಲಿ ಮೂಲಭೂತ ಸೌಕರ್ಯ ಒದಗಿಸಿ ಬೇಷ್ ಎನಿಸಿಕೊಂಡಿದೆ.

ಹದಿನೆಂಟು ಸದಸ್ಯರನ್ನು ಹೊಂದಿರುವ ಮಂಕಿ ಹಳೇಮಠ ಗ್ರಾಮ ಪಂಚಾಯತ್ ಜನ ಪ್ರತಿನಿಧಿಗಳು, ಅಧಿಕಾರಿಗಳ ಸಹಕಾರದಿಂದ ಇಂದು ಜಿಲ್ಲೆಯಲ್ಲಿ ಉತ್ತಮ ಗ್ರಾಮ ಪಂಚಾಯತಿಯಾಗಿ ಹೊರಹೊಮ್ಮಿದೆ. ಕೇವಲ 5 ವರ್ಷಗಳಲ್ಲಿ ಕೆಲವು ಉತ್ತಮ ಕೆಲಸ ಮಾಡುವುದರೊಂದಿಗೆ ಮಾದರಿ ಗ್ರಾಮ ಪಂಚಾಯಿತಿ ಆಗಿ ರೂಪಗೊಂಡಿದೆ.  ಪ್ರಥಮ ಬಾರಿಗೆ ಶೌಚಾಲಯ ನಿರ್ಮಾಣದಲ್ಲಿ ಸಾಧಿಸಿದ ಪ್ರಗತಿಗಾಗಿ ಪ್ರಶಸ್ತಿಗೆ ಬಾಜನವಾಗಿದೆ. ಎರಡು ಹಾಗೂ ಮೂರನೇ ವರ್ಷದಲ್ಲಿ ಸಮಪರ್ಕವಾಗಿ ಘನ ತ್ಯಾಜ್ಯ ವಿಲೇವಾರಿಯನ್ನು ಅನುಷ್ಠಾನ ಮಾಡಿರುವ ಕಾರಣ  ಎರಡು ಹಾಗೂ ಮೂರನೇ ಅವಧಿಗೆ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ದೊರಕಿದೆ. ಉತ್ತಮ ಆಡಳಿತ, ನಿಗದಿತ ಅವಧಿಯಲ್ಲಿ ಸಭೆಗಳು, ಸಾರ್ವಜನಿಕರಿಗೆ ಉತ್ತಮ ಸೇವೆ, ಉತ್ತಮವಾದ ಕೆಲಸಗಳು ಸೇರಿದಂತೆ ಪಂಚ ತಂತ್ರ ತಂತ್ರಾಂಶದಲ್ಲಿ ಶೇಕಡಾ ನೂರರಷ್ಟು ದಾಖಲಾತಿ.. ಹೀಗೆ ಗ್ರಾಮ ಪಂಚಾಯಿತಿಯೆಲ್ಲಾ ಸಾಧನೆ ಪರಿಗಣಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನೀಡುವ ಗಾಂಧಿ ಗ್ರಾಮ ಪುರಸ್ಕಾರವನ್ನು ರಾಜ್ಯ ಸರಕಾರದಿಂದ 2017-18, 2018-2019 ಮತ್ತು 2019-2020ರ ಸಾಲಿಗೆ   ಮೂರನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿಯನ್ನು ಮತ್ತೆ ತನ್ನ ಮುಡಿಗೆ ಹಾಕಿಕೊಳ್ಳುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದೆ.

ಇನ್ನು 10 ಲಕ್ಷ ವೆಚ್ಚದಲ್ಲಿ ಕಸ ವಿಲೇವಾರಿ ಘಟಕ, 40 ಲಕ್ಷದ ವೆಚ್ಚದ ಹೊಸ ಗ್ರಾಮ ಪಂಚಾಯತ್ ಕಟ್ಟಡ, ಗ್ರಾಮ ಪಂಚಾಯತನಿಂದಲೇ ಪ್ರಾರಂಭಿಸಿದ ಗ್ರಂಥಾಲಯ, ಪ್ರತಿ ವಾರ್ಡನಲ್ಲಿಯೂ ಉತ್ತಮ ಗುಣ ಮಟ್ಟದ ರಸ್ತೆ ಚರಂಡಿ ನಿರ್ಮಿಸಲಾಗಿದೆ.  ಎಂಟು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಹಳೇಮಠ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರತಿನಿತ್ಯ ತ್ಯಾಜ್ಯವನ್ನು ರಸ್ತೆ ಪಕ್ಕ.. ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಚರಂಡಿಗಳಲ್ಲಿ ಎಸೆಯುವ ಮೂಲಕ ದೂರುಗಳು ಬರುತ್ತಿದ್ದವು. ಇದನ್ನು ಪರಿಗಣಿಸಿದ ಗ್ರಾಮ ಪಂಚಾಯತ್ ಆಡಳಿತ ಘನ ತ್ಯಾಜ್ಯ ಘಟಕಕ್ಕೆ ಸ್ಥಳವನ್ನು ಗುರುತಿಸಿತು. ಗ್ರಾಮ ಪಂಚಾಯತ್ ಗುರುತಿಸಿದ ಜಾಗ ಆರಂಭದಲ್ಲಿ ಸಮಸ್ಯೆ ಇತ್ತು. ಬಳಿಕ ಇದನ್ನು ಸರಿಯಾಗಿ ಅನುಷ್ಠಾನ ಮಾಡಲೇ ಬೇಕೆಂದು ಪಣ ತೊಟ್ಟ ಗ್ರಾಮ ಆಡಳಿತ ಊರಿನ ಮಧ್ಯ ಹಾಗೂ ಪಂಚಾಯತ್ ಪಕ್ಕದಲ್ಲೇ ಇರುವ ಅತ್ಯಂತ ಚಿಕ್ಕ ಜಾಗವನ್ನು ಆಯ್ಕೆ ಮಾಡಿತು. ಬಳಿಕ ಪ್ರತಿನಿತ್ಯ ಗ್ರಾಮದಲ್ಲಿ ತ್ಯಾಜ್ಯವನ್ನು ಸಂಗ್ರಹಿಸುವ ಮೂಲಕ ಘಟಕದಲ್ಲಿ ವಿಗಂಡಣಾ ಪ್ರಕ್ರಿಯೆ ಆರಂಭಿಸಿತು.  ಇಂದು ಈ ಘನ ತ್ಯಾಜ್ಯ ಘಟಕ ಜಿಲ್ಲೆಯಲ್ಲಿಯೇ ವಿಶಿಷ್ಟವಾಗಿ   ಕಾರ್ಯನಿರ್ವಹಿಸುತ್ತಿದೆ. ಅಲ್ಲದೇ ಉತ್ತಮವಾದ ದಾರಿ ದೀಪದ ಲೈಟ್ ವ್ಯವಸ್ಥೆ ಮಾಡಲಾಗಿದೆ. ಉದ್ಯೋಗ ಖಾತರಿ ಯೋಜನೆಯಲ್ಲಿ ಶಾಲೆಗಳಲ್ಲಿ ಉದ್ಯಾನವನ ಮತ್ತು ಆಟದ ಮಯದಾನ ಕಂಪೌಂಡ್ ನಿರ್ಮಿಸಲಾಗಿದೆ. ಬೇಸಿಗೆ ಕಾಲದಲ್ಲಿ ಉತ್ತಮ ಕುಡಿಯುವ ನೀರಿನ ಪೂರೈಕೆ, ಸೋಲಾರ್ ರೋಪ್ ಟಾಪ್ ಅಳವಡಿಸಿರುವುದು, ಸೋಲಾರ ಬೀದಿ ದೀಪಗಳನ್ನು ಅಳವಡಿಸಿರುವುದು, ಸಶ್ಮಾನಗಳ ಅಭಿವೃದ್ಧಿಪಡಿಸಲಾಗಿದೆ. ಐದು ವರ್ಷಗಳಲ್ಲಿ ಜನಪ್ರತಿನಿಧಿಗಳ ಸಹಕಾರ, ದಾನಿಗಳ ನೆರವಿನಿಂದ ಉತ್ತಮವಾದ ಕಾಂಕ್ರೀಟ್ ರಸ್ತೆ, ಚರಂಡಿ ಮತ್ತು ಸೇತುವೆಗಳನ್ನು ನಿರ್ಮಿಸಲಾಗಿದೆ.

ಇಷ್ಟಕ್ಕೂ ಮಂಕಿ ಹಳೇಮಠ ಗ್ರಾಮ ಪಂಚಾಯತ್ 2015ರಲ್ಲಿ ಅಸ್ಥಿತ್ವಕ್ಕೆ ಬಂದಿದೆ. ಆರಂಭದಲ್ಲಿ ದೊಡ್ಡ ಗ್ರಾಮ ಪಂಚಾಯತ್ ಆಗಿದ್ದ ಮಂಕಿ ಗ್ರಾಮ ಪಂಚಾಯತ್ ನ್ನು ನಾಲ್ಕು ಪಂಚಾಯತ್ ಆಗಿ ವಿಭಜಿಸಲಾಗಿದೆ. ಮಂಕಿ ಹಳೇಮಠ, ಗುಳದಕೇರಿ, ಅನಂತವಾಡಿ ಮತ್ತು ಚಿತ್ತಾರ ಗ್ರಾಮ ಪಂಚಾಯತ್ ಆಗಿ ವಿಭಾಗಿಸಲಾಗಿದೆ. 8 ಸಾವಿರ ಜನಸಂಖ್ಯೆಯನ್ನು ಹೊಂದಿದೆ. ಹೀಗೆ ಸತತ ಸಾಧನೆ ಮಾಡಿರುವುದಕ್ಕೆ ಕಾರಣರಾದವರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಣ್ಣಪ್ಪ ಮುಕ್ರಿ ಹಾಗೂ ನಿಕಟಪೂರ್ವ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರು. ಇವರಿಗೆ ಹಿರಿಯ ಅಧಿಕಾರಿಗಳು ಮತ್ತು ಪಂಚಾಯತ್ ಸದಸ್ಯರ ಬೆಂಬಲದೊಂದಿದೆ ಗ್ರಾಮ ಪಂಚಾಯತ್ ಕಡಿಮೆ ಅವಧಿಯಲ್ಲಿ ದೊಡ್ಡ ಸಾಧನೆ ಮಾಡಿದೆ.  ಗ್ರಾಮ ಪಂಚಾಯತ್ ಆಡಳಿತಕ್ಕೆ ಗ್ರಾಮದ ಪ್ರತಿಯೊಬ್ಬ ಸಾರ್ವಜನಿಕರು ಬೆಂಬಲ ನೀಡುತ್ತಿರುವುದರಿಂದ ಅಭಿವೃದ್ಧಿಗೆ ಇನ್ನಷ್ಟು ಸಹಕಾರಿಯಾಗಿದೆ. ಪಂಚಾಯತ್ ಕಟ್ಟಡ ಕೂಡ ಸರಕಾರ ಪ್ಲಾನ್ ನಂತೆ ಮಾಡಲಾಗಲಿಲ್ಲ. ಗ್ರಾಮದ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸುವ ಉದ್ಧೇಶದೊಂದಿಗೆ ಕಟ್ಟಡ ಮಾಡಲಾಗಿದೆ.  ಬಿಲ್ ಕಲೆಕ್ಟರ್, ವಾಟರ್ ಮನ್ ಸೇರಿದಂತೆ ಪ್ರತಿಯೊಬ್ಬ ನೌಕರರು ಇಲ್ಲಿ ಸಾರ್ವಜನಿಕರೊಂದಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿರುವುದರಿಂದ  ಸರಕಾರ ಪ್ರತಿಯೊಂದು ಯೋಜನೆಯೂ ಇಲ್ಲಿ ಅನುಷ್ಠಾನಕ್ಕೆ ಬರುತ್ತಿದೆ.

ಒಟ್ಟಿನಲ್ಲಿ ಕಡಿಮೆ ಅವಧಿಯಲ್ಲಿ ಹಿರಿಯ ಸಾಧನೆ ಮಾಡಿರುವ ಮಂಕಿ ಹಳೇಮಠ ಗ್ರಾಮ ಪಂಚಾಯತ್ ಇನ್ನಷ್ಟು ಪ್ರಶಸ್ತಿಗೆ ಬಾಜನವಾಗಲಿ ಅನ್ನೋದು ನಮ್ಮ ಆಶಯ…

 (ಲೇಖಕರು – ಮಾಹಿತಿ ಶಿಕ್ಷಣ ಸಂವಹನ, ಸಮಾಲೋಚಕರು, ಜಿಲ್ಲಾ ಪಂಚಾಯತ್, ಉತ್ತರಕನ್ನಡ)

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button